ಹೊಸಪೇಟೆ: ಕೇಂದ್ರ ಚುನಾವಣಾ ಆಯೋಗ ಬಿಜೆಪಿಯ ಏಜೆಂಟ್ ರೀತಿಯಲ್ಲಿ ಕೆಲಸ ಮಾಡುತ್ತಿದೆ. ದೇಶದ ಬಡ ಜನರ ಮತ್ತು ನಿರಾಶ್ರಿತರ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಹುನ್ನಾರ ನಡೆಸಿದೆ ಎಂದು ಎಐಸಿಸಿ ಕಾರ್ಯದರ್ಶಿ ಗೋಪಿನಾಥ್ ಪಳನಿಯಪ್ಪನ್ ಆರೋಪಿಸಿದರು.ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಗುರುವಾರ ನಡೆದ ವಿಜಯನಗರ, ಕೊಪ್ಪಳ, ಬಳ್ಳಾರಿ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಮತ್ತು ಬೂತ್ ಮಟ್ಟದ ಬಿಎಲ್ಎ​2 ಏಜೆಂಟರುಗಳಿಗಾಗಿ ಚುನಾವಣೆ ಆಯೋಗ ನೇತೃತ್ವದಲ್ಲಿ ನಡೆಯುತ್ತಿರುವ ಎಸ್‌ಐಆರ್‌ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪಕ್ಷದ ನಿಲುವುಗಳಿಗೆ ಅನುಸಾರವಾಗಿ ಅನುಷ್ಠಾನಗೊಳಿಸುವ ಬೂತ್‌ ಮಟ್ಟದಲ್ಲಿ ಯಾವ ರೀತಿಯ ಪ್ರತಿಕ್ರಿಯೆ ಮಾಡಬೇಕು ಎನ್ನುವ ಕುರಿತು ಹಮ್ಮಿಕೊಂಡಿದ್ದ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಂದಿನ ದಿನಗಳಲ್ಲಿ ದೇಶದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಉದ್ದೇಶದಿಂದ ದೇಶದ ಮತದಾರರನ್ನು ಅದರಲ್ಲಿಯೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರ ಹಾಗೂ ಬಡ ಜನರು ಮತ್ತು ನಿರಾಶ್ರಿತರ ಮತಗಳನ್ನು ಮತದಾರರ ಪಟ್ಟಿಯಿಂದ ಕೈಬಿಡುವ ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ ಎಂದರು.

ಹಲವು ರಾಜ್ಯಗಳಲ್ಲಿ ಈಗಾಗಲೇ ಮತ ಪರಿಷ್ಕರಣೆ ಹೆಸರಿನಲ್ಲಿ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಬೇಡ ಜನರ ಲಕ್ಷಾಂತರ ಮತಗಳನ್ನು ತೆಗೆದು ಹಾಕಲಾಗುತ್ತಿದೆ. ಬೂತ್ ಮಟ್ಟದ ಏಜೆಂಟರು ಮತ್ತು ಪಕ್ಷದ ಮುಖಂಡರು, ಮತದಾರರ ಹೆಸರನ್ನು ಸೇರ್ಪಡೆ ಅಗತ್ಯ ಬೀಳುವ ದಾಖಲೆಗಳನ್ನು ಪರಿಶೀಲಿಸಿ ಬೂತ್ ಮಟ್ಟದಲ್ಲಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಜಾಗೃತಿ ಕರ್ನಾಟಕ ಸಂಸ್ಥೆಯ ಅಧಮ್ ಖಾನ್ ತರಬೇತಿ ಶಿಬಿರದಲ್ಲಿ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಸಿರಾಜ್ ಶೇಖ್, ಕೊಪ್ಪಳ ಜಿಲ್ಲಾಧ್ಯಕ್ಷ ಅಮರೇಗೌಡ ಬೈರಾಪುರ, ಬಳ್ಳಾರಿ ನಗರ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್, ಬಳ್ಳಾರಿ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ವಿಷ್ಣು ಬೋಯಪಾಟಿ, ಶಾಸಕರಾದ ರಾಘವೇಂದ್ರ ಹಿಟ್ನಾಳ್, ಬಿ.ಎಂ. ನಾಗರಾಜ್, ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಡಾ ಎನ್.ಟಿ ಶ್ರೀನಿವಾಸ, ಎಂ.ಪಿ. ಲತಾ ಮಲ್ಲಿಕಾರ್ಜುನ ಸೇರಿದಂತೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಬಗಲ್ ರಾಮಕೃಷ್ಣ, ಸೇವಾದಳದ ಜಿಲ್ಲಾ ಸಂಘಟಕ ಬಿ.ಮಾರೆಣ್ಣ, ಜಿಲ್ಲಾ ಉಪಾಧ್ಯಕ್ಷ ಕೆ. ರಮೇಶ್, ಮಹಿಳಾ ವಿಭಾಗದ ಕಾರ್ಯದರ್ಶಿ ಕವಿತಾ ಈಶ್ವರ ಸಿಂಗ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಇಂದುಮತಿ ಇದ್ದರು.