ಸಂಭ್ರಮದ ವಿಜಯದಶಮಿ, ದಸರಾ ಆಚರಣೆ

| Published : Oct 03 2025, 01:07 AM IST

ಸಾರಾಂಶ

ದಸರಾ ಹಬ್ಬದಂಗವಾಗಿ ನಗರದ ಗೋಕುಲ ರಸ್ತೆ, ಲಿಂಗರಾಜ ನಗರ ಸೇರಿದಂತೆ ವಿವಿಧೆಡೆ ದೇವಿ ಪ್ರತಿಷ್ಠಾಪನೆ ಮಾಡಿದ್ದ ದೇವಿ ಮೂರ್ತಿ ವಿಸರ್ಜನೆ ಮಾಡಲಾಯಿತು. ದಸರಾ ಕೊನೆದಿನ ಗುರುವಾರ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯಿತು.

ಹುಬ್ಬಳ್ಳಿ:

ದುಷ್ಟ ಶಕ್ತಿಗಳ ಮೇಲೆ ದೈವದ ವಿಜಯದ ಸಂಕೇತವಾದ ವಿಜಯದಶಮಿ ಮತ್ತು ದಸರಾ ಹಬ್ಬವನ್ನು ಶ್ರದ್ಧಾ-ಭಕ್ತಿ, ಸಡಗರ, ಸಂಭ್ರಮದಿಂದ ಗುರುವಾರ ಆಚರಿಸಲಾಯಿತು.

ಹಬ್ಬದಂಗವಾಗಿ ಪ್ರತಿ ಮನೆಯಲ್ಲಿ ದುರ್ಗಾದೇವಿ ಪೂಜೆ, ವಾಹನ, ಆಯುಧ ಹಾಗೂ ಇತರ ಯಂತ್ರೋಪಕರಣಗಳಿಗೆ ಹೂವಿನ ಹಾರ, ಕಬ್ಬು, ಜೋಳದ ದಂಡು, ಬನ್ನಿ ತಪ್ಪಲು ಸೇರಿದಂತೆ ವಿವಿಧ ವಸ್ತುಗಳಿಂದ ವಿಶೇಷ ಪೂಜೆಗಳು ನಡೆದವು.

ದಿನವಿಡಿ ಭಕ್ತರು ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು. ನಗರದ ದುರ್ಗಾದೇವಿ, ಲಕ್ಷ್ಮೀದೇವಿ, ಕಾಳಿಕಾ ದೇವಸ್ಥಾನ, ಕರಿಯಮ್ಮ ದೇವಸ್ಥಾನ, ಬನಶಂಕರಿ ದೇವಸ್ಥಾನ, ಚೆನ್ನಪೇಟೆಯ ಬನ್ನಿ ಮಹಾಕಾಳಿ ದೇವಸ್ಥಾನ ಹಾಗೂ ಶ್ರೀಸಿದ್ಧಾರೂಢಮಠ, ಮೂರುಸಾವಿರ ಮಠ, ಉಣಕಲ್ ಸಿದ್ಧಪ್ಪಜ್ಜನ ಮಠ, ಎರಡೆತ್ತಿನಮಠ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಅಂಗಡಿ-ಮುಂಗಟ್ಟುಗಳಲ್ಲಿ ಆಯುಧಗಳ ಪೂಜೆ ನೆರವೇರಿಸಲಾಯಿತು. ವಾಹನಗಳು, ಕೃಷಿ ಉಪಕರಣ, ವಾಹನಗಳಿಗೆ ಪೂಜೆ ಸಲ್ಲಿಸಲಾಯಿತು. ಚನ್ನಪೇಟೆಯಲ್ಲಿ ವಿಜಯದಶಮಿ ಅಂಗವಾಗಿ ಪಲ್ಲಕ್ಕಿ ಉತ್ಸವ ನಡೆಯಿತು. ಇಲ್ಲಿನ ಬನ್ನಿ ಮಹಾಕಾಳಿ ದೇವಸ್ಥಾನದಲ್ಲಿ ವಿಜಯದಶಮಿ ಅಂಗವಾಗಿ ಉಡಿ ತುಂಬುವ, ಬಳಿಕ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯಿತು. ಇಲ್ಲಿನ ಸಿದ್ಧರೂಢ ಮಠದಲ್ಲಿ ವಿಜಯದಶಮಿ ನಿಮಿತ್ತ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಇಲ್ಲಿಯ ದುರ್ಗದ ಬೈಲ್ ಗೌಳಿಗಲ್ಲಿಯ ವೆಂಕಟೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ರಥೋತ್ಸವ ಜರುಗಿತು. ಈ ವೇಳೆ ತೊರವಿಗಲ್ಲಿಯ ಭಗವದ್ಗೀತಾ ಭಜನಾ ಮಂಡಳಿ ಅಧ್ಯಕ್ಷೆ ಸುರೇಖಾ ಕುಲಕರ್ಣಿ ನೇತೃತ್ವದಲ್ಲಿ ಭಜನೆ, ನೃತ್ಯ, ಕೋಲಾಟ ಜರುಗಿದವು. ಗುಡಿ ಬಂಧುಗಳ ನೇತೃತ್ವದಲ್ಲಿ ರಥೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು.

ದಸರಾ ಹಬ್ಬದಂಗವಾಗಿ ನಗರದ ಗೋಕುಲ ರಸ್ತೆ, ಲಿಂಗರಾಜ ನಗರ ಸೇರಿದಂತೆ ವಿವಿಧೆಡೆ ದೇವಿ ಪ್ರತಿಷ್ಠಾಪನೆ ಮಾಡಿದ್ದ ದೇವಿ ಮೂರ್ತಿ ವಿಸರ್ಜನೆ ಮಾಡಲಾಯಿತು. ದಸರಾ ಕೊನೆದಿನ ಗುರುವಾರ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯಿತು. ಮಹಿಳೆಯರು, ಮಕ್ಕಳು, ಯುವಕ-ಯುವತಿಯರು ಹೊಸ ಬಟ್ಟೆ ಧರಿಸಿ, ವಿಶೇಷ ಅಲಂಕಾರ ಮಾಡಿಕೊಂಡು ತಮ್ಮ ಸ್ನೇಹಿತರು, ಬಂಧು-ಬಳಗ ಹಾಗೂ ನೆರೆಹೊರೆಯವರ ಮನೆಗೆ ಹೋಗಿ ಬನ್ನಿ ನೀಡುವ ಮೂಲಕ ಬನ್ನಿ ತಗೊಂಡ್ ಬಂಗಾರದಂಗ ಇರೋಣ’ ಎಂದು ಪರಸ್ಪರ ಶುಭಾಶಯ ಕೋರಿದರು.

ಹುಲಿಗೆಮ್ಮ ದೇವಸ್ಥಾನದಲ್ಲಿ ಪಲ್ಲಕ್ಕಿ ಉತ್ಸವ:

ಇಲ್ಲಿಯ ಅರವಿಂದ ನಗರದ ಶ್ರೀಹುಲಿಗೆಮ್ಮದೇವಿ ದೇವಸ್ಥಾನದಲ್ಲಿ ಗುರುವಾರ ವಿಜಯದಶಮಿ ನಿಮಿತ್ತ ಹುಲಿಗೆಮ್ಮದೇವಿಗೆ ಅಮೃತಗಳಿಗೆಯಲ್ಲಿ ಮಹಾಭಿಷೇಕ ಮಾಡಲಾಯಿತು. ವಿವಿಧ ಪುಷ್ಪಗಳಿಂದ ಅಲಂಕರಿಸಿ ಮುತ್ತೈದೆಯರಿಂದ ಅರಿಶಿಣ, ಕುಂಕುಮ, 108 ತುಪ್ಪದ ಬತ್ತಿಯ ಆರತಿಯಿಂದ ಉದಯಪೂಜೆ ನೆರವೇರಿಸಲಾಯಿತು. ನಂತರ ವಿವಿಧ ಪುಷ್ಪಗಳಿಂದ ಅಲಂಕರಿಸಿದ ಪಲ್ಲಕ್ಕಿಯಲ್ಲಿ ಹುಲಿಗೆಮ್ಮದೇವಿಯವರ ಉತ್ಸವ ಮೂರ್ತಿಯನ್ನಿರಿಸಿ, ಬೆಳಗ್ಗೆ 9ಕ್ಕೆ ಡೊಳ್ಳುಗಳೊಂದಿಗೆ ಭವ್ಯ ಮೆರವಣಿಗೆ ಹೊರಟು ಅರವಿಂದ ನಗರದ ಕೆಎಚ್‌ಬಿ ಕಾಲನಿಯಲ್ಲಿರುವ ಬನ್ನಿಮಹಾಂಕಾಳಿ ದೇವಸ್ಥಾನಕ್ಕೆ ಹೋಗಿ ಪೂಜೆ ಕೈಂಕರ್ಯ ನೆರವೇರಿಸಿ ಬನ್ನಿ ಮುಡಿದು ಪುನಃ ಮೂಲ ದೇವಸ್ಥಾನಕ್ಕೆ ಆಗಮಿಸಿತು.

ದೇವಸ್ಥಾನದ ಪ್ರಧಾನ ಅರ್ಚಕ ರವಿಕುಮಾರ ಮಡ್ಡಿ ನವರಾತ್ರಿಯಲ್ಲಿ ಜರುಗಿದ ‘ಶ್ರೀ ದೇವಿ ಮಹಾತ್ಮೆ ಪುರಾಣ’ವನ್ನು ಮಂಗಲ ಮಾಡಿದರು. ನಂತರ ಶ್ರೀದೇವಿಯವರಿಗೆ ಮಹಾಮಂಗಳಾರತಿ ನೆರವೇರಿಸಲಾಯತು. ಈ ವೇಳೆ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಸಂಜೆ 7.30ಕ್ಕೆ ದೇವಿಯವರಿಗೆ ಮಹಾ ಪೂಜೆಯ ಮಹಾಮಂಗಳಾರತಿ ನೆರವೇರಿಸುವುದರೊಂದಿಗೆ 2025ನೇ ಸಾಲಿನ ದಸರಾ ಮಹೋತ್ಸವ ಕಾರ್ಯಕ್ರಮ ಸಮಾರೋಪಗೊಂಡವು.

ಮಾತೋಶ್ರೀ ಡಾ. ಹುಲಿಗೆಮ್ಮ ಪೋಸಾ ಅಮ್ಮನವರು ಸಾನ್ನಿಧ್ಯ ವಹಿಸಿದ್ದರು. ಹಿರಿಯರಾದ ಕೆ.ಕೆ. ಮುಳಗುಂದ, ಎಚ್.ಬಿ. ಧೂಪದ, ಬಸವಂತಪ್ಪ ಅನವಾಲ, ಅರುಣಕುಮಾರ ಹೆಬ್ಬಳ್ಳಿ, ಪ್ರಕಾಶ ಅರಗಂಜಿ, ಶ್ರೀಧರ ಮಗಜಿಕೊಂಡಿ, ಲಕ್ಷ್ಮಣ ವಡ್ಡರ, ಪರಶುರಾಮ ಸುಳ್ಳದ, ಸಂದೀಪ ಬೇವಿನಕಟ್ಟಿ, ಯಲ್ಲಪ್ಪ ಕೊಸಗಿ, ಗುರುನಾಥ ಗಾಂವಕರ, ಮಲ್ಲು ಅನಂತಪುರ ಸೇರಿದಂತೆ ಹಲವರು ಭಾಗವಹಿಸಿದ್ದರು.