ಜಿಲ್ಲೆಯಲ್ಲಿ ಮೊದಲ ಹಂತದ ಜನಗಣತಿ ಏ.1ರಿಂದ ಮೇ 15ರ ವರೆಗೆ ಜರುಗಲಿದೆ. ಸಾರ್ವಜನಿಕರು ನೀಡಿದ ಮಾಹಿತಿ ಗೌಪ್ಯವಾಗಿರುತ್ತದೆ ಹಾಗೂ ಯಾವುದೇ ಸೌಲಭ್ಯಗಳು ಕಡಿತವಾಗುವುದಿಲ್ಲ. ಹಾಗಾಗಿ ಯಾವುದೇ ವದಂತಿಗಳಿಗೆ ಕಿವಿಗೊಡದೆ ನಿಖರ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು.

ಹಾವೇರಿ: ಜಿಲ್ಲೆಯಲ್ಲಿ ಮೊದಲ ಹಂತದ ಜನಗಣತಿ ಏ.1ರಿಂದ ಮೇ 15ರ ವರೆಗೆ ಜರುಗಲಿದೆ. ಸಾರ್ವಜನಿಕರು ನೀಡಿದ ಮಾಹಿತಿ ಗೌಪ್ಯವಾಗಿರುತ್ತದೆ ಹಾಗೂ ಯಾವುದೇ ಸೌಲಭ್ಯಗಳು ಕಡಿತವಾಗುವುದಿಲ್ಲ. ಹಾಗಾಗಿ ಯಾವುದೇ ವದಂತಿಗಳಿಗೆ ಕಿವಿಗೊಡದೆ ನಿಖರ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರದ ವಿವಿಧ ಯೋಜನೆಗಳ ಜಾರಿಗೆ ಜನಸಂಖ್ಯೆ ಹಾಗೂ ಜನರ ಆರ್ಥಿಕ, ಸಾಮಾಜಿಕ ಸ್ಥಿತಿಗತಿ ಬಹಳ ಮುಖ್ಯವಾಗಿದೆ. ದೇಶದ ಅಭಿವೃದ್ಧಿ ಹಿತದೃಷ್ಟಿಯಿಂದ ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಜನಗಣತಿಯಲ್ಲಿ ಭಾಗವಹಿಸಬೇಕು ಎಂದರು.ಜನಗಣತಿ ಎಂದರೆ ಒಂದು ನಿರ್ದಿಷ್ಟ ಸಮಯದಲ್ಲಿ ಒಂದು ದೇಶದಲ್ಲಿನ ಪ್ರತಿಯೊಂದು ಕುಟುಂಬ, ಪ್ರತಿಯೊಬ್ಬ ವ್ಯಕ್ತಿ ಮತ್ತು ಅವರ ಜನಸಂಖ್ಯಾ, ಆರ್ಥಿಕ ಮತ್ತು ಸಾಮಾಜಿಕ ಮಾಹಿತಿಗಳ ಅಧಿಕೃತ ಸಂಫೂರ್ಣ ಎಣಿಕೆಯಾಗಿದೆ ಎಂದರು.16ನೇ ಜನಗಣತಿ: ಭಾರತದಲ್ಲಿ 1872 ರಿಂದ ಇದು 16ನೇ ಜನಗಣತಿಯಾಗಿದೆ. ದೇಶದಲ್ಲಿಯೇ ಪ್ರಥಮ ಬಾರಿಗೆ ಡಿಜಿಟಲ್ ರೂಪದಲ್ಲಿ ನಡೆಸಲಾಗುತ್ತದೆ. ಭಾರತದ ಸ್ವಾತಂತ್ರ‍್ಯದ ನಂತರದ 8ನೇ ಜನಗಣತಿ ಇದಾಗಿದೆ. ಭಾರತೀಯ ಜನಗಣತಿಯು ಜನಸಂಖ್ಯಾಶಾಸ್ತ್ರ (ಜನಸಂಖ್ಯಾಗುಣಲಕ್ಷಣಗಳು) ಆರ್ಥಿಕ ಚಟುವಟಿಕೆ, ಸಾಕ್ಷರತೆ ಮತ್ತು ಶಿಕ್ಷಣ, ವಸತಿ ಮತ್ತು ಮನೆಯ ಸೌಲಭ್ಯಗಳು, ನಗರೀಕರಣ, ಫಲವತ್ತತೆ ಮತ್ತು ಮರಣ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಭಾಷೆ, ಧರ್ಮ, ವಲಸೆ, ಅಂಗವೈಕಲ್ಯ ಮತ್ತು ಇತರೆ ಸಾಂಘಿಕ ಸಾಂಸ್ಕೃತಿಕ ಮತ್ತು ಜನಸಂಖ್ಯೆಯ ಅಂಕಿಅಂಶಗಳ ಮಾಹಿತಿ ಅತ್ಯಂತ ವಿಶ್ವಾಸಾರ್ಹ ಮೂಲವಾಗಿದೆ ಎಂದು ತಿಳಿಸಿದರು.ಅಧಿಕಾರಿಗಳ ನೇಮಕ: ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳನ್ನು ಪ್ರಧಾನ ಜನಗಣತಿ ಅಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನು ಹೆಚ್ಚುವರಿ ಜಿಲ್ಲಾ ಪ್ರಧಾನ ಜನಗಣತಿ ಅಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿಗಳು ಜಿಲ್ಲಾ ಜನಗಣತಿ ಅಧಿಕಾರಿಗಳಾಗಿದ್ದು, ಜಿ.ಪಂ.ಮುಖ್ಯ ಯೋಜನಾಧಿಕಾರಿಗಳು, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು, ಜಿಲ್ಲಾ ಸಾಂಖ್ಯಿಕ ಅಧಿಕಾರಿಗಳು ಮತ್ತು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾನಿರ್ದೇಶಕರನ್ನು ಹೆಚ್ಚುವರಿ ಜನಗಣತಿ ಅಧಿಕಾರಿಗಳು ಎಂದು ಜನಗಣತಿ ನಿರ್ದೇಶನಾಲಯ ನೇಮಕ ಮಾಡಿದೆ. ಭಾರತೀಯ ಜನಗಣತಿಯ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಮೊಬೈಲ್ ಆ್ಯಪ್ ಮತ್ತು ಡಿಜಿಟಲ್ ವಿಧಾನಗಳ ಮೂಲಕ ಸಮಗ್ರವಾಗಿ ಜನಗಣತಿ ನಡೆಸಲಾಗುತ್ತಿದೆ. ಕರ್ನಾಟಕದಲ್ಲಿ ಮೊದಲ ಹಂತವಾಗಿ (ಮನೆಪಟ್ಟೆ ಮತ್ತುಮನೆಗಣತಿ ) ಏ.1ರಿಂದ ಮೇ 15ರವರೆಗೆ ನಡೆಯಲಿದೆ. ಕೇಂದ್ರ ಸರ್ಕಾರವು ಅಭಿವೃದ್ಧಿಪಡಿಸಿದ ತಂತ್ರಾಂಶದಲ್ಲಿ ಕಾರ್ಯನಿರ್ವಹಿಸಲಿದ್ದು, ಮೊದಲ ಹಂತವಾದ ಮನೆಗಳ ಪಟ್ಟಿ ಮತ್ತು ಮನೆಗಣತಿಯ ಸ್ವಯಂಗಣತಿ https://se.census.gov.in ಲಿಂಕ್ ಮೂಲಕ ಏ.1ರಿಂದ 15ರ ವರೆಗೆ ಅಂದರೆ 15 ದಿನ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಸ್ವಯಂ ಗಣತಿ ವಿಧಾನ: ಸ್ವಯಂಗಣತಿ ಕಾರ್ಯವಿಧಾನ ಏ.1ರಿಂದ ಏ.15ರವರೆಗೆ ನಿಮ್ಮ ಜನಗಣತಿ ವಿವರಗಳನ್ನು ಆನ್‌ಲೈನಲ್ಲಿ ವೇಗವಾಗಿ ಮತ್ತು ಸುರಕ್ಷಿತವಾಗಿ ಭರ್ತಿ ಮಾಡಬಹುದು. https://se.census.gov.in> ಮೊಬೈಲ್ ಸಂಖ್ಯೆ ಮತ್ತು ಒಟಿಪಿ ಬಳಸಿ ಲಾಗಿನ್ ಮಾಡಿ, ನಿಮ್ಮ ಸ್ಥಳವನ್ನು ಆಯ್ಕೆಮಾಡಿ, ನಕ್ಷೆಯಲ್ಲಿ ನಿಮ್ಮಮನೆಯನ್ನು ಗುರುತಿಸಿ, ಮನೆಯ, ಕುಟುಂಬದ ವಿವರಗಳನ್ನು ಭರ್ತಿಮಾಡಿ ಸಲ್ಲಿಸಿ ಮತ್ತು ನಿಮ್ಮ ಎಸ್‌ಇ ಐಡಿಯನ್ನು ಪಡೆಯಿರಿ. ಎಲ್ಲ ಮಾಹಿತಿ ದಾಖಲಿಸಲು 10ರಿಂದ 15 ನಿಮಿಷಗಳು ಆಗಬಹುದು. ನಿಮ್ಮ ಎಸ್‌ಇ ಐಡಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು ಹಾಗೂ ಗಣತಿದಾರರು ಮನೆಗೆ ಬಂದಾಗ ಅದನ್ನುಹಂಚಿಕೊಳ್ಳಬೇಕು ಎಂದು ತಿಳಿಸಿದರು.ಕ್ಷೇತ್ರ ಪರಿಶೀಲನೆ: ಏ. 16ರಿಂದ ಮೇ 15ರ ವರೆಗೆ ಗಣತಿದಾರರು ಮನೆಗೆ ಭೇಟಿ ನೀಡಿ ವಿವರಗಳನ್ನು ಪರಿಶೀಲಿಸುತ್ತಾರೆ. ನೂರಕ್ಕೆ ನೂರರಷ್ಟು ಗೌಪ್ಯತೆ ಹಾಗೂ ಭದ್ರತೆ ಇರುತ್ತದೆ. ನಿಮ್ಮ ಸ್ವಯಂ ಗಣತಿಯನ್ನು ಪೂರ್ಣಗೊಳಿಸಿ, ಜವಾಬ್ದಾರಿಯುತ ನಾಗರಿಕರಾಗಿರಿ ಎಂದರು.ಅಗತ್ಯ ಸಿದ್ಧತೆ: ಜಿಲ್ಲೆಯಲ್ಲಿ ಒಟ್ಟು 8 ತಾಲೂಕುಗಳ ಪೈಕಿ ಗ್ರಾಮೀಣ ವಿಭಾಗಕ್ಕೆ ಎಂಟು ಹಾಗೂ ನಗರಸ್ಥಳೀಯ ಪ್ರದೇಶದಲ್ಲಿ 10 ಸೇರಿ ಒಟ್ಟು 18 ಚಾರ್ಜ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಈ ಅಧಿಕಾರಿಗಳಿಗೆ ಜಿಲ್ಲಾ ಮಟ್ಟದಲ್ಲಿ ಮಾರ್ಚ್ 3ರಿಂದ 5ರ ವರೆಗೆ ತರಬೇತಿ ನೀಡಲಾಗಿದೆ. ಜಿಲ್ಲಾ ಮಟ್ಟದ ಮಾಸ್ಟರ್ ತರಬೇತುದಾರರನ್ನು ನೇಮಕ ಮಾಡಿ, ಮೈಸೂರು ಎ.ಟಿ.ಐ.ಅವರಿಂದ ತರಬೇತಿ ಪಡೆಯಲಾಗಿದೆ.ಜಿಲ್ಲೆಯಲ್ಲಿ 54 ಫೀಲ್ಡ್ ತರಬೇತುದಾರರನ್ನು ಆಯ್ಕೆಮಾಡಿ, ಜಿಲ್ಲಾ ಮಟ್ಟದಲ್ಲಿ ತರಬೇತಿ ನೀಡಲಾಗಿದೆ. 18 ಚಾರ್ಜ್ ಅಧಿಕಾರಿಗಳಿಗೆ 18 ತಾಂತ್ರಿಕ ಸಹಾಯಕರನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.2935 ಬ್ಲಾಕ್‌ಗಳು: ಜಿಲ್ಲೆಯ ಎಂಟು ತಾಲೂಕುಗಳ ಗ್ರಾಮೀಣ 2,193 ಹಾಗೂ ನಗರದ ಪ್ರದೇಶದ 732 ಸೇರಿ 2,935 ಬ್ಲಾಕ್‌ಳನ್ನು ರಚಿಸಲಾಗಿದೆ. ಗ್ರಾಮೀಣ 2,413 ಹಾಗೂ ನಗರದ ಪ್ರದೇಶದ 806 ಸೇರಿ 3,218 ಗಣತಿದಾರರು ಹಾಗೂ ಗ್ರಾಮೀಣ 425 ಹಾಗೂ ನಗರದ ಪ್ರದೇಶದ 146 ಸೇರಿ 571 ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ. ದೇಶದ ಹಿತಾಸಕ್ತಿ: ನಮ್ಮ ಜನಗಣತಿ - ನಮ್ಮ ಭವಿಷ್ಯ, 2027 ರ ಜನಗಣತಿಯಲ್ಲಿ ಪಾಲ್ಗೊಳ್ಳಿ, ಸರಿಯಾದ ಸಮಗ್ರ ಮಾಹಿತಿ, ಸದೃಢಯೋಜನೆ, ಡಿಜಿಟಲ್ ಗಣತಿಗೆ ಸಹಕರಿಸಿ ಹಾಗೂ ದೇಶದ ಅಭಿವೃದ್ಧಿಗೆ ನಿಮ್ಮ ಮನೆಯ ಮಾಹಿತಿ ಅತ್ಯಗತ್ಯ ಎಂಬ ಘೋಷವಾಕ್ಯದೊಂದಿಗೆ ಜನಗಣತಿ ನಡೆಸಲಾಗುತ್ತಿದೆ. 2027 ರ ಜನಗಣತಿಯು ಕೇವಲ ಸಂಖ್ಯೆಗಳಲ್ಲ, ಇದು ದೇಶದ ಹಿತಾಸಕ್ತಿಯಾಗಿದೆ. ಶಿಕ್ಷಣ, ವಸತಿ, ಉದ್ಯೋಗ ಮತ್ತು ಮೂಲ ಸೌಕರ್ಯಗಳ ಉತ್ತಮ ಯೋಜನೆಗೆ ನಿಮ್ಮ ನಿಖರ ಮಾಹಿತಿ ಅಗತ್ಯವಾಗಿದೆ. ಗಣತಿದಾರರಿಗೆ ನಿಮ್ಮ ಕುಟುಂಬದ ಸರಿಯಾದ ವಿವರಗಳನ್ನುನೀಡಿ, ಆ್ಯಪ್ ಮೂಲಕವೇ ಮಾಹಿತಿ ದಾಖಲಿಸಲು ಸಹಕರಿಸಿ ಹಾಗೂ ಜನಗಣತಿ ಡೇಟಾ ಸಂಪೂರ್ಣಸುರಕ್ಷಿತವಾಗಿದೆ ಎಂದು ತಿಳಿಸಿದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರುಚಿ ಬಿಂದಲ್, ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಎಲ್., ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಶಿರಕೋಳ, ಜಿಪಂ ಉಪಕಾರ್ಯದರ್ಶಿ ಡಾ.ಪುನಿತ್ ಇದ್ದರು.