ಹಬ್ಬದ ಮುನ್ನಾದಿನದಿಂದಲೇ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿತ್ತು. ಹೊಸ ಬಟ್ಟೆ, ಸಿಹಿತಿಂಡಿ, ಹೂವು, ಹಣ್ಣು, ಪೂಜಾ ಸಾಮಗ್ರಿ, ಅಲಂಕಾರಿಕ ವಸ್ತುಗಳು ಹಾಗೂ ಹಣತೆಗಳ ಖರೀದಿಗೆ ಜನರು ಮುಗಿಬಿದ್ದಿದ್ದರು.

ಕಾರವಾರ: ಕತ್ತಲನ್ನು ಸರಿಸಿ ಬೆಳಕನ್ನು ಹರಡುವ ಬೆಳಕಿನ ಹಬ್ಬ ದೀಪಾವಳಿಯನ್ನು ಜಿಲ್ಲಾದ್ಯಂತ ಜನರು ಸಂಭ್ರಮ, ಸಡಗರದಿಂದ ಆಚರಿಸುತ್ತಿದ್ದಾರೆ. ಹಬ್ಬದ ಹಿನ್ನೆಲೆ ನಗರ, ಪಟ್ಟಣಗಳು ವಿದ್ಯುದ್ದೀಪಗಳ ಅಲಂಕಾರದಿಂದ ಕಂಗೊಳಿಸಿದರೆ, ಮನೆ- ಮನೆಗಳಲ್ಲೂ ದೀಪಗಳ ಬೆಳಕು ಹಬ್ಬದ ಮೆರುಗನ್ನು ಹೆಚ್ಚಿಸಿದೆ.ದೀಪಾವಳಿ ಹಬ್ಬದ ಅಂಗವಾಗಿ ಜಿಲ್ಲೆಯ ಪ್ರಮುಖ ನಗರ ಹಾಗೂ ಪಟ್ಟಣಗಳ ರಸ್ತೆಗಳು, ವೃತ್ತಗಳು, ವಾಣಿಜ್ಯ ಮಳಿಗೆಗಳು ಬಣ್ಣಬಣ್ಣದ ವಿದ್ಯುದ್ದೀಪಗಳಿಂದ ಕಂಗೊಳಿಸುತ್ತಿವೆ. ವಿವಿಧ ವಿನ್ಯಾಸದ ದೀಪಾಲಂಕಾರಗಳು ನೋಡುಗರ ಕಣ್ಮನ ಸೆಳೆಯುತ್ತಿವೆ. ಮನೆಗಳ ಮುಂದೆ ಬಣ್ಣಬಣ್ಣದ ರಂಗೋಲಿ ಬಿಡಿಸಿ, ಹಣತೆಗಳನ್ನು ಬೆಳಗಿಸಿ ಸಂಭ್ರಮಿಸಲಾಗುತ್ತಿದೆ. ಕತ್ತಲಾಗುತ್ತಿದ್ದಂತೆ ಮನೆಗಳ ಅಂಗಳ, ಮಹಡಿ, ತುಳಸಿ ಕಟ್ಟೆಗಳಲ್ಲಿ ಸಾಲು ಸಾಲು ಹಣತೆಗಳು ಬೆಳಗುತ್ತಿದ್ದುದು ಹಬ್ಬದ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ.ಹಬ್ಬದ ಮುನ್ನಾದಿನದಿಂದಲೇ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿತ್ತು. ಹೊಸ ಬಟ್ಟೆ, ಸಿಹಿತಿಂಡಿ, ಹೂವು, ಹಣ್ಣು, ಪೂಜಾ ಸಾಮಗ್ರಿ, ಅಲಂಕಾರಿಕ ವಸ್ತುಗಳು ಹಾಗೂ ಹಣತೆಗಳ ಖರೀದಿಗೆ ಜನರು ಮುಗಿಬಿದ್ದಿದ್ದರು. ಬಟ್ಟೆ ಅಂಗಡಿಗಳು, ಪಟಾಕಿ ಮಳಿಗೆಗಳು ಸೇರಿದಂತೆ ವಿವಿಧ ವ್ಯಾಪಾರ ಮಳಿಗೆಗಳಲ್ಲಿ ಜನದಟ್ಟಣೆ ಕಂಡುಬಂದಿತು. ಹಬ್ಬದ ಹಿನ್ನೆಲೆ ವ್ಯಾಪಾರ- ವಹಿವಾಟು ಕೂಡ ಚುರುಕುಗೊಂಡಿದ್ದು, ವರ್ತಕರ ಮೊಗದಲ್ಲಿ ಸಂತಸ ಮೂಡಿಸಿತ್ತು.ಮಕ್ಕಳಿಂದ ಹಿಡಿದು ಹಿರಿಯರ ವರೆಗೆ ಎಲ್ಲರೂ ಹೊಸ ಬಟ್ಟೆಗಳನ್ನು ಧರಿಸಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಕುಟುಂಬದ ಸದಸ್ಯರು ಒಟ್ಟಾಗಿ ಪೂಜೆ ಸಲ್ಲಿಸಿ, ಸಿಹಿ ಹಂಚಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಮನೆಗಳ ಮುಂದೆ ಹಣತೆಗಳ ಸಾಲು, ಒಳಾಂಗಣದಲ್ಲಿ ದೀಪಾಲಂಕಾರ, ಸಿಹಿತಿಂಡಿಗಳ ಸವಿ ಹಬ್ಬದ ಸಂಭ್ರಮಕ್ಕೆ ವಿಶೇಷ ಕಳೆ ನೀಡಿತು.ಇನ್ನೊಂದೆಡೆ, ಸಂಜೆ ಹಾಗೂ ರಾತ್ರಿ ವೇಳೆ ಪಟಾಕಿಗಳ ಸದ್ದು ಜಿಲ್ಲಾದ್ಯಂತ ಮಾರ್ದನಿಸಿತು. ಬಣ್ಣಬಣ್ಣದ ಚಿತ್ತಾರ ಮೂಡಿಸುವ ಪಟಾಕಿಗಳು ಆಕಾಶದಲ್ಲಿ ಬೆಳಕಿನ ಲೋಕವನ್ನೇ ಸೃಷ್ಟಿಸಿದವು. ಮಕ್ಕಳ ಉತ್ಸಾಹ, ಕುಟುಂಬಗಳ ಸಂಭ್ರಮ, ಮಾರುಕಟ್ಟೆಯ ಗದ್ದಲ ಹಾಗೂ ಎಲ್ಲೆಡೆ ಹರಡಿದ ದೀಪಗಳ ಬೆಳಕು ಒಟ್ಟಾಗಿ ಜಿಲ್ಲಾದ್ಯಂತ ದೀಪಾವಳಿಯ ಬಣ್ಣದ ಲೋಕವನ್ನೆ ಸೃಷ್ಟಿಸಿದೆ.ಬೆಳಕಿನ ಹಬ್ಬದ ಸಂಭ್ರಮದಲ್ಲಿ ಜಾತಿ, ಮತ, ಧರ್ಮಗಳ ಭೇದ ಮರೆತು ಜನರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಸೌಹಾರ್ದತೆಯ ಸಂದೇಶ ಸಾರಿದರು. ಒಟ್ಟಿನಲ್ಲಿ ದೀಪಗಳ ಬೆಳಕು, ಹೊಸ ಬಟ್ಟೆಗಳ ಮೆರುಗು, ಸಿಹಿತಿಂಡಿಗಳ ಸವಿ, ಪಟಾಕಿಗಳ ಅಬ್ಬರದೊಂದಿಗೆ ಜಿಲ್ಲೆಯಲ್ಲಿ ದೀಪಾವಳಿ ಹಬ್ಬ ಸಡಗರದಿಂದ ನಡೆಯುತ್ತಿದೆ.

ಗೋಕರ್ಣ: ಬೆಳಕಿನ ಹಬ್ಬ ದೀಪಾವಳಿಯ ಲಕ್ಷ್ಮೀ ಪೂಜೆ ಈ ಭಾಗದಲ್ಲಿ ಭಾನುವಾರ ನಡೆಯಿತು. ಇಲ್ಲಿನ ಅಂಗಡಿಗಳು, ಖಾಸಗಿ ಸಂಘ, ಸಂಸ್ಥೆಗಳಲ್ಲಿ ಮಾವಿನ ತೋರಣ, ಹೂವುಗಳಿಂದ ಅಲಂಕರಿಸಿ ವಿಶೇಷ ಪೂಜೆ ನೆರವೇರಿಸಿ, ಉತ್ತಮ, ವ್ಯಾಪಾರ ವಹಿವಾಟು ನಡೆಯಲಿ ಎಂದು ಪ್ರಾರ್ಥಿಸಲಾಯಿತು. ನಂತರ ಜನರಿಗೆ ಸಿಹಿ ವಿತರಿಸಿ ಹಬ್ಬದ ಶುಭಾಶಯ ಕೋರಿದರು. ಇದರಂತೆ ಪ್ರತಿ ಮನೆಯಲ್ಲಿ ಸಂಪತ್ತು ವೃದ್ಧಿಸಿ, ಸುಖ ಶಾಂತಿ ನೆಮ್ಮದಿ ಕೋರಿ ಪೂಜೆ ನಡೆಯಿತು. ಮನೆಯಲ್ಲಿರುವ ವಾಹನ, ವಿವಿಧ ಉಪಕರಣಗಳಿಗೆ ಹೂವಿನಿಂದ ಶೃಂಗರಿಸಿ ವಂದಿಸಲಾಯಿತು.