ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ರಾಷ್ಟ್ರೀಯ ಹೆದ್ದಾರಿ 69 ನ್ನು ಬೈರೇನಹಳ್ಳಿ ಕ್ರಾಸ್‌ನಿಂದ ಅಣಕನೂರು ಕ್ರಾಸ್‌ವರೆಗೆ 52 ಕಿ.ಮೀ. ಇರುವ ರಸ್ತೆ ಕಾಮಗಾರಿಗೆ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು 400 ಕೋಟಿ ಬಿಡುಗಡೆ ಮಾಡಿದ್ದಾರೆ. ಇದು ತಾವು ರಾಜ್ಯದಲ್ಲಿ ಸಚಿವರಾಗಿದ್ದಾಗ ನಡೆಸಿದ ಪ್ರಯತ್ನದ ಫಲ ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದರು.ನಗರದ ಎಂ.ಜಿ.ರಸ್ತೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ 69 ಅಗಲೀಕರಣ ಕಾಮಗಾರಿ ಸ್ಥಳಕ್ಕೆ ಭೇಟಿನೀಡಿ, ಕಾಮಗಾರಿಗೆ ಅಡ್ಡಿಯಾಗಿದ್ದ ಮಳಿಗೆಗಳ ಮಾಲೀಕರ ಜತೆ ಮಾತನಾಡಿ ಸಹಕಾರ ನೀಡುವಂತೆ ಕೋರಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.ಮಾದರಿ ರಸ್ತೆ ನಿರ್ಮಾಣ
ನಗರದ ಅಭಿವೃದ್ಧಿ ದೃಷ್ಟಿಯಿಂದ ರಾಷ್ಟ್ರೀಯ ಹೆದ್ದಾರಿ 69ಕ್ಕೆ ಇರುವ ಎಲ್ಲಾ ಕಂಟಕಗಳು ನಿವಾರಣೆ ಆಗಿದ್ದು ಶೀಘ್ರದಲ್ಲಿಯೇ ಮಾದರಿ ರಸ್ತೆ ನಿರ್ಮಾಣ ಕಾರ್ಯ ನಡೆಯಲಿದೆ.ಅಂಗಡಿಗಳ ಮಾಲಿಕರಿಗೆ ತೆರವು ಕಾರ್ಯಚರಣೆಯಿಂದ ನೋವಾಗಿರುವುದಕ್ಕೆ ನಾನು ವೈಯಕ್ತಿಕವಾಗಿ ಕ್ಷಮೆ ಕೇಳುತ್ತೇನೆ. ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44 ರ ಚದಲಪುರದಿಂದ ನಗರಕ್ಕೆ ಸಂಪರ್ಕ ಕಲ್ಪಿಸಿರುವ ರಸ್ತೆ ಅಂದವಾಗಿರುವಂತೆ ಇದೂ ಕೂಡ ಆಗಲಿದೆ. ಬೆಸ್ಕಾಂ, ರೈಲ್ವೆ ಅಧಿಕಾರಿಗಳು, ಬಿಎಸ್‌ಎನ್‌ಎಲ್,ಸಿಎಂಸಿ ಅಧಿಕಾರಿಗಳ ಸಭೆ ನಡೆಸಿ ನಗರದಲ್ಲಿ ರಸ್ತೆ ಹೇಗಿರಬೇಕು ಎಂದು ತೀರ್ಮಾನ ಮಾಡಿ ಅದರಂತೆ ಮಾಡಲಾಗುವುದು ಎಂದರು.ಸಚಿವರಿಗೆ ಮಾಹಿತಿ ಇಲ್ಲಎಂ.ಜಿ.ರಸ್ತೆಯಲ್ಲಿ ಕಟ್ಟಡ ತೆರವು ಮಾಡುವಾಗ ಕೆಂಪುಗುರುತು ಬಿಟ್ಟು ಹಳದಿ ಗುರುತಿನವರೆಗೆ ಕಟ್ಟಡ ಒಡೆಯಿರಿ ಎಂದು ಶಾಸಕರು ಹೇಳಿದ್ದಾರಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಂಸದ ಸುಧಾಕರ್, ಪಾಪ ಅವರಿಗೆ ಈ ಯೋಜನೆ ಯಾರು ತಂದಿದ್ದಾರೆ, ರಾಷ್ಟ್ರೀಯ ಹೆದ್ದಾರಿ ನಿಯಮಾವಳಿಗಳೇನು, ಎಲ್ಲಿಂದ ಎಲ್ಲಿಯವರೆಗೆ ಇದರ ಕಾಮಗಾರಿ ನಡೆಯುತಿದೆ. ಎಲ್ಲೆಲ್ಲಿ ಸಮಸ್ಯೆ ಆಗಿತ್ತು, ಯೋಜನೆಯ ವೆಚ್ಚವೇನು, ನಾನು ಯಾರ ಯಾರ ಬಳಿಹೋಗಿ ಮನವಿ ಮಾಡಿ ಈ ಯೋಜನೆ ಕಾರ್ಯಗತ ಮಾಡಿಸಿದ್ದೇನೆ ಎಂಬುದು ಗೊತ್ತಿಲ್ಲ. ಮಾಹಿತಿ ಇಲ್ಲದೆ ಏನೇನೋ ಹೇಳಿರಬಹುದು. ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳಲಾಗದು ಎಂದರು.ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹೆದ್ದಾರಿ ನಿಯಮಾವಳಿಗಳಂತೆ ರಸ್ತೆ ಅಗಲೀಕರಣ ಮಾಡಬೇಕು. ಯಾರೋ ಸ್ಥಳೀಯ ಮುಖಂಡ ಹೇಳಿದ ಅಂತಲೋ, ಇನ್ಯಾರೋ ಹೇಳಿದ ಅಂತಲೋ ಅಗಲೀಕರಣದಲ್ಲಿ ರಾಜೀ ಆಗಬಾರದು. ಗುಣಮಟ್ಟದಲ್ಲಿ ಕೂಡ ರಾಜೀಯಾಗದಂತೆ ಇದನ್ನು ನಿರ್ಮಾಣ ಮಾಡಬೇಕು. ಯಾರೋ ಬಂದು ಏನೋ ಹೇಳಿದರು ಎಂದು ಮುಲಾಜಿಗೆ ಒಳಗಾಗಿ ನಿಯಮಗಳನ್ನು ಗಾಳಿಗೆತೂರಿದರೆ ಪರಿಣಾಮ ಎದುರಿಸಬೇಕಾದೀತು ಎಂದು ಎಚ್ಚರಿಸಿದರು.
ಈ ವೇಳೆ ನಗರಸಭೆ ಅಧ್ಯಕ್ಷ ಗಜೇಂದ್ರ,ಉಪಾಧ್ಯಕ್ಷ ನಾಗರಾಜು, ಹೆದ್ದಾರಿ ಪ್ರಾಧಿಕಾರದ ಸಹಾಯಕ ಅಭಿಯಂತರ ಮಲ್ಲಿಕಾರ್ಜುನ್, ಗುತ್ತಿಗೆದಾರ ವೆಂಕಟ್, ಗೋವಿಂದರಾಜು,ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು,ಸ್ಥಳಿಯ ಮುಖಂಡರು ಇದ್ದರು.