ಗಣತಿ ಸೂಪರ್‌ಫಾಸ್ಟ್‌: ನಿನ್ನೆ 15 ಲಕ್ಷ ಮನೆಗಳ ಸರ್ವೇ!

| Published : Oct 01 2025, 01:00 AM IST

ಸಾರಾಂಶ

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ದಿನದಿಂದ ದಿನಕ್ಕೆ ವೇಗ ಪಡೆಯುತ್ತಿದ್ದು, ಮಂಗಳವಾರ 15.57 ಲಕ್ಷ ಮನೆಗಳ ಸಮೀಕ್ಷೆ ನಡೆಸಲಾಗಿದೆ.

ಕನ್ನಡಪ್ರಭ ವಾರ್ತೆ, ಬೆಂಗಳೂರುಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ದಿನದಿಂದ ದಿನಕ್ಕೆ ವೇಗ ಪಡೆಯುತ್ತಿದ್ದು, ಮಂಗಳವಾರ 15.57 ಲಕ್ಷ ಮನೆಗಳ ಸಮೀಕ್ಷೆ ನಡೆಸಲಾಗಿದೆ. ಇದರೊಂದಿಗೆ ಸಮೀಕ್ಷೆ ಪೂರ್ಣಗೊಂಡ ಮನೆಗಳ ಸಂಖ್ಯೆ 57 ಲಕ್ಷ ದಾಟಿದೆ. ಬಾಕಿ ಉಳಿದ ಏಳು ದಿನಗಳಲ್ಲೂ ಇದೇ ಪ್ರಮಾಣದಲ್ಲಿ ಸಮೀಕ್ಷೆ ನಡೆದರೆ ನಿಗದಿತ ಅವಧಿಯೊಳಗೆ ಸಮೀಕ್ಷೆ ಬಹುತೇಕ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ರಾಜ್ಯದಲ್ಲಿ ಸಮೀಕ್ಷೆಗೆ ಒಟ್ಟು 1,43,77,978 ಮನೆಗಳನ್ನು ಗುರುತಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿತ್ಯ ಶೇ.10ರಷ್ಟು (ಶೇ.11.85 ಲಕ್ಷ) ಮನೆಗಳ ಸಮೀಕ್ಷೆ ಪೂರ್ಣಗೊಳಿಸಲು ತಾಕೀತು ಮಾಡಿದ ಬಳಿಕ ಸಮೀಕ್ಷೆ ಕಾರ್ಯದ ವೇಗ ಹೆಚ್ಚುತ್ತಿದೆ.

ಶನಿವಾರ 8 ಲಕ್ಷಕ್ಕೂ ಹೆಚ್ಚು, ಭಾನುವಾರ ಮತ್ತು ಸೋಮವಾರ ತಲಾ 12 ಲಕ್ಷಕ್ಕೂ ಹೆಚ್ಚು ಮನೆಗಳ ಸಮೀಕ್ಷೆ ಪೂರ್ಣಗೊಂಡಿದ್ದವು. ಮಂಗಳವಾರ ಇನ್ನಷ್ಟು ಹೆಚ್ಚಾಗಿ 15 ಲಕ್ಷ ದಾಟಿದೆ. ಇದರೊಂದಿಗೆ ಈವರೆಗೆ 57,08,030 ಮನೆಗಳ ಸಮೀಕ್ಷೆ ಪೂರ್ಣಗೊಂಡಿದ್ದು, ಶೇ. 40 ಸಮೀಪಿಸಿದೆ. ಸಮೀಕ್ಷೆ ಪೂರ್ಣಗೊಳಿಸಲು ಅ.7 ಕೊನೆಯ ದಿನವಾಗಿರುವುದರಿಂದ ಉಳಿದ 7 ದಿನಗಳಲ್ಲಿ ಇನ್ನೂ 86 ಲಕ್ಷಕ್ಕೂ ಹೆಚ್ಚು ಮನೆಗಳ (ಶೇ.60) ಸಮೀಕ್ಷೆ ನಡೆಯಬೇಕಿದೆ.

ಕೊಪ್ಪಳ, ಹಾವೇರಿಯಲ್ಲಿ ಶೇ.60 ಸಮೀಕ್ಷೆ:

ಕೊಪ್ಪಳ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಮಂಗಳವಾರದವರೆಗೆ ಬಹುತೇಕ ಶೇ.60 ರಷ್ಟು ಮನೆಗಳ ಸಮೀಕ್ಷೆ ಪೂರ್ಣಗೊಂಡಿದೆ. ಉಳಿದಂತೆ ಗದಗದಲ್ಲಿ ಶೇ.54, ಚಿತ್ರದುರ್ಗ ಲ್ಲಿ ಶೇ.53. ದಾವಣಗೆರೆ ಶೇ.51, ಮೈಸೂರು ಜಿಲ್ಲೆಯಲ್ಲಿ ಶೇ.50 ಕ್ಕೂ ಹೆಚ್ಚು ಮನೆಗಳ ಸಮೀಕ್ಷೆ ನಡೆಸಲಾಗಿದೆ. ಹಿಂದುಳಿದಿದ್ದ ಉಡುಪಿ ಮತ್ತು ಮೈಸೂರು ಜಿಲ್ಲೆಗಳಲ್ಲೂ ಸಮೀಕ್ಷೆ ವೇಗ ಪಡೆದಿದ್ದು ಮಂಗಳವಾರ ಕ್ರಮವಾಗಿ ಶೇ.21.91 ಮತ್ತು ಶೇ.26.1 ತಲುಪಿದೆ. ಉಳಿದ ಜಿಲ್ಲೆಗಳಲ್ಲಿ ಕನಿಷ್ಠ ಶೇ.30ರಿಂದ ಗರಿಷ್ಠ ಶೇ.50ರವರೆಗೆ ಸಮೀಕ್ಷೆ ನಡೆದಿರುವುದು ಕಂಡುಬಂದಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಇನ್ನು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಇನ್ನೂ ಸಮೀಕ್ಷೆ ಆರಂಭವಾಗಿಲ್ಲ. ಜಿಬಿಎ ವ್ಯಾಪ್ತಿ ಹೊರತುಪಡಿಸಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಶೇ.10ರಷ್ಟು ಸಮೀಕ್ಷೆ ನಡೆದಿರುವುದಾಗಿ ತಿಳಿಸಲಾಗಿದೆ.