ಕೇಂದ್ರ ಸರ್ಕಾರದ ಬಜೆಟ್‌ನಿಂದ ರಾಜ್ಯಕ್ಕೆ ಮಲತಾಯಿ ಧೋರಣೆ ಆಗಿದೆ ಅನ್ನುತ್ತೀರಿ, ಹಾಗಾದರೆ ರಾಜ್ಯದ ಬಜೆಟ್‌ನಲ್ಲಿ ಜನರಿಗೆ ಏನು ನೀಡುತ್ತೀರಿ

ಕುಕನೂರು: ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಹಲವು ಬಾರಿ ಅನ್ಯಾಯವಾಗುತ್ತಿದ್ದು, ಈ ಬಾರಿಯ ಬಜೆಟ್‌ನಲ್ಲೂ ರಾಜ್ಯಕ್ಕೆ ಮಲತಾಯಿ ಧೋರಣೆಯಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಖಾಸಗಿ ಕಾರ್ಯಕ್ರಮದ ನಿಮಿತ್ತ ಭಾನುವಾರ ಪಟ್ಟಣಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರ ಜತೆ ಮಾತನಾಡಿದರು. ಕೇಂದ್ರ ಸರ್ಕಾರದ ಬಜೆಟ್‌ನಿಂದ ರಾಜ್ಯಕ್ಕೆ ಮಲತಾಯಿ ಧೋರಣೆ ಆಗಿದೆ ಅನ್ನುತ್ತೀರಿ, ಹಾಗಾದರೆ ರಾಜ್ಯದ ಬಜೆಟ್‌ನಲ್ಲಿ ಜನರಿಗೆ ಏನು ನೀಡುತ್ತೀರಿ, ಈ ಸಲದ ಬಜೆಟ್ ಗಾತ್ರ ಹೆಚ್ಚಳ ಆಗುತ್ತದೆಯಾ ಎಂಬ ಪ್ರಶ್ನೆಗೆ ರಾಜ್ಯದ ಜನತೆ ಹಿತಕ್ಕನುಗುಣವಾಗಿ ಬಜೆಟ್ ಮಾಡಲಿದ್ದೇವೆ. ರಾಜ್ಯ ಬಜೆಟ್ ಗಾತ್ರದ ಹೆಚ್ಚಳ ಬಗ್ಗೆ ನಮಗೂ ಜಿಜ್ಞಾಸೆ ಇದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಡಬೇಕಾದ ಅನುದಾನ ಸರಿಯಾಗಿ ನೀಡುತ್ತಿಲ್ಲ ಎಂದರು.

ರಾಜ್ಯದ ಜನತೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಬಿಜೆಪಿ ಸದಸ್ಯರನ್ನು ಆಯ್ಕೆ ಮಾಡಿದ್ದಾರೆ. ಮಾಜಿ ಸಿಎಂಗಳಾದ ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಚೆ, ಪ್ರಹ್ಲಾದ ಜೋಶಿ ಅವರಂಥ ಹಿರಿಯ ನಾಯಕರು ಆಯ್ಕೆಯಾಗಿದ್ದರೂ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಯಾರೂ ಮಾತನಾಡುತ್ತಿಲ್ಲ ಎಂದರು.

ರಾಜ್ಯದ ಅಂಗನವಾಡಿಗಳಲ್ಲಿ ಕರ್ತವ್ಯ ನಿರ್ವಹಿಸುವರಿಗೆ ಮುಂಬಡ್ತಿ ನೀಡಲಾಗುತ್ತಿದ್ದು, ಅಂಗನವಾಡಿಗಳಿಗೆ ಕಾಯಕಲ್ಪ ನೀಡಲು ₹೨೨ ಸಾವಿರ ಕೋಟಿ ಅನುದಾನ ನೀಡಲಾಗಿದೆ. ಅಂಗನವಾಡಿಗಳಲ್ಲಿ ಸಮಸ್ಯೆಗಳಿದ್ದರೆ ಬಗೆಹರಿಸಲಾಗುವುದು ಎಂದರು.

ಕೇಂದ್ರದಿಂದ ಪದೇ ಪದೇ ಮಲತಾಯಿ ಧೋರಣೆಯಾಗುತ್ತಿದೆ. ಪಶ್ಚಿಮ ಬಂಗಾಳ, ಅಸ್ಸಾಂಗೆ ಅಲ್ಲಿಯ ಚುನಾವಣೆ ಹಿನ್ನೆಲೆಯಲ್ಲಿ ಬಜೆಟ್‌ನಲ್ಲಿ ಹೆಚ್ಚು ಅನುದಾನ ನೀಡಲಾಗಿದೆ. ರಾಜ್ಯ ಸರ್ಕಾರ ನೀರಾವರಿ ಯೋಜನೆಗಳ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿದೆ. ನೀರಾವರಿ ಯೋಜನೆ ರಾಷ್ಟ್ರೀಯ ಯೋಜನೆ ಎಂಬ ಘೋಷಣೆಯ ನಿರೀಕ್ಷೆ ನಮಗೆ ಇತ್ತು. ಬಜೆಟಿನಲ್ಲಿ ಗ್ರಾಮೀಣ ಭಾಗಕ್ಕೆ ಒತ್ತು ನೀಡಲಾಗಿದೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಅವರು ಹೇಳದಿದ್ದರೆ ಮೋದಿ ಅವರು ಅಲ್ಲಿಂದಲೇ ಇವರನ್ನು ಚುಚ್ಚುತ್ತಾರೆ. ಹೇಳಿಕೊಳ್ಳುವಂತೆ ಯೋಜನೆ ರಾಜ್ಯಕ್ಕೆ ಕೇಂದ್ರ ನೀಡಿಲ್ಲ ಎಂದರು.

ಕೊಟ್ಟ ಮಾತಿನಂತೆ ನಾವು ಗ್ಯಾರಂಟಿ ಯೋಜನೆ ಜಾರಿಗೊಳಿಸಿದ್ದೇವೆ. ಇದುವರೆಗೂ ೨೬ ತಿಂಗಳ ಕಂತು ಬಿಡುಗಡೆಯಾಗಿದ್ದು, ಮನೆ ಮನೆಗೆ ನಮ್ಮ ಯೋಜನೆಗಳು ತಲುಪುತ್ತಿವೆ. ಕಳೆದ ವರ್ಷದ ಫೆಬ್ರವರಿ, ಮಾರ್ಚ್ ತಿಂಗಳ ಹಣ ಬಿಡುಗಡೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಣಕಾಸು ಇಲಾಖೆಯವರು ಇಷ್ಟರಲ್ಲೇ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.

ಡಿಸಿಎಂಗೆ ಸಿಎಂ ಸ್ಥಾನ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡದಿದ್ದರೆ ಬಿಜೆಪಿ ಸೇರಲಿದ್ದಾರೆ ಎಂಬ ಮಾತಿಗೆ ಆ ವಿಚಾರ ಶಿವಕುಮಾರ ಅವರಿಗೆ ಬಿಟ್ಟಿದ್ದು ಎಂದರು.