ಬೆಳಗಾವಿ ಕಾಂಗ್ರೆಸ್‌ ಅಧಿವೇಶನಕ್ಕೆ ಶತಮಾನದ ಸಂಭ್ರಮ

| Published : Aug 25 2024, 01:47 AM IST

ಸಾರಾಂಶ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ 1924ರಲ್ಲಿ ನಡೆದ ಐತಿಹಾಸಿಕ ಬೆಳಗಾವಿ ಕಾಂಗ್ರೆಸ್‌ ಅಧಿವೇಶನಕ್ಕೆ ಇದೀಗ ಶತಮಾನದ ಸಂಭ್ರಮ. ಈ ಅಧಿವೇಶನದ ಸವಿನೆನಪಿಗಾಗಿ ಶತಮಾನೋತ್ಸವ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಶ್ರೀಶೈಲ ಮಠದ

ಕನ್ನಡಪ್ರಭ ವಾರ್ತೆ ಬೆಳಗಾವಿ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ 1924ರಲ್ಲಿ ನಡೆದ ಐತಿಹಾಸಿಕ ಬೆಳಗಾವಿ ಕಾಂಗ್ರೆಸ್‌ ಅಧಿವೇಶನಕ್ಕೆ ಇದೀಗ ಶತಮಾನದ ಸಂಭ್ರಮ. ಈ ಅಧಿವೇಶನದ ಸವಿನೆನಪಿಗಾಗಿ ಶತಮಾನೋತ್ಸವ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಬಜೆಟ್‌ನಲ್ಲಿ ₹2 ಕೋಟಿ ಅನುದಾನ ತೆಗೆದಿರಸಲಾಗಿದೆ.

ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಸ್ವಾತಂತ್ರ್ಯ ಸಂಗ್ರಾಮಕ್ಕೆ ಈ ಭಾಗದಲ್ಲಿನ ಹಳ್ಳಿ ಹಳ್ಳಿಯಲ್ಲಿಯೂ ಕಿಚ್ಚು ಹೊತ್ತಿಸಿತ್ತು. 1924ರ ಡಿಸೆಂಬರ್‌ 24 ಮತ್ತು 25ರಂದು ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್‌ ಅಧಿವೇಶನ ಜರುಗಿತ್ತು. ಅಧಿವೇಶನದಲ್ಲಿ ನಿರಂತರ ಗೋಷ್ಠಿ, ಸಭೆಗಳು ನಡೆದಿದ್ದವು. ಸ್ವಾತಂತ್ರ್ಯ ಸಂಗ್ರಾಮದ ರೂಪುರೇಷೆಗಳ ಬಗ್ಗೆಯೂ ವಿಸ್ತೃತವಾಗಿ ಚರ್ಚಿಸಲಾಗಿತ್ತು. ಅಲ್ಲದೆ, ದೇಶ ಸೇವೆಯ ಸಾಮಾಜಿಕ ವಿಷಯಗಳ ಕುರಿತಾಗಿಯೂ ಚರ್ಚೆ ನಡೆದಿದ್ದವು. ಹಲವು ಗೊತ್ತುವಳಿಗಳನ್ನು ಅಂಗೀಕರಿಸಲಾಗಿತ್ತು. ಬೆಳಗಾವಿ ಅಧಿವೇಶನದಲ್ಲಿ ಅಂಗೀಕೃತಗೊಂಡ ಗೊತ್ತುವಳಿಗಳೇ ಸ್ವಾತಂತ್ರ್ಯ ಆಂದೋಲನಕ್ಕೆ ನಾಂದಿಯಾಗಿದ್ದವು ಎಂಬುವುದು ಸ್ಮರಣೀಯ. ಹಾಗಾಗಿ, ಬೆಳಗಾವಿ ನೆಲ ಐತಿಹಾಸಿಕ ಮಹತ್ವ ಪಡೆದಿದೆ. ಹೀಗಾಗಿ ಕಾಂಗ್ರೆಸ್‌ ಅಧಿವೇಶನ ನೂರು ವರ್ಷಗಳ ಮೈಲುಗಲ್ಲು ಪೂರೈಸಿ, ಶತಮಾನೋತ್ಸವ ಸಂಭ್ರಮಕ್ಕೆ ಸಾಕ್ಷಿಯಾಗುತ್ತಿದೆ.ಏನೇನು ಕಾರ್ಯಕ್ರಮ ಆಯೋಜಿಸಲು ವಿಚಾರವಿದೆ?:

ಬೆಳಗಾವಿ ಕಾಂಗ್ರೆಸ್‌ ಅಧಿವೇಶನಕ್ಕೆ ಶತಮಾನದ ಸಂಭ್ರಮದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಿದೆ. ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್‌ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚಿಸಿ ಕಾರ್ಯೋನ್ಮುಖಗೊಳಿಸಲಾಗಿದೆ. ಹುದಲಿಯ ಗಂಗಾಧರರಾವ್‌ ದೇಶಪಾಂಡೆ ಅವರ ಪ್ರತಿಮೆಯನ್ನು ನಿರ್ಮಿಸುವ ಉದ್ದೇಶವಿದೆ ಎನ್ನಲಾಗಿದೆ. ಜತೆಗೆ ಶತಮಾನೋತ್ಸವ ಆಚರಣೆಗೆ ಯಾವ್ಯಾವ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಸ್ವಾತಂತ್ರ್ಯ ಹೋರಾಟದ ಬಗ್ಗೆ ಮಾಹಿತಿಯಿರುವ ಪರಿಣಿತರು, ಸ್ವಾತಂತ್ರ್ಯ ಹೋರಾಟಗಾರರಿಂದ ಮಾಹಿತಿ ಪಡೆಯಲಿದೆ. ಜತೆಗೆ ಈಗಾಗಲೇ ಇವರೊಂದಿಗೆ ಹಾಗೂ ಅಧಿಕಾರಿಗಳಿಂದ ಕೂಡಿದ ಈ ಸಮಿತಿ ಒಂದು ಸುತ್ತಿನ ಸಭೆ ನಡೆಸಲಾಗಿದೆ. ಜತೆಗೆ ಶತಮಾನೋತ್ಸವ ಕುರಿತು ಸೂಕ್ತ ಸಲಹೆ ಸೂಚನೆ ಪಡೆಯಲಾಗಿದೆ.

ಗಂಗಾಧರರಾವ್‌ ದೇಶಪಾಂಡೆ ನಿರ್ಣಾಯಕ ಪಾತ್ರ:

ಕರ್ನಾಟಕ ಸಿಂಹ ಎಂದೇ ಖ್ಯಾತರಾಗಿದ್ದ ಕುಂದರನಾಡಿನ ಹುದಲಿಯ ಗಂಗಾಧರರಾವ್‌ ದೇಶಪಾಂಡೆ ಅವರು ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಹಮ್ಮಿಕೊಳ್ಳುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಕಾಂಗ್ರೆಸ್‌ ಅಧಿವೇಶನ ಸ್ಥಳಕ್ಕೆ ವಿಜಯನಗರ ಎಂದು ಹೆಸರಿಡಲಾಗಿತ್ತು. ಈಗದು ಟಿಳಕವಾಡಿಯಾಗಿದೆ. ಅಧಿವೇಶನದ ಸ್ಮರಣೆಗಾಗಿ ಟಿಳಕವಾಡಿಯ ರೈಲ್ವೆ ಮೊದಲ ಗೇಟ್‌ ಬಳಿಯ ಒಂದು ಸುಂದರ ಉದ್ಯಾನ ತಲೆ ಎತ್ತಿದೆ. ಅದರಲ್ಲಿ ವೀರಸೌಧ ನಿರ್ಮಿಸಲಾಗಿದೆ. ಅಧಿವೇಶನಕ್ಕೆ ಆಗಮಿಸಿದವರಿಗಾಗಿ ಕುಡಿಯುವ ನೀರಿಗಾಗಿ ನಿರ್ಮಿಸಲಾದ ಬಾವಿ ಈಗಲೂ ಇದೆ. ಇದು ಅಧಿವೇಶನಕ್ಕೆ ಪ್ರಮುಖ ಸಾಕ್ಷಿಯಾಗಿ ಉಳಿದಿದೆ. ಅಂದು ಪಂಪಾ ಸರೋವರ ಎಂದು ಕರೆಸಿಕೊಂಡಿದ್ದ ಈ ಬಾವಿ ಈಗ ಕಾಂಗ್ರೆಸ್‌ ಬಾವಿ ಎಂದೇ ಖ್ಯಾತಿ ಪಡೆದಿದೆ. ಈ ಉದ್ಯಾನದ ಕೂಗಳತೆಯಲ್ಲಿರುವ ನಗರದ ಪ್ರಮುಖ ಮಾರ್ಗಕ್ಕೆ ಕಾಂಗ್ರೆಸ್‌ ರಸ್ತೆ ಎಂದೂ ನಾಮಕರಣ ಮಾಡಲಾಗಿದೆ. ಸುಂದರವಾದ ವೀರಸೌಧದಲ್ಲಿ ಅಧಿವೇಶನದ ಅಪರೂಪದ ಭಾವಚಿತ್ರಗಳನ್ನು ಹಾಗೂ ಗ್ರಂಥಾಲಯವನ್ನೂ ಸ್ಥಾಪಿಸಲಾಗಿದೆ.ರಾಷ್ಟ್ರಪಿತ ಮಹಾತ್ಮ ಗಾಂಧೀಯವರ ಅಧ್ಯಕ್ಷತೆಯಲ್ಲಿ 1924ರಲ್ಲಿ ಬೆಳಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆದು ನೂರು ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು. ಇದಕ್ಕಾಗಿ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ₹ 2 ಕೋಟಿ ಅನುದಾನ ಕಾಯ್ದಿರಿಸಿದೆ.

-ಸತೀಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ

ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಶತಮಾನದ ಮೈಲಿಗಲ್ಲನ್ನು ಪೂರ್ಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿ ಪ್ರಕಾರ ಶತಮಾನೋತ್ಸವ ಆಚರಿಸಲಾಗುವುದು. ಅಧಿವೇಶನಕ್ಕೆ ರಾಜ್ಯ ಸರ್ಕಾರ ₹ 2 ಕೋಟಿ ಅನುದಾನ ಒದಗಿಸಿದೆ. ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಲಾಗುವುದು.

-ಮೊಹಮ್ಮದ್‌ ರೋಷನ್‌ ಜಿಲ್ಲಾಧಿಕಾರಿ

ಗಾಂಧೀಜಿಯವರು ಅಧ್ಯಕ್ಷತೆ ವಹಿಸಿದ್ದ ಅಧಿವೇಶನವು ಅತ್ಯಂತ ಮಹತ್ವದ್ದಾಗಿದ್ದು, ಇದರ ಬಗ್ಗೆ ಗುಜರಾತ್‌ನ ಸಬರಮತಿ ಆಶ್ರಮದಲ್ಲಿ ಯಾವುದೇ ಉಲ್ಲೇಖವಿರುವುದಿಲ್ಲ. ಅಧಿವೇಶನದ ದಾಖಲೆ, ಛಾಯಾಚಿತ್ರ ಹಾಗೂ ಗೊತ್ತುವಳಿಗಳ ಬಗ್ಗೆ ಸಬರಮತಿ ಆಶ್ರಮದಲ್ಲಿ ಪ್ರದರ್ಶಿಸಲು ಅಗತ್ಯ ಕ್ರಮ ವಹಿಸಬೇಕು. ಗಂಗಾಧರ ರಾವ್ ದೇಶಪಾಂಡೆ ಅವರನ್ನು ಸ್ಮರಿಸುವ ಕಾರ್ಯಕ್ರಮ ಅಳವಡಿಸಿಕೊಳ್ಳಬೇಕು.

- ಸುಭಾಷ ಕುಲಕರ್ಣಿ ಕಾರ್ಯದರ್ಶಿ, ಗಂಗಾಧರ ರಾವ್ ದೇಶಪಾಂಡೆ ಸ್ಮಾರಕ ಟ್ರಸ್ಟ್‌