ಕ್ಯಾಂಪ್ಕೊ ನಿರಂತರ ಪ್ರಯತ್ನಕ್ಕೆ ಪ್ರತಿಫಲ: ಅಡಕೆಯ ಸಮಗ್ರ ಸಂಶೋಧನೆಗೆ ನಿರ್ಧರಿಸಿದ ಕೇಂದ್ರ

| Published : Dec 05 2024, 12:31 AM IST

ಕ್ಯಾಂಪ್ಕೊ ನಿರಂತರ ಪ್ರಯತ್ನಕ್ಕೆ ಪ್ರತಿಫಲ: ಅಡಕೆಯ ಸಮಗ್ರ ಸಂಶೋಧನೆಗೆ ನಿರ್ಧರಿಸಿದ ಕೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರದ ಅನುಮೋದನೆಯಿಂದ ಲಕ್ಷಾಂತರ ಅಡಕೆ ಬೆಳೆಗಾರರ ಹಿತಕಾಪಾಡಲು ಶ್ರಮಿಸುತ್ತಿರುವ ಕ್ಯಾಂಪ್ಕೋದ ಪ್ರಯತ್ನಕ್ಕೆ ನೈತಿಕ ಬಲ ಸಿಕ್ಕಿದೆ ಎಂದು ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಅಡಕೆ ಕ್ಯಾನ್ಸರ್ ಕಾರಕವೆಂದು ವರ್ಗೀಕರಿಸಿದ ವಿಶ್ವ ಆರೋಗ್ಯ ಸಂಸ್ಥೆಯ ಪ್ರಮಾದವನ್ನು ಪುರಾವೆ ಸಮೇತ ಸಂಸದರಿಗೆ ಮನವರಿಕೆ ಮಾಡಿಸಿದ ಕ್ಯಾಂಪ್ಕೋದ ಪ್ರಯತ್ನಕ್ಕೆ ಯಶಸ್ಸು ಲಭಿಸಿದೆ. ಲೋಕಸಭಾ ಅಧಿವೇಶನದಲ್ಲಿ ಅಡಕೆ ಬೆಳೆಯುವ ಪ್ರದೇಶದ ಸಂಸದರ ಪ್ರಯತ್ನದಿಂದಾಗಿ ‘ಅಡಕೆ ಮತ್ತು ಮಾನವರ ಆರೋಗ್ಯದ ಕುರಿತು ಪುರಾವೆ ಆಧಾರಿತ ಸಂಶೋಧನೆ’ ನಡೆಸಲು ನಿರ್ಧರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಕ್ಯಾಂಪ್ಕೋ ಶ್ಲಾಘಿಸಿದೆ.

ಇದಕ್ಕೆ ಶ್ರಮಿಸಿದ ಅಡಕೆ ಬೆಳೆಯುವ ಪ್ರದೇಶದ ಎಲ್ಲ ಸಂಸದರಿಗೆ ಹಾಗೂ ಭಾರತೀಯ ಜೀವನ ಕ್ರಮದಲ್ಲಿ ಅಡಕೆಯ ಪಾತ್ರವನ್ನು ಗುರುತಿಸಿರುವ ಕೇಂದ್ರ ಕೃಷಿ ಸಚಿವರಿಗೆ ಕ್ಯಾಂಪ್ಕೋ ಅಧ್ಯಕ್ಷ ಎ. ಕಿಶೋರ್ ಕುಮಾರ್ ಕೊಡ್ಗಿಯವರು ಅಡಕೆ ಬೆಳೆಗಾರರ ಪರವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.

ಕೇಂದ್ರ ಸರ್ಕಾರದ ನಿರ್ಧಾರವು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಲು ಆದಷ್ಟು ಬೇಗ ಸಂಶೋಧನೆ ಪ್ರಾರಂಭಿಸುವಂತೆ ಅಡಕೆ ಬೆಳೆಯುವ ಪ್ರದೇಶಗಳ ಸಂಸದರು, ಸರ್ಕಾರವನ್ನು ಒತ್ತಾಯಿಸಲು ಕ್ಯಾಂಪ್ಕೋ ಎಲ್ಲ ಸಂಸದರಲ್ಲಿ ಮನವಿ ಮಾಡಿದೆ.

ವಿಶ್ವ ಆರೋಗ್ಯ ಸಂಸ್ಥೆ ತಪ್ಪು ಗ್ರಹಿಕೆಯಿಂದ ಅಡಕೆಯನ್ನು ಕ್ಯಾನ್ಸರ್ ಕಾರಕವೆಂದು ವರ್ಗೀಕರಿಸಿರುವ ಕ್ರಮದ ವಿರುದ್ಧ ಕ್ಯಾಂಪ್ಕೋ, ಮಾಧ್ಯಮಗಳು ಮತ್ತು ಜನಪ್ರತಿನಿಧಿಗಳ ಮೂಲಕ ನಿರಂತರ ಅಭಿಯಾನವನ್ನು ಮಾಡುತ್ತಲೇ ಬಂದಿದ್ದು, ಕೊನೆಗೂ ಸರ್ಕಾರಕ್ಕೆ ಮನವರಿಕೆ ಮಾಡುವಲ್ಲಿ ಯಶಸ್ಸು ಪಡೆದಿದೆ.

ಎಐಐಎಮ್‌ಎಸ್‌, ಸಿಎಸ್ ಐಆರ್-ಸಿಸಿಎಮ್‌ಬಿ, ಐಐಎಸ್‌ಸಿ ಮುಂತಾದ ದೇಶದ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳ ಸಹಕಾರದ ಮೂಲಕ ಅಡಕೆ ಮತ್ತು ಮಾನವನ ಆರೋಗ್ಯ ಬಗ್ಗೆ ಪುರಾವೆ ಆಧಾರಿತ ಸಂಶೋಧನೆ ನಡೆಸಲು ಕೇಂದ್ರ ಕೃಷಿ ಸಚಿವಾಲಯ ಅನುಮೋದನೆ ನೀಡಿದೆ. ಇದರಿಂದ ಅಡಕೆಯ ಕುರಿತು ಇರುವ ತಪ್ಪು ಗ್ರಹಿಕೆ ಹೋಗಲಾಡಿಸಿ ಅದರ ಆರೋಗ್ಯಕರ ಉಪಯೋಗಗಳ ವೈಜ್ಞಾನಿಕ ದಾಖಲೆ ಸಿಗಲು ಸಾಧ್ಯವಾಗಲಿದೆ ಎಂದಿದ್ದಾರೆ.ಅಡಕೆಯನ್ನು ಗುಟ್ಕಾ ಮತ್ತು ತಂಬಾಕಿನ ಜೊತೆ ಮಿಶ್ರಣ ಮಾಡಿದ ಉತ್ಪನ್ನಗಳ ಸಂಶೋಧನಾ ವರದಿಗಳನ್ನು ಗಣನೆಗೆ ತೆಗೆದುಕೊಂಡು ವಿಶ್ವ ಆರೋಗ್ಯ ಸಂಸ್ಥೆಯು ಅಡಕೆಯನ್ನು ಕ್ಯಾನ್ಸರ್ ಕಾರಕವೆಂದು ವರ್ಗೀಕರಣ ಮಾಡಿತ್ತು. ಆದರೆ ಕ್ಯಾಂಪ್ಕೋ ಮೊದಲಿನಿಂದಲೂ ಅಡಕೆಯ ಮೂಲ ರೂಪದಲ್ಲಿನ ಉಪಯೋಗವನ್ನು ಸಂಶೋಧಿಸಿ ವರ್ಗೀಕರಿಸಬೇಕೆಂದು ಪ್ರತಿಪಾದಿಸುತ್ತಲೇ ಬಂದಿದೆ. ಆ ರೀತಿಯಲ್ಲಿ ಮಾಡಿದ ಪ್ರತ್ಯೊಂದು ಸಂಶೋಧನಾ ವರದಿಗಳು ಅಡಕೆ ಕ್ಯಾನ್ಸರ್ ರೋಗವನ್ನು ಪ್ರತಿಬಂಧಿಸುವ ಔಷಧೀಯ ಗುಣಗಳ ಬಗ್ಗೆ ಸಾಕ್ಷೀಕರಿಸಿದ ದಾಖಲೆಗಳಿವೆ.

ಕೇಂದ್ರ ಸರ್ಕಾರದ ಅನುಮೋದನೆಯಿಂದ ಲಕ್ಷಾಂತರ ಅಡಕೆ ಬೆಳೆಗಾರರ ಹಿತಕಾಪಾಡಲು ಶ್ರಮಿಸುತ್ತಿರುವ ಕ್ಯಾಂಪ್ಕೋದ ಪ್ರಯತ್ನಕ್ಕೆ ನೈತಿಕ ಬಲ ಸಿಕ್ಕಿದೆ ಎಂದು ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.