ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ನಡೆಸಿದಾಗ ಅಂತರ್ಜಾಲ ಇಲ್ಲದ ಸ್ಥಳದಲ್ಲಿ ಸಮೀಕ್ಷೆ ನಡೆಸುವುದು ಕಷ್ಟವಾಗುತ್ತಿತ್ತು. ಆದರೆ, ಜನಗಣತಿ ವಿಷಯದಲ್ಲಿ ಆ ರೀತಿ ಆಗುವುದಿಲ್ಲ. ಇಲ್ಲಿ ಆಪ್‌ಲೈನ್, ಆನ್‌ಲೈನ್ ಎರಡು ಬಗೆಯಲ್ಲೂ ಗಣತಿ ಕಾರ್ಯ ಕೈಗೊಳ್ಳಬಹುದಾಗಿದೆ.
ಹುಬ್ಬಳ್ಳಿ:
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಏ. 1ರಿಂದ ‘ರಾಷ್ಟ್ರೀಯ ಜನಗಣತಿ– 2027’ ಪ್ರಕ್ರಿಯೆ ಆರಂಭವಾಗಲಿದ್ದು, ಮೊದಲ ಹಂತದಲ್ಲಿ ಏ. 1ರಿಂದ 15ರ ವರೆಗೆ ನಾಗರಿಕರಿಗೆ ವೆಬ್ ಪೋರ್ಟಲ್‌ನಲ್ಲಿ ‘ಸ್ವಯಂ–ಗಣತಿ’ಗೆ ಅವಕಾಶ ಕಲ್ಪಿಸಲಾಗಿದೆ. 16ರಿಂದ ಮೇ 15ರ ವರೆಗೆ ಮನೆ-ಮನೆ ಗಣತಿ ಕಾರ್ಯ ನಡೆಯಲಿದೆ ಎಂದು ಪಾಲಿಕೆ ಆಯುಕ್ತರೂ ಆಗಿರುವ ಪ್ರಧಾನ ಜನಗಣತಿ ಅಧಿಕಾರಿ (ಪ್ರಿನ್ಸಿಪಲ್ ಸೆನ್ಸೆಕ್ಸ್ ಆಫೀಸರ್) ಡಾ. ರುದ್ರೇಶ ಘಾಳಿ ಹೇಳಿದರು. ಇದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಂಡಿದೆ ಎಂದು ವಿವರಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಕರು, ಲೋಕೋಪಯೋಗಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸೇರಿ ವಿವಿಧ ಇಲಾಖೆ ಸಿಬ್ಬಂದಿ ಗಣತಿ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದ್ದು, 2047 ಬ್ಲಾಕ್ ಮಾಡಲಾಗಿದೆ. ಪ್ರತಿ ಬ್ಲಾಕ್‌ಗೆ ಒಬ್ಬರಂತೆ 2047 ಗಣತಿದಾರರನ್ನು ನೇಮಕ ಮಾಡಲಾಗಿದ್ದು, ಪ್ರತಿ ಗಣತಿದಾರರಿಗೆ 180 ಮನೆ ಬರಲಿವೆ ಎಂದು ವಿವರಿಸಿದರು.
ಆರು ಬ್ಲಾಕ್‌ಗೆ ಒಬ್ಬರಂತೆ 375 ಸೂಪರ್‌ವೈಸರ್ ನೇಮಕ ಮಾಡಿದ್ದು ಪಾಲಿಕೆ ವ್ಯಾಪ್ತಿಯಲ್ಲಿ ಇಬ್ಬರು ಮಾಸ್ಟರ್ ಟ್ರೇನರ್‌ಗಳಿದ್ದಾರೆ. ಗಣತಿದಾರರಿಗೆ ತರಬೇತಿ ನೀಡಲು 30 ಜನ ಮಾಸ್ಟರ್ ಟ್ರೇನರ್ ನೇಮಿಸಿದ್ದು ಒಟ್ಟು 2628 ಸಿಬ್ಬಂದಿ ಗಣತಿ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.ಗಣತಿದಾರರಿಗೆ ಏ. 3,4 ಮತ್ತು 5ರಂದು ಧಾರವಾಡದ ಜೆಎಸ್‌ಎಸ್ ಕಾಲೇಜು, ಹುಬ್ಬಳ್ಳಿಯ ಮಹಿಳಾ ಪಾಲಿಟೆಕ್ನಿಕ್ ಕಾಲೇಜು, ಐಬಿಎಂಆರ್ ಕಾಲೇಜಿನಲ್ಲಿ ತರಬೇತಿ ನಡೆಯಲಿದೆ. ಗಣತಿ ಕಾರ್ಯಕ್ಕೆ ನೇಮಕವಾದವರು ಕೇಂದ್ರ ಸ್ಥಾನದಲ್ಲಿ ಇರಬೇಕು ಎಂದು ಸೂಚಿಸಲಾಗಿದೆ ಎಂದರು.ಇದೇ ವೇಳೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ನಡೆಯಲಿದ್ದು 800 ಜನ ಬಿಎಲ್‌ಒ ನೇಮಕ ಮಾಡಲಾಗಿದೆ. ಬಹುತೇಕ ಪಾಲಿಕೆ ಸಿಬ್ಬಂದಿ ಎಸ್‌ಐಆರ್‌ಗೆ ನೇಮಕ ಮಾಡಲಾಗಿದೆ. ಉಳಿದಂತೆ ಶಿಕ್ಷಣ, ಕಂದಾಯ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿ ಗಣತಿಗೆ ಬಳಕೆ ಮಾಡಲಾಗುತ್ತಿದೆ ಎಂದರು.
ತಂತ್ರಜ್ಞಾನ ಸಮಸ್ಯೆಯಾಗಲ್ಲ:ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ನಡೆಸಿದಾಗ ಅಂತರ್ಜಾಲ ಇಲ್ಲದ ಸ್ಥಳದಲ್ಲಿ ಸಮೀಕ್ಷೆ ನಡೆಸುವುದು ಕಷ್ಟವಾಗುತ್ತಿತ್ತು. ಆದರೆ, ಜನಗಣತಿ ವಿಷಯದಲ್ಲಿ ಆ ರೀತಿ ಆಗುವುದಿಲ್ಲ. ಇಲ್ಲಿ ಆಪ್‌ಲೈನ್, ಆನ್‌ಲೈನ್ ಎರಡು ಬಗೆಯಲ್ಲೂ ಗಣತಿ ಕಾರ್ಯ ಕೈಗೊಳ್ಳಬಹುದಾಗಿದೆ. ಆಪ್‌ಲೈನ್ ಮೂಲಕ ಗಣತಿ ಕಾರ್ಯ ನಡೆಸಿ ಅಂತರ್ಜಾಲ ಇರುವ ಸ್ಥಳದಲ್ಲೇ ತೆರಳಿ ಪೂರ್ಣಗೊಳಿಸಬಹುದಾಗಿದೆ ಎಂದು ಮಾಸ್ಟರ್ ಟ್ರೇನರ್ ತಿಳಿಸಿದರು.
ಪಾಲಿಕೆ ಉಪ ಆಯುಕ್ತ (ಅಭಿವೃದ್ಧಿ) ವಿಜಯಕುಮಾರ ಆರ್, ಉಪ ಆಯುಕ್ತೆ (ಆಡಳಿತ) ಅನುರಾಧ ವಸ್ತ್ರದ, ಮುಖ್ಯ ಲೆಕ್ಕಾಧಿಕಾರಿ ಶಂಕರಾನಂದ ಬನಶಂಕರಿ ಇದ್ದರು. ಬಳಿಕ ಪಾಲಿಕೆ ಸಿಬ್ಬಂದಿಗೆ ಜನಗಣತಿ ಕುರಿತಂತೆ ಪ್ರಾತ್ಯೇಕ್ಷಿಕೆ ನೀಡಲಾಯಿತು.