ಕನ್ನಡಪ್ರಭ ವಾರ್ತೆ ಕಡೂರು

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಮಹಿಳಾ ಸಬಲೀಕರಣದ ಹೆಸರಿನಲ್ಲಿ ದೇಶದ ಮಹಿಳೆಯರಿಗೆ ಮತ್ತೆ ಮೋಸ ಮಾಡುತ್ತಿದೆ ಎಂದು ಜಿಲ್ಲಾಕಾಂಗ್ರೆಸ್ ನ ಪ್ರಚಾರ ಸಮಿತಿ ಅಧ್ಯಕ್ಷ ಸೈಯ್ಯದ್ ಹನೀಫ್ ಆರೋಪಿಸಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಸಂಸತ್ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಕಾಯ್ದೆ ಮಂಡಿಸಿದರೂ, ಪ್ರತಿಪಕ್ಷಗಳಿಗೆ ಮಸೂದೆ ಅಧ್ಯಯನಕ್ಕೆ ಸಮರ್ಪಕ ಅವಕಾಶವೇ ನೀಡಲಿಲ್ಲ. ಮಹಿಳಾ ಮೀಸಲಾತಿ ವಿಚಾರದಲ್ಲಿ ದ್ವಂದ್ವ ನಿಲುವಿನೊಂದಿಗೆ ಬಿಜೆಪಿಗರು ಅಪ್ರಚಾರ ಮಾಡುತ್ತಿದ್ದಾರೆ. ಕೇವಲ 24 ಗಂಟೆಗಳ ಮುಂಚೆಯೇ ಕರಡು ಪ್ರತಿಗಳನ್ನು ಹಂಚಿಕೆ ಮಾಡಲಾಗಿತ್ತು. ಕಾಂಗ್ರೆಸ್ ಸರ್ಕಾರವು ದಿ.ರಾಜೀವ್ ಗಾಂಧಿಯವರ ನೇತೃತ್ವದಲ್ಲಿ 73 ಮತ್ತು 74ನೇ ಸಂವಿಧಾನ ತಿದ್ದುಪಡಿ ಮೂಲಕ ಗ್ರಾಮೀಣ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ 33 ಮೀಸಲಾತಿ ಜಾರಿ ಗೊಳಿಸಿರುವುದು ಕಾಂಗ್ರೆಸ್ ಮಹಿಳಾ ಸಬಲೀಕರಣಕ್ಕೆ ಒತ್ತು ಕೊಡಲಾಗಿದೆ ಎಂದರು.

2010ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ಮಹಿಳೆಯರಿಗೆ ಶೇ 33 ಮೀಸಲಾತಿ ನೀಡುವ ಮಸೂದೆಯನ್ನು ರಾಜ್ಯಸಭೆಯಲ್ಲಿ ಅಂಗೀಕರಿಸಿತ್ತು. ಬಳಿಕ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಮಹಿಳಾ ಮೀಸಲಾತಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲು ಒತ್ತಾಯಿಸಿದ್ದರೂ ಯಾವುದೇ ಸ್ಪಂದನೆ ದೊರಕಲಿಲ್ಲ ಎಂದರು.

2023ರಲ್ಲಿ ಬಿಜೆಪಿ ಸರ್ಕಾರವು ಮಹಿಳಾ ಮೀಸಲಾತಿ ಮಸೂದೆ ಮಂಡಿಸಿದಾಗ ಕಾಂಗ್ರೆಸ್ ಪಕ್ಷ ಸಂಪೂರ್ಣ ಬೆಂಬಲ ನೀಡಿತು. ಆದರೂ ಕ್ಷೇತ್ರ ಮರು ವಿಂಗಡಣೆ ನೆಪದಲ್ಲಿ ಜಾರಿಗೆ ಅನಗತ್ಯ ವಿಳಂಬ ಮಾಡಲಾಗುತ್ತಿದೆ. ಕ್ಷೇತ್ರ ಮರು ವಿಂಗಡಣೆಯು ಅತ್ಯಂತ ಸೂಕ್ಷ್ಮ ವಿಷಯವಾಗಿದ್ದು, ಇದು ಸಂವಿಧಾನದ ಒಕ್ಕೂಟ ವ್ಯವಸ್ಥೆಯ ಮೇಲೆಯೇ ಪರಿಣಾಮ ಬೀರುವ ವಿಚಾರವಾಗಿದೆ. ಸಾರ್ವಜನಿಕ ಚರ್ಚೆ ಇಲ್ಲದೆ ಕಾಯ್ದೆ ಮಂಡಿಸಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ ಎಂದರು.


ಮತದಾರರ ಪಟ್ಟಿ ಸ್ವಚ್ಚಗೊಳಿಸುವ ನೆಪ ಇಟ್ಟುಕೊಂಡು ಎಸ್‌ಐಆರ್ ಮೂಲಕ ಶಿಕ್ಷಣ ವಂಚಿತ ಮತದಾರರನ್ನು ಪಟ್ಟಿಯಿಂದ ಕೈ ಬಿಟ್ಟು ಕ್ಷೇತ್ರವಾರು ಬಿಜೆಪಿ ಗೆಲುವು ಸಾಧಿಸಲು ಷಡ್ಯಂತ್ರ ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಮತದಾರರು ಬಿಜೆಪಿಗೆ ತಕ್ಕ ಉತ್ತರ ನೀಡಲಿದ್ದಾರೆ. ಶೃಂಗೇರಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಧಿಸಿದಂತೆ ಟಿ.ಡಿ.ರಾಜೇಗೌಡರ ಪರವಾಗಿ ಸುಪ್ರಿಂ ಕೋರ್ಟ್ ಮದ್ಯಂತರ ತಡೆಯಾಜ್ಞೆ ನೀಡುವ ಮೂಲಕ ಶಾಸಕ ಸ್ಥಾನ ಮುಂದುವರಿಸಿರುವುದು ಸ್ವಾಗತಾರ್ಹವಾಗಿದೆ. ನ್ಯಾಯಾಂಗದ ವ್ಯವಸ್ಥೆಯಡಿ ಡಿ.ಎನ್. ಜೀವರಾಜ್ ಅವರಿಗೆ ತಕ್ಕ ಉತ್ತರ ನೀಡಿದಂತಾಗಿದೆ ಎಂದರು.

ಕಡೂರು ಬ್ಲಾಕಿನ ಪ್ರಚಾರ ಸಮಿತಿ ಅಧ್ಯಕ್ಷ ಅಬಿದ್ ಪಾಷಾ, ಕಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಸೂರು ಚಂದ್ರಮೌಳಿ, ಜಿಲ್ಲಾ ಕೆಡಿಪಿ ಸದಸ್ಯ ಗುಮ್ಮನಹಳ್ಳಿ ಅಶೋಕ್, ಮಲ್ಲಿದೇವಿಹಳ್ಳಿ ಶ್ರೀನಿವಾಸ್, ಪ್ರಚಾರ ಸಮಿತಿ ಕಡೂರು ಉಸ್ತುವಾರಿ ಅಮರ್ ಡಿಸೋಜ, ನಾಗಮ್ಮ ಶಿವಕುಮಾರ್, ಲೋಲಾಕ್ಷಿಬಾಯಿ, ಹೊಸೂರು ಕುಮಾರ್, ಶ್ರೀನಿವಾಸ್, ತಂಬಿ, ರಾಜು, ಚಂದ್ರು ಮತ್ತಿತರು ಇದ್ದರು.