ಅಳಗವಾಡಿ ಗ್ರಾಮದಲ್ಲಿ ಸಂತ ಜ್ಞಾನೇಶ್ವರ ಮಹಾರಾಜರ 13ನೇ ವರ್ಷದ ಸಾಮೂಹಿಕ ಪಾರಾಯಣ (ಭಗವದ್ಗೀತಾ) ಮತ್ತು ಸಂತಶ್ರೇಷ್ಠ ಸೋಪಾನಕಾಕಾರವರ ಪುಣ್ಯತಿಥಿ ಕಾರ್ಯಕ್ರಮ ಗುರುವಾರ ಸಡಗರದಿಂದ ಜರುಗಿತು.
ನವಲಗುಂದ:
ತಾಲೂಕಿನ ಅಳಗವಾಡಿ ಗ್ರಾಮದಲ್ಲಿ ಸಂತ ಜ್ಞಾನೇಶ್ವರ ಮಹಾರಾಜರ 13ನೇ ವರ್ಷದ ಸಾಮೂಹಿಕ ಪಾರಾಯಣ (ಭಗವದ್ಗೀತಾ) ಮತ್ತು ಸಂತಶ್ರೇಷ್ಠ ಸೋಪಾನಕಾಕಾರವರ ಪುಣ್ಯತಿಥಿ ಕಾರ್ಯಕ್ರಮ ಗುರುವಾರ ಸಡಗರದಿಂದ ಜರುಗಿತು.ಗ್ರಾಮದದಲ್ಲಿ ಬೆಳಗ್ಗೆಯಿಂದ ದಿಂಡಿ ಸೋಹಳಾ ಗ್ರಾಮ ಪ್ರದಕ್ಷಿಣೆ, 108 ಕುಂಭ ಹಾಗೂ 108 ಆರತಿ, ಆಳಂದಿ ಮಾವುಲಿ ಕುದುರೆ ಹಾಗೂ ತುಕಾರಾಮ ಪವಾರ ಗುರೂಜಿ ಕೊಲ್ಲಾಪೂರ ಮತ್ತು ವಾರಕರಿ ಶಿಕ್ಷಣ ಸಂಸ್ಥೆ ಕೊಲ್ಲಾಪೂರ ವಿದ್ಯಾರ್ಥಿ ಬಳಗದವರಿಂದ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಭಜನೆಯೊಂದಿಗೆ ಭವ್ಯ ಮೆರವಣಿಗೆ ನಡೆಸಲಾಯಿತು.
ಗ್ರಾಮದ ಎಲ್ಲ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆಯು ಮೂಲ ದೇವಸ್ಥಾನಕ್ಕೆ ಆಗಮಿಸಿತು. ಸಾಮೂಹಿಕ ಭಜನೆ, ವಾದ್ಯ ವೃಂದದ ಕೈಚಳಕ ಮೆರುಗು ನೀಡಿದವು. ಡಿ. 11ರಿಂದ ದೇವಸ್ಥಾನದಲ್ಲಿ ಕೀರ್ತನೆ ಮತ್ತು ಧಾರ್ಮಿಕ ಪಾಠಗಳು ನಡೆದವು. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆಳಂದದ ಮಾವುಲಿ ಕುದುರೆಗಳಿಂದ ರಂಗಿನ ಆಟ ಹಾಗೂ ತಾಳಕರಿ ಅವರಿಂದ ವಿವಿಧ ಕಾರ್ಯಕ್ರಮ ಜರುಗಿದವು. ವಿವಿಧ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಭಕ್ತರು ಮತ್ತು ಮಹಿಳೆಯರು ಪ್ರತಿ ದಿನ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ದೇವರ ಹರಕೆ ತೀರಿಸಿದರು. ಗುರುವಾರ ಮಂಗಳಾರತಿ ಬಳಿಕ ದಿಂಡಿ ಉತ್ಸವ ಸಂಪನ್ನಗೊಂಡಿತು.ತಾಲೂಕಿನ ಶಿರಕೋಳ ಗ್ರಾಮದ ರಾಮಕೃಷ್ಣ ಹಂಬರ ಅವರು ವ್ಯಾಸಪೀಠ ಉಪಸ್ಥಿತರಾಗಿ ಸಂತ ಜ್ಞಾನೇಶ್ವರಿ ಪಾರಾಯಣ ನಡೆಸಿಕೊಟ್ಟರು. ಗೋವಿಂದರಡ್ಡಿ ಅಣ್ಣಿಗೇರಿ ಅವರಿಂದ ವೀಣಾ ಸೇವೆ ಹಾಗೂ ಅಳಗವಾಡಿ ಗ್ರಾಪಂ ಮಾಜಿ ಉಪಾಧ್ಯಕ್ಷ ಭೀಮನಗೌಡ (ರಾಜು) ರಾಟಿಮನಿ ವಸ್ತ್ರದಾನ ಮಾಡಿದರು. ದಿಂಡಿ ಮಾಲೀಕ ರಾಮಚಂದ್ರ ಅಣ್ಣಿಗೇರಿ, ಫಕೀರಪ್ಪ ಸವದತ್ತಿ, ಕಲ್ಲಪ್ಪ ಬೆಳವಣಕಿ, ಡಿ.ಎನ್. ಪಾಟೀಲ, ಬಸಪ್ಪ ಬೆಳವಣಕಿ, ಬಸವರಾಜ ಹಿರೇಹಾಳ, ಬಸವರಾಜ ಹದ್ಲಿ, ಸಂಗಮೇಶ ಕತ್ತಿ, ಹವಾಲ್ದಾರ್‌ಗಳಾದ ಶ್ರೀಕಾಂತ ತಟ್ಟಿ, ಶಿವಪುತ್ರಪ್ಪ ಕುರಿ, ಮಾಯಪ್ಪ ಚುಂಚನೂರ ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡಿದ್ದರು.