ಸಾರಾಂಶ
ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಿ ನಿವೃತ್ತರಾದ, ಇದೇ ಶಾಲೆಯಲ್ಲಿ ಕಲಿತು ಮುಂದೆ ಶಿಕ್ಷಕರಾಗಿ ವಿವಿಧ ಶಾಲೆಗಳಲ್ಲಿ ದುಡಿಯುತ್ತಿರುವ ಶಿಕ್ಷಕರಿಗೆ ‘ಶತಮಾನೋತ್ಸವದ ಗುರುವಂದನೆ’ ನೀಡಿ ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಕಾಪು
ಸ್ವಾತಂತ್ರ್ಯಪೂರ್ವದಲ್ಲಿ ಗ್ರಾಮೀಣ ಭಾಗದ ಮಕ್ಕಳಿಗೆ ವಿದ್ಯೆ ನೀಡುವ ಮಹದುದ್ದೇಶದಿಂದ ಸ್ಥಾಪನೆಯಾದ, ಶತಮಾನೋತ್ಸವದ ಸಂಭ್ರಮದಲ್ಲಿರುವ ಇಲ್ಲಿನ ಶಿರ್ವ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ಅನುದಾನಿತ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ವೈಶಿಷ್ಟ್ಯಪೂರ್ಣವಾಗಿ ನಡೆಸಲಾಯಿತು.ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಿ ನಿವೃತ್ತರಾದ, ಇದೇ ಶಾಲೆಯಲ್ಲಿ ಕಲಿತು ಮುಂದೆ ಶಿಕ್ಷಕರಾಗಿ ವಿವಿಧ ಶಾಲೆಗಳಲ್ಲಿ ದುಡಿಯುತ್ತಿರುವ ಶಿಕ್ಷಕರಿಗೆ ‘ಶತಮಾನೋತ್ಸವದ ಗುರುವಂದನೆ’ ನೀಡಿ ಸನ್ಮಾನಿಸಲಾಯಿತು.ಮುಖ್ಯ ಅತಿಥಿಯಾಗಿ ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಪ್ರಾಚಾರ್ಯರಾದ ಡಾ. ತಿರುಮಲೇಶ್ವರ ಭಟ್ ಸನ್ಮಾನ ನೆರವೇರಿಸಿ, ಪ್ರಾಥಮಿಕ ಶಾಲಾ ಶಿಕ್ಷಕರ ನಿಷ್ಕಲ್ಮಶ ಪ್ರೀತಿ ಮರೆಯಲು ಸಾಧ್ಯವಿಲ್ಲ. ಈ ಶಿಕ್ಷಕರು ಪುಣ್ಯಾತ್ಮರು. ವಿದ್ಯಾರ್ಥಿಗಳ ಒಲವನ್ನು ಪಡೆಯುವ ಅವಕಾಶ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮಾತ್ರ ಲಭ್ಯ ಎಂದರು.ಶಾಲಾ ಹಳೆವಿದ್ಯಾರ್ಥಿ, ನಿಟ್ಟೆಯ ಜಸ್ಟಿಸ್ ಕೆ.ಎಸ್.ಹೆಗ್ಡೆ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಹಿರಿಯ ಪ್ರಾಧ್ಯಾಪಕ ಡಾ.ರಾಧಾಕೃಷ್ಣ ಶರ್ಮ, ಬಾಲ್ಯದ ಶಾಲಾ ದಿನಗಳನ್ನು ಸ್ಮರಿಸಿ, ಶತಮಾನೋತ್ಸವ ಕಾರ್ಯಕ್ಕೆ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.ಶಾಲೆಯ ನಿವೃತ್ತ ಶಿಕ್ಷಕರಾದ ಎನ್.ರಾಧಾಕೃಷ್ಣ ಪ್ರಭು, ಬಿ.ಪುಂಡಲೀಕ ಮರಾಠೆ, ಲೀಲಾವತಿ ಪಾಟ್ಕರ್, ಜಯಂತಿ ಬಾ, ಅನಸೂಯ ಟೀಚರ್, ಹಿಲ್ಡಾ ಮತಾಯಸ್, ಲಾವಣ್ಯ ಟೀಚರ್ ಅವರನ್ನು ಸನ್ಮಾನಿಸಲಾಯಿತು.ಸಮಾರಂಭದ ಅಧ್ಯಕ್ಷತೆಯನ್ನು ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಮಾಧವ ಕಾಮತ್ ವಹಿಸಿ, ಸ್ವಾಗತಿಸಿದರು. ಶಾಲಾಡಳಿತ ಮಂಡಳಿ ಅಧ್ಯಕ್ಷ ಶಶಿಧರ ವಾಗ್ಲೆ, ಸಂಚಾಲಕ ರಾಮದಾಸ್ ಪ್ರಭು, ಬಂಟಕಲ್ಲು ದೇವಳದ ಆಡಳಿತ ಮೊಕ್ತೇಸರ ಗಂಪದಬೈಲು ಜಯರಾಮ ಪ್ರಭು, ಮುಖ್ಯಶಿಕ್ಷಕಿ ಸಂಗೀತಾ ಆರ್. ಪಾಟ್ಕರ್ ಉಪಸ್ಥಿತರಿದ್ದರು. ಹಳೆವಿದ್ಯಾರ್ಥಿ ಪ್ರಭಾಕರ ಜೋಗಿ ನಿರೂಪಿಸಿದರು. ಕಾರ್ಯದರ್ಶಿ ಕೆ.ಆರ್.ಪಾಟ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿ ವಂದಿಸಿದರು.