ಸಾರಾಂಶ
ಅಭಿನಂದನೆ । ವಿಶ್ವಗುರು ಬಸವಣ್ಣನವರ ಪುತ್ಥಳಿ ಅನಾವರಣ ಮಾಡಲು ಬದ್ಧ
ಕನ್ನಡಪ್ರಭ ವಾರ್ತೆ ಅರಸೀಕೆರೆತಾಲೂಕಿನ ವೀರಶೈವ ಲಿಂಗಾಯತ ಸಮುದಾಯದ ಬೇಡಿಕೆಯಂತೆ ನಗರದ ಬಸವೇಶ್ವರ ವೃತ್ತದಲ್ಲಿ ವಿಶ್ವಗುರು ಬಸವಣ್ಣನವರ ಪುತ್ಥಳಿ ಅನಾವರಣ ಹಾಗೂ ನಗರ ಸಮೀಪದ ಗೀಜಿಹಳ್ಳಿ ಬಳಿ ವೀರಶೈವ ಲಿಂಗಾಯತ ಸಮುದಾಯದ ರುದ್ರಭೂಮಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಅವರ ಬೇಡಿಕೆಗಳನ್ನು ಈಡೇರಿಸಲು ಬದ್ದನಾಗಿದ್ದೇನೆ ಎಂದು ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ. ಎಂ. ಶಿವಲಿಂಗೇಗೌಡ ಭರವಸೆ ನೀಡಿದರು.
ನಗರದ ಜಲಜಾಕ್ಷಿ ಸಮುದಾಯ ಭವನದಲ್ಲಿ ತಾಲೂಕು ವೀರಶೈವ ಲಿಂಗಾಯತ ಕಾಂಗ್ರೆಸ್ ಅಭಿಮಾನಿಗಳ ಬಳಗದ ವತಿಯಿಂದ ಆಯೋಜಿಸಿದ್ದ ಕರ್ನಾಟಕ ಗೃಹ ಮಂಡಳಿ ನೂತನ ಅಧ್ಯಕ್ಷರಾಗಿ ನೇಮಕಗೊಂಡ ನಿಮಿತ್ತ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.‘ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನನ್ನ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲಾ ಧರ್ಮ, ಜಾತಿ ಜನಾಂಗದವರು ನನಗೆ ಮತ ಚಲಾಯಿಸಿ ಗೆಲ್ಲಿಸಿದ್ದಾರೆ, ತಾಲೂಕಿನ ವೀರಶೈವ ಸಮುದಾಯವೂ ನನ್ನ ಜೊತೆ ನಿಂತಿದೆ, ತಾಲೂಕಿನ ವೀರಶೈವ ಮುಖಂಡರು ಜೊತೆ ಇದ್ದಾರೆ, ೧೨ನೇ ಶತಮಾನದ ಬಸವಣ್ಣನವರ ಅನುಭವ ಮಂಟಪದಂತೆ ಈಗಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಂತ್ರಿ ಮಂಡಲದ ಅಧಿವೇಶನಗಳು ನಡೆಯುತ್ತಿವೆ, ವಿಶ್ವಗುರು ಬಸವೇಶ್ವರರು ಸಾಮಾಜಿಕ ನ್ಯಾಯ ಹಾಗೂ ಕ್ರಾಂತಿಯ ಹರಿಕಾರರಾಗಿದ್ದರು ಎಂದು ಹೇಳಿದರು.
‘ನನ್ನಲ್ಲಿ ಜಾತಿಯತೆ ಇಲ್ಲ, ಸರ್ವ ಧರ್ಮ, ಜಾತಿ, ಜನಾಂಗದವರನ್ನು ಸಮಾನತೆಯಿಂದ ಕಾಣುತ್ತೇನೆ. ೧೨ನೇ ಶತಮಾನದ ಬಸವಣ್ಣನವರಿಂದಾಗಿ ಸಾಮಾಜಿಕ ನ್ಯಾಯಕ್ಕೆ ಜಯ ಸಿಗುವಂತಾಯಿತು. ಇಂದಿನ ಆಧುನಿಕ, ವೈಜ್ಞಾನಿಕ ಯುಗದಲ್ಲಿ ಕೆಲವು ತತ್ವ ಸಿದ್ಧಾಂತಗಳು ಅದಲು ಬದಲಾಗಿವೆ. ಆದರೂ ನಾವು ನಮ್ಮ ಸನಾತನ ಧರ್ಮವನ್ನು ಹೊರತುಪಡಿಸಿ ಜೀವಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.ಯಗಚಿ ನದಿ ಮೂಲದಿಂದ ಯಾದಾಪುರದ ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಬೆಟ್ಟಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಈಗಾಗಲೇ ಸುಮಾರು ೪೦ ಕೋಟಿ ರುಪಾಯಿ ವೆಚ್ಚದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು ಸದ್ಯದಲ್ಲೇ ನೀರು ಹರಿಸಲಾಗುವುದು. ತಾಲೂಕಿನ ಮೈಲನಹಳ್ಳಿ ಬಳಿ ಕೈಗಾರಿಕಾ ವಲಯ ಸ್ಥಾಪನೆಗೆ ಈಗಿನ ನಮ್ಮ ಕಾಂಗ್ರೆಸ್ ಸರ್ಕಾರದಿಂದ ಮಂಜೂರಾತಿ ದೊರೆತಿದೆ ಎಂದರು.
ಸಮಾಜದ ಮುಖಂಡರಾದ ಅಡವಿಸ್ವಾಮಿ ಹಾಗೂ ಧರ್ಮಶೇಖರ್ ಗೀಜಿಹಳ್ಳಿ ಮಾತನಾಡಿದರು.ಸಮುದಾಯ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರಾದ ಮಲ್ಲೇನಹಳ್ಳಿ ಶಿವಶಂಕರಸ್ವಾಮಿ, ಗಂಜಿಗೆರೆ ಚಂದ್ರಶೇಖರ್, ಹಿರಿಯೂರು ರೇವಣ್ಣ, ತಾಲೂಕು ಶಿವ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಜಿ. ವಿ. ಬಸವರಾಜ್, ಷಡಕ್ಷರಿ, ದಿವಾಕರ್, ಕಾಟಿಕೆರೆ ಉಮೇಶ್, ಅಂಬರೀಶ್ ಸಂಕೋಡನಹಳ್ಳಿ, ಜಯಣ್ಣ ಬೆಳಗುಂಬ, ನಾಗಸುಮುದ್ರ ಸ್ವಾಮಿ, ಹೊನ್ನಕಟ್ಟ ಚಂದ್ರಪ್ಪ, ಮಾಡಾಳು ಸ್ವಾಮಿ, ರಾಂಪುರ ಜಯಣ್ಣ, ತಾಲೂಕು ವೀರಶೈವ ಲಿಂಗಾಯತ ಸಮುದಾಯದ ಮುಖಂಡರು ಇದ್ದರು.ಅರಸೀಕೆರೆಯಲ್ಲಿ ಕರ್ನಾಟಕ ಗೃಹ ಮಂಡಳಿ ನೂತನ ಅಧ್ಯಕ್ಷ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರನ್ನು ತಾಲೂಕು ವೀರಶೈವ ಲಿಂಗಾಯತ ಕಾಂಗ್ರೆಸ್ ಅಭಿಮಾನಿಗಳ ಬಳಗದಿಂದ ಸನ್ಮಾನಿಸಲಾಯಿತು.