ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಅನ್ನದಾತರು ಸ್ಥಾಪಿಸಿರುವ ರೈತ ಉತ್ಪಾದಕ ಸಂಸ್ಥೆ (ಎಫ್.ಪಿ.ಒ)ಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರಗಳಿಂದ ಸಕಲ ನೆರವು ಒದಗಿಸಲಾಗುವುದು ಎಂದು ಸಚಿವ ಡಾ.ಎಂ.ಬಿ.ಪಾಟೀಲ ಭರವಸೆ ನೀಡಿದರು.ತಿಕೋಟಾ ತಾಲೂಕಿನ ಟಕ್ಕಳಕಿ ಗ್ರಾಮದಲ್ಲಿ ಬಿಜಾಪುರ ತೋಟಗಾರಿಕೆ ರೈತರ ಉತ್ಪಾದಕರ ಕಂಪನಿ ನಿಯಮಿತದಿಂದ ಆಯೋಜಿಸಲಾಗಿದ್ದ ರೈತ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು. ಎಫ್.ಪಿ.ಒಗಳು ಮತ್ತು ಸಹಕಾರ ಕ್ಷೇತ್ರಗಳಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಮಾತ್ರ ಅವುಗಳು ಅಭಿವೃದ್ಧಿಯಾಗಲು ಸಾಧ್ಯ. ಇಂಥ ಕಂಪನಿಗಳ ಆಡಳಿತ ಮಂಡಳಿಯವರು ಜಾಗೃತೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು. ಈ ವಿಚಾರದಲ್ಲಿ ಟಕ್ಕಳಕಿ ಎಫ್.ಪಿ.ಒ ಉತ್ತಮ ಕೆಲಸ ಮಾಡುತ್ತಿದೆ. ಇಲ್ಲಿ ಕೋಲ್ಡ್ ಸ್ಟೋರೇಜ್ ಪ್ರಾರಂಭಿಸಲು ಪ್ರಾಮಾಣಿಕ ಪ್ರಯತ್ನ ನಡೆದಿದ್ದು, ದೇಶಕ್ಕೆ ಟಕ್ಕಳಕಿ ಮಾದರಿಯಾಗಬೇಕು. ರೈತರ ಬೆಳೆಗೆ ಉತ್ತಮ ಬೆಲೆ ಸಿಗಲು ಶಕ್ತಿ ತುಂಬಬೇಕು ಎಂದು ಸಚಿವರು ಹೇಳಿದರು.
ಎತ್ತರದ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಿ ಅಸಾಧ್ಯ ಕೆಲಸವನ್ನು ಭಗೀರಥ ಮಹರ್ಷಿಗಳ ಆಶೀರ್ವಾದದಿಂದ ಮಾಡಿ ತೋರಿಸಿದ್ದೇನೆ. ಬಬಲೇಶ್ವರ ಮತಕ್ಷೇತ್ರವನ್ನು ಅಭಿವೃದ್ಧಿಯಲ್ಲಿ ದೇಶಕ್ಕೆ ಮಾದರಿಯಾಗಿ ಮಾಡುವ ಗುರಿ ಇದ್ದು, ಈ ನಿಟ್ಟಿನಲ್ಲಿ ಕಾರ್ಯೋನ್ಮುಖನಾಗಿದ್ದೇನೆ ಎಂದು ಭಾವುಕರಾದರು.ಗ್ಯಾರಂಟಿ ಯೋಜನೆ ಅನುಷ್ಠಾನದಲ್ಲಿ ವಿಜಯಪುರ ಜಿಲ್ಲೆ ರಾಜ್ಯದಲ್ಲಿ ಎರಡನೇ ಮತ್ತು ತಿಕೋಟಾ ತಾಲೂಕು ಮೊದಲ ಸ್ಥಾನದಲ್ಲಿದೆ. ಬಬಲೇಶ್ವರ ತಾಲೂಕು ಮೂರನೇ ಸ್ಥಾನದಲ್ಲಿದೆ. ಶೇ.೯೯ರಷ್ಡು ಜನರಿಗೆ ಯೋಜನೆಗಳ ಲಾಭ ದೊರೆತಿದ್ದು, ಮತಕ್ಷೇತ್ರದಲ್ಲಿ ಮಾದರಿಯಾಗಿ ಹಳ್ಳಕ್ಕೆ ನೀರು ಹರಿಸಿ ಪ್ರತಿ ಕಿಮೀಗೆ ಒಂದರಂತೆ ಚೆಕ್ ಡ್ಯಾಂ ನಿರ್ಮಿಸಿ ಅಂತರ್ಜಲ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.ಜೈನಾಪುರದ ರೇಣುಕಾ ಶಿವಾಚಾರ್ಯರು ಮಾತನಾಡಿ, ಜನರ ಪ್ರಾಮಾಣಿಕ ಸೇವೆ ಮಾಡುವ ಮೂಲಕ ಸಚಿವ ಎಂ.ಬಿ.ಪಾಟೀಲ ಅವರು ಜಗದೀಶನ ಸೇವೆ ಮಾಡುತ್ತಿದ್ದಾರೆ. ಶ್ರೀಶೈಲ ಬೆಟ್ಟದಷ್ಟು ಎತ್ತರದ ಕೆಲಸಗಳನ್ನು ಮಾಡಿದ್ದಾರೆ. ರೈತಪರ ಚಿಂತನೆಯುಳ್ಳ ನಾಯಕ ಮತ್ತಷ್ಟು ಉನ್ನತ ಸ್ಥಾನಕ್ಕೇರಲಿದ್ದಾರೆ ಎಂದು ಹರಸಿದರು.ಪ್ರಾಸ್ತಾವಿಕಕವಾಗಿ ಮಾತನಾಡಿದ ರೈತ ಮುಖಂಡ ಯಾಕೂಬ ಜತ್ತಿ, ದ್ರಾಕ್ಷಿ ಬೆಳೆಗಾರರ ಹಿತರಕ್ಷಣೆಗಾಗಿ ಮತ್ತು ಕೃಷಿ ವೆಚ್ಚ ತಗ್ಗಿಸಲು ಸಮಾನ ಆಸಕ್ತರ ಗುಂಪು ರಚಿಸಿ, ತಲಾ ೨೦ ಸದಸ್ಯರಂತೆ ೫೦ ಗುಂಪು ರಚಿಸಿ ಪ್ರಾಥಮಿಕವಾಗಿ ₹ ೧೦ ಲಕ್ಷ ಸಂಗ್ರಹಿಸಿದ್ದೇವೆ. ಅಲ್ಲದೇ, ತೋಟಗಾರಿಕೆ ಇಲಾಖೆಯ ಸಹಾಯ ಪಡೆದು ಸಲಕರಣೆ ಮತ್ತಿತರ ಸೌಲಭ್ಯ ಪಡೆದಿದ್ದು, ನಮ್ಮ ಕಂಪನಿ ಯಾವುದೇ ಲಾಭಾಂಶ ನಿರೀಕ್ಷಿಸದೇ ಸರ್ಕಾರದ ಯೋಜನೆಗಳನ್ನು ನೇರವಾಗಿ ಫಲಾನುಭವಿಗಳಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ನಮ್ಮ ಕಂಪನಿ ಲಾಭದಲ್ಲಿದೆ ಎಂದು ತಿಳಿಸಿದರು.ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ಸಂಕಷ್ಟದಲ್ಲಿದ್ದ ರೈತರಿಗೆ ನೀರಾವರಿ ಸೌಲಭ್ಯ ಒದಗಿಸುವ ಮೂಲಕ ಸಚಿವ ಎಂ. ಬಿ.ಪಾಟೀಲರು ಶ್ರೀಮಂತರಾಗಿ ಮಾಡಿದ್ದಾರೆ. ಅಭಿವೃದ್ಧಿ ಪರ ನಾಯಕರಾಗಿದ್ದಾರೆ. ಮತಕ್ಷೇತ್ರದ ಮಕ್ಕಳ ಕಲ್ಯಾಣಕ್ಕಾಗಿ ಸಿ.ಎಸ್.ಆರ್ ಫಂಡ್ ನೀಡಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಿದ್ದಾರೆ ಎಂದರು.ಈ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕಿ ರೂಪಾ.ಎಲ್ ಮತ್ತು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಾಹುಲಕುಮಾರ ಭಾವಿದೊಡ್ಡಿ, ಗ್ರಾಪಂ ಅಧ್ಯಕ್ಷ ಶಿವಪ್ಪ ಚಲವಾದಿ, ಮುಖಂಡರಾದ ಸೋಮನಾಥ ಬಾಗಲಕೋಟ, ಮಧುಕರ ಜಾಧವ, ಎಸ್.ಎಚ್.ನಾಡಗೌಡರ, ಜಕ್ಜಪ್ಪ ಯಡವೆ, ಗುರುಪಾದಗೌಡ ದಾಶ್ಯಾಳ, ಪೋಪಟ ಮಹಾರಾಜ, ರಾಜಶೇಖರ ಪವಾರ ಮುಂತಾದವರು ಇದ್ದರು.ಕೋಟ್‌ಅಭಿವೃದ್ಧಿ ಮತ್ತು ರೈತರ ಕಲ್ಯಾಣದ ವಿಚಾರದಲ್ಲಿ ನಮ್ಮ ಜಿಲ್ಲೆ ಮಹಾರಾಷ್ಟ್ರದ ಶರದ ಪವಾರ ಅವರ ಬಾರಾಮತಿ ಜಿಲ್ಲೆ ಜೊತೆ ಸ್ಪರ್ಧೆ ನೀಡಬೇಕು. ಈ ನಿಟ್ಟಿನಲ್ಲಿ ನಾವು ಕಾರ್ಯನ್ಮುಖರಾಗಿದ್ದೇವೆ. ಟಕ್ಕಳಕಿ ಎಫ್.ಪಿ.ಒದಂಥ ಆಹಾರ ಸಂಸ್ಕರಣಾ ಘಟಕಗಳಿಂದ ರೈತರಿಗೆ ಹೆಚ್ಚಿನ ಲಾಭ ಸಿಗುತ್ತದೆ. ಉದ್ಯೋಗವೂ ಸೃಷ್ಟಿಯಾಗುತ್ತದೆ. ಇಂಥ ಎಫ್.ಪಿ.ಒಗಳ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಸಕಲ ನೆರವು ನೀಡಲಾಗುವುದು.ಎಂ.ಬಿ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ