ಬುಡಕಟ್ಟು ಜನಾಂಗಗಳ ಅಭಿವೃದ್ಧಿಗೆ ಕೇಂದ್ರ ಬದ್ಧ

| Published : Jan 08 2025, 12:15 AM IST

ಸಾರಾಂಶ

ದೇಶದಲ್ಲಿ ನರೇಂದ್ರ ಮೋದಿ ಸರ್ಕಾರ ಬಂದ ಬಳಿಕ ಬುಡಕಟ್ಟು ಸಮುದಾಯದ ಅಭಿವೃದ್ದಿಯಾಗುತ್ತಿದೆ. ಪರಿಶಿಷ್ಟ ಪಂಗಡಕ್ಕೆ ಸೇರಿದ ಒಬ್ಬ ಸಾಮಾನ್ಯ ಮಹಿಳೆ ಇವತ್ತು ದೇಶದ ಅತ್ಯುನ್ನತ ಪದವಿಯಾದ ರಾಷ್ಟ್ರಪತಿ ಸ್ಥಾನವನ್ನ ಅಲಂಕರಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಎಂದಾದರೂ ಬುಡಕಟ್ಟು ಸಮುದಾಯದ ಒಬ್ಬರನ್ನು ಈ ರೀತಿಯ ಉನ್ನತ ಸ್ಥಾನಕ್ಕೆ ನೇಮಿಸಿರಲಿಲ್ಲ.

ಕನ್ನಡಪ್ರಭ ವಾರ್ತೆ ಗುಡಿಬಂಡೆ

ಚಿಕ್ಕಬಳ್ಳಾಪುರ ಲೇಕಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯೇ ತಮ್ಮ ಗುರಿಯಾಗಿದ್ದು, ಅಭಿವೃದ್ಧಿ ವಿಚಾರದಲ್ಲಿ ಎಂದಿಗೂ ರಾಜಕೀಯ ಮಾಡೊಲ್ಲ. ಅಭಿವೃದ್ದಿ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್‌ ಸರ್ಕಾರದ ಜೊತೆಗೂ ಮಾತನಾಡುತ್ತೇನೆ ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದರು.

ತಾಲೂಕಿನ ಹಂಪಸಂದ್ರ ಗ್ರಾಪಂ ವ್ಯಾಪ್ತಿಯ ಚೆಂಡೂರು ಗ್ರಾಮದಲ್ಲಿ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಆದಿ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ಸುಮಾರು 20ಲಕ್ಷ ರೂಪಾಯಿ ವೆಚ್ಚದಲ್ಲಿ ಪರಿಶಿಷ್ಟ ಪಂಗಡ ಸಮುದಾಯದ ಮೂಲಭೂತ ಸೌಕರ್ಯಗಳಿಗೆ ಸಂಬಂಧಪಟ್ಟ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ಬುಡಕಟ್ಟು ಸಮುದಾಯದ ಅಭಿವೃದ್ಧಿ

ಈ ಹಿಂದೆ ಕಾಂಗ್ರೇಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಬುಡಕಟ್ಟು ಸಮುದಾಯಗಳ ಅಭಿವೃದ್ದಿ ಕೇವಲ ಭಾಷಣಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ ದೇಶದಲ್ಲಿ ನರೇಂದ್ರ ಮೋದಿ ಸರ್ಕಾರ ಬಂದ ಬಳಿಕ ಬುಡಕಟ್ಟು ಸಮುದಾಯದ ಅಭಿವೃದ್ದಿಯಾಗುತ್ತಿದೆ. ಪರಿಶಿಷ್ಟ ಪಂಗಡಕ್ಕೆ ಸೇರಿದ ಒಬ್ಬ ಸಾಮಾನ್ಯ ಮಹಿಳೆ ಇವತ್ತು ದೇಶದ ಅತ್ಯುನ್ನತ ಪದವಿಯಾದ ರಾಷ್ಟ್ರಪತಿ ಸ್ಥಾನವನ್ನ ಅಲಂಕರಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಎಂದಾದರೂ ಬುಡಕಟ್ಟು ಸಮುದಾಯದ ಒಬ್ಬರನ್ನು ಈ ರೀತಿಯ ಉನ್ನತ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು.

ಇನ್ನೂ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅನೇಕ ಜನಪರ ಕಾರ್ಯಕ್ರಮಗಳನ್ನು ರೂಪಿಸಿದೆ. ಬಡವರಿಗೆ ಬ್ಯಾಂಕ್ ಖಾತೆಯಿರಬೇಕು ಎಂದು ಜನ ಧನ್ ಯೋಜನೆ, ಸ್ವಚ್ಛ ಭಾರತ್ ಯೋಜನೆಯಡಿ ಶೌಚಾಲಯ, ಉಜ್ವಲ ಯೋಜನೆಯಡಿ ಅಡುಗೆ ಸಿಲಿಂಡರ್, ಪ್ರತಿ ಮನೆ ಮನೆಗೂ ನೀರು ನೀಡುವ ಉದ್ದೇಶದಿಂದ ಜಲ ಜೀವನ್ ಮಿಷನ್ ಯೋಜನೆ, ಉಚಿತ ಆರೋಗ್ಯ ನೀಡಲು ಆಯುಷ್ಮಾನ್ ಯೋಜನೆ, ರೈತರಿಗಾಗಿ ಫಸಲ್ ಭೀಮಾ ಯೋಜನೆ, ಪಿಎಂ ಕಿಸಾನ್ ಯೋಜನೆ ಹೀಗೆ ಅನೇಕ ಯೋಜನೆಗಳನ್ನು ಜಾರಿ ಮಾಡಿ ಎಲ್ಲ ಸಮುದಾಯಗಳ ಸರ್ವತೋಮುಖ ಅಭಿವೃದ್ದಿ ಶ್ರಮಿಸುತ್ತಿದ್ದಾರೆ ಎಂದರು.

ನೆರವು ನಿಲ್ಲಿಸಿದ ಕಾಂಗ್ರೆಸ್‌

ಈ ಹಿಂದೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಪಿಎಂ ಕಿಸಾನ್ ಯೋಜನೆಯಡಿ ವರ್ಷಕ್ಕೆ 6 ಸಾವಿರ ನೇರವಾಗಿ ರೈತ ಖಾತೆಗೆ ಜಮೆ ಮಾಡಲಾಗುತ್ತಿತ್ತು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ 6 ಸಾವಿರದ ಜೊತೆಗೆ 4 ಸಾವಿರ ಹಣ ರೈತರ ಖಾತೆಗೆ ಜಮೆ ಮಾಡಲಾಗುತ್ತಿತ್ತು. ಆದರೆ ಕಾಂಗ್ರೇಸ್ ಸರ್ಕಾರ ಬಂದ ಕೂಡಲೇ ಈ ನಾಲ್ಕು ಸಾವಿರ ಹಣವನ್ನು ನಿಲ್ಲಿಸಿದೆ. ಇದೇ ರೀತಿ ಕಾಂಗ್ರೇಸ್ ಸರ್ಕಾರ ಕೇವಲ ಭಾಷಣಗಳಿಗೆ, ಆಶ್ವಾಸನೆಗಳಿಗೆ ಮಾತ್ರ ಸೀಮಿತವಾಗಿದೆ ವಿನಃ ಜನರಿಗೆ ಯಾವುದೇ ಸಮಸ್ಯೆಗಳನ್ನು ಬಗೆಹರಿಸುತ್ತಿಲ್ಲ ಎಂದು ಆರೋಪಿಸಿದರು.

ಇನ್ನೂ ನಮ್ಮ ಮುಖಂಡರುಗಳು ಕೇಂದ್ರ ಸರ್ಕಾರದ ಜನಪರ ಯೋಜನೆಗಳ ಕುರಿತು ಜನಸಾಮಾನ್ಯರಿಗೆ ತಿಳಿಸುವಂತಹ ಕೆಲಸ ಮಾಡಬೇಕು. ಪ್ರತಿ ಮನೆಗೂ ಭೇಟಿ ನೀಡಿ ಮನೆಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳು ದೊರೆಯುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಂಡು, ಅವರಿಗೆ ಈ ಯೋಜನೆಗಳ ಸೌಲಭ್ಯಗಳು ದೊರಕಿಸಿಕೊಡುವಂತಹ ಕೆಲಸ ಮಾಡಬೇಕು ಎಂದರು.

ರಾಜ್ಯ ಸರ್ಕಾರದ ಜತೆಯೂ ಚರ್ಚೆ

ಜನರು ಯಾವುದೇ ಅಭಿವೃದ್ದಿ ಕಾಮಗಾರಿಗಳಾಗಿ ನನ್ನನ್ನು ಸಂಪರ್ಕ ಮಾಡಿ. ಅಭಿವೃದ್ದಿ ವಿಚಾರದಲ್ಲಿ ನಾನು ಕಾಂಗ್ರೇಸ್ ಸರ್ಕಾರದ ಜೊತೆಗೂ ಮಾತನಾಡಲು ನಾನು ಸಿದ್ದನಾಗಿರುತ್ತೇನೆ ಎಂದರು.

ಈ ಸಮಯದಲ್ಲಿ ರಾಜ್ಯ ವಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಕೋನಪ್ಪರೆಡ್ಡಿ, ಮುಖಂಡ ಹರಿನಾಥರೆಡ್ಡಿ ಮಾತನಾಡಿದರು. ಈ ಸಮಯದಲ್ಲಿ ಮುಖಂಡರಾದ ಕೇಶವರೆಡ್ಡಿ, ಚಂದ್ರು, ಮದ್ದರೆಡ್ಡಿ, ಬೈರಾರೆಡ್ಡಿ, ರಾಮಾಂಜಿ, ಚಂದ್ರು, ಚೆನ್ನಕೃಷ್ಣಾರೆಡ್ಡಿ ಸೇರಿದಂತೆ ಹಲವರು ಹಾಜರಿದ್ದರು.