ಬಡವರ ಮಕ್ಕಳ ಶಾಲೆಗೆ ಶತಕ ಸಂಭ್ರಮ

| Published : Feb 06 2025, 11:49 PM IST

ಸಾರಾಂಶ

ಹಳೇಹುಬ್ಬಳ್ಳಿಯ ಇಂಡಿಪಂಪ್‌ ಸಮೀಪದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ನಂ. 19 ಶಾಲೆ ಇಂತಹ ಸಾಧನೆಯೊಂದಿಗೆ 115ನೇ ವರ್ಷದ ಶತಮಾನೋತ್ತರ ಸಂಭ್ರಮದ ಹೊಸ್ತಿಲಲ್ಲಿದೆ.

ಬಾಲಕೃಷ್ಣ ಜಾಡಬಂಡಿ

ಹುಬ್ಬಳ್ಳಿ:

ಸರ್ಕಾರಿ ಶಾಲೆ ಅಂದರೆ ಮೂಗು ಮುರಿಯುವ ಇಂದಿನ ದಿನಗಳಲ್ಲಿ ಇಲ್ಲಿನ ಸರ್ಕಾರಿ ಶಾಲೆಯೊಂದು ಖಾಸಗಿ ಶಾಲೆಗೆ ಸೆಡ್ಡು ಹೊಡೆಯುತ್ತಿ. ಒಂದು ಸರ್ಕಾರಿ ಶಾಲೆ ಹೇಗೆ ಅಭಿವೃದ್ಧಿ ಹೊಂದಬೇಕು ಎಂಬುದಕ್ಕೆ ಈ ಶಾಲೆ ಮಾದರಿಯಾಗಿದೆ.

ಹಳೇಹುಬ್ಬಳ್ಳಿಯ ಇಂಡಿಪಂಪ್‌ ಸಮೀಪದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ನಂ. 19 ಶಾಲೆ ಇಂತಹ ಸಾಧನೆಯೊಂದಿಗೆ 115ನೇ ವರ್ಷದ ಶತಮಾನೋತ್ತರ ಸಂಭ್ರಮದ ಹೊಸ್ತಿಲಲ್ಲಿದೆ.

1909ರಲ್ಲಿ ಆರಂಭವಾದ ಈ ಶಾಲೆಯಲ್ಲಿ ಕೇವಲ 13 ವಿದ್ಯಾರ್ಥಗಳಿದ್ದರು. ಮುನಿಸಿಪಲ್‌ ಕನ್ನಡ ಪ್ರಾಥಮಿಕ ಗಂಡು ಮಕ್ಕಳ ಶಾಲೆ ಎಂದು 1930ರಲ್ಲಿ ನಿರ್ಮಾಣವಾದ ಕಟ್ಟಡದಲ್ಲಿಯೇ ಈಗ ಬಹುತೇಕ ತರಗತಿಗಳು ನಡೆಯುತ್ತಿವೆ. ಇಂದು 1ರಿಂದ 7ನೇ ತರಗತಿಯವರೆಗೆ 152 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇದಲ್ಲದೆ 2024-25ರಿಂದ ಎಲ್‌ಕೆಜಿ-ಯುಕೆಜಿ ಆರಂಭ ಮಾಡಲಾಗಿದ್ದು, ಅಲ್ಲಿ ಕನ್ನಡ ಹಾಗೂ ಆಂಗ್ಲ ಮಾಧ್ಯಮದಲ್ಲಿ ಒಟ್ಟು 67 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ.

ಈ ಶಾಲೆಯಲ್ಲಿ ಓದಿದ ಅನೇಕರು ಈಗ ಪ್ರಮುಖ ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ, ಮಾಡುತ್ತಲೂ ಇದ್ದಾರೆ. ಇಲ್ಲಿಯೇ ಓದಿರುವ ಐಎಫ್‌ಎಸ್‌ ಅಧಿಕಾರಿ ರಾಜೇಂದ್ರ ಗಾರವಾಡ ಅರಣ್ಯ ಇಲಾಖೆಯಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಶಿವಾನಂದ ಗಾಮನಗಟ್ಟಿ ದೆಹಲಿ ಏಮ್ಸ್‌ನಲ್ಲಿ ಪ್ರೊಪೆಸರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗೆ ಈ ಶಾಲೆ ಅನೇಕ ಸಾಧಕರನ್ನು ನಾಡಿಗೆ ಕೊಟ್ಟಿದೆ.

ಬಡವರ ಮಕ್ಕಳ ಬೆಳಕು:

ಶಿವಶಂಕರ ಕಾಲನಿಯ ಶೇ. 90ರಷ್ಟು ಮಕ್ಕಳು ಇದೇ ಶಾಲೆಯಲ್ಲಿ ಓದುತ್ತಿದ್ದಾರೆ. ಶಾಲೆ ಆರಂಭಗೊಂಡಾಗಿನಿಂದಲೂ ಪಕ್ಕದ ಚಿಕ್ಕಲಿಗಾರ ಸಮುದಾಯದ ಮಕ್ಕಳು ಇಲ್ಲಿ ಹೆಚ್ಚಾಗಿದ್ದಾರೆ. ಈ ಮಕ್ಕಳ ತಂದೆ-ತಾಯಿಗಳು ಕೂಲಿಕಾರರು, ಬೀದಿಬದಿ ವ್ಯಾಪಾರಸ್ಥರಾಗಿದ್ದಾರೆ. ಇಂತಹ ಬಡವರ ಮಕ್ಕಳ ಶಿಕ್ಷಣಕ್ಕೆ ಈ ಶಾಲೆಯೇ ಆಧಾರವಾಗಿದೆ.

ಶಾಲೆಗೆ ಮತ್ತೆ ಜೀವಕಳೆ:

ಕನ್ನಡ ಶಾಲೆ ಅಂದ ಕೂಡಲೇ ಅಭಿವೃದ್ಧಿಯ ನಿರ್ಲಕ್ಷ್ಯಕ್ಕೆ ಒಳಗಾಗುವುದು ಸಾಮಾನ್ಯ. ಈ ಶಾಲೆಯು ಅನೇಕ ಏರಿಳಿತಗಳನ್ನು ಕಂಡಿದೆ. ಇನ್ನೇನು ಮುಚ್ಚೆಬಿಡುತ್ತದೆ ಎನ್ನುವ ಹಂತದಲ್ಲಿದ್ದ ಈ ಶಾಲೆಗೆ ಈಗ ಜೀವಕಳೆ ಬಂದಿದೆ. ನೂರಾರು ಮಕ್ಕಳಿಗೆ ಶಿಕ್ಷಣ ನೀಡುತ್ತಿದೆ. ಎಚ್‌.ಎಂ. ಕುಂದರಗಿ ಅವರು ಈ ಶಾಲೆಯ ಪ್ರಧಾನ ಗುರುಗಳಾಗಿ ಬಂದು ಶಾಲೆಯ ಅಭಿವೃದ್ಧಿ ಕನಸು ಕಂಡರು. ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಸುವ್ಯವಸ್ಥಿತ ಕಾಂಪೌಂಡ್‌ ನಿರ್ಮಾಣವಾದವು.

ಒಂದು ಕನ್ನಡ ಶಾಲೆ ಅದರಲ್ಲೂ ಶತಮಾನಕ್ಕೂ ಹಳೆಯ ಶಾಲೆಯನ್ನು ಅಭಿವೃದ್ಧಿ ಪಡಿಸುವುದು ಎಂದರೆ ಸಣ್ಣ ಮಾತಲ್ಲ. ಇದಕ್ಕೆ ಅನೇಕ ದಾನಿಗಳು, ಪಾಲಕರು ನೆರವು ನೀಡಿದ್ದಾರೆ. ಅನೇಕ ಹಳೆಯ ಶಾಲೆಗಳು ಮುಚ್ಚುವ ಹಂತದಲ್ಲಿದೆ. ಸರ್ಕಾರಿ ಶಾಲೆಗೆ ಮಕ್ಕಳ ದಾಖಲಾತಿ ಸಂಖ್ಯೆಯೂ ಕುಂಠಿತಗೊಳ್ಳುತ್ತಿರುವಾಗ ಈ ಶಾಲೆ ಕನ್ನಡ ಶಾಲೆಗೆ ಮಾದರಿಯಾಗಿದೆ ಎನ್ನುತ್ತಾರೆ ಶಾಲೆಯ ಶಿಕ್ಷಕರು.

ಆ ಕೊರತೆ, ಈ ಸಮಸ್ಯೆ ಎಂದು ನರಳುತ್ತಿರುವುದರ ನಡುವೆ ಈ ಶಾಲೆ ಬೆಳೆದು ನಿಂತಿದೆ. ಇಲ್ಲಿ ಶಿಕ್ಷಕರ ಸಮಸ್ಯೆ, ಮೂಲಭೂತ ಸೌಲಭ್ಯ ಎನ್ನುವ ಮಾತೇ ಇಲ್ಲವಾಗಿದೆ. ಹಾಗಾಗಿ ಇದೊಂದು ಮಾದರಿ ಸರ್ಕಾರ ಶಾಲೆಯಾಗಿ ರೂಪಗೊಂಡಿದೆ.

ಒಂದು ಶಾಲೆಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಯಾವ ಖಾಸಗಿ ಶಾಲೆಗೂ ಕಮ್ಮಿ ಇಲ್ಲದಂತೆ ಸೌಲಭ್ಯ ಕಲ್ಪಿಸಲಾಗುತ್ತಿದೆ. ಸ್ಮಾರ್ಟ್‌ ಬೋರ್ಡ್‌, ಟ್ಯಾಬ್‌ ಮೂಲಕ ಮಕ್ಕಳಿಗೆ ಬೋಧನೆ ಮಾಡುವ ಚಿಂತನೆ ಇದ್ದು, ದಾನಿಗಳು ಭರವಸೆ ನೀಡಿದ್ದಾರೆ ಎಂದು ಮುಖ್ಯೋಪಾಧ್ಯಾಯ ಎಚ್‌.ಎಂ. ಕುಂದರಗಿ ಹೇಳಿದರು.

ಮೊದಲು ಈ ಶಾಲೆ ಅಭಿವೃದ್ಧಿ ಇರಲಿಲ್ಲ. ಕಾಂಪೌಂಡ್‌, ಶೌಚಾಲಯ ಸಮಸ್ಯೆ ಇತ್ತು. ಈಗ ಶಾಲೆಗೆ ಯಾವ ಕೊರತೆಯೂ ಇಲ್ಲದಂತಾಗಿದೆ. ಮಕ್ಕಳ ಶೈಕ್ಷಣಿಕ, ಬೌದ್ಧಿಕ ಬೆಳವಣಿಗೆಗೆ ಶ್ರಮಿಸಲಾಗುತ್ತಿದೆ. ಕಲಿಕೆಗೆ ಉತ್ತಮ ವಾತಾವರಣ ನಿರ್ಮಿಸಲಾಗುತ್ತಿದೆ ಎಂದು ಸಹಶಿಕ್ಷಕಿ ತಬಸ್ಸುಂ ಪಟ್ಟಣದ ತಿಳಿಸಿದರು.

ಸರ್ಕಾರಿ ಶಾಲೆಗಳು ಉಳಿಯಬೇಕು, ಬೆಳೆಯಬೇಕು ಎಂಬ ಉದ್ದೇಶದಿಂದ ನಮ್ಮ ಕೈಲಾದ ಸೇವೆ ಮಾಡುತ್ತಿದ್ದೇವೆ. ಈ ಶಾಲೆ ಹಳೆ ವಿದ್ಯಾರ್ಥಿಗಳು ಸೇರಿ ಬಣ್ಣ ತಂದು ಹಚ್ಚುತ್ತಿದ್ದೇವೆ. ಶಾಲೆಯ ಅಂಧ ಹೆಚ್ಚಿಸಲು ಶ್ರಮಿಸಿದ್ದೇವೆ ಎಂದು ಶಾಲೆಯ ಹಳೆಯ ವಿದ್ಯಾರ್ಥಿ ಸಹದೇಹ ಅಮ್ಮಿನಬಾವಿ ಹೇಳಿದರು.