ಸಾರಾಂಶ
ಧಾರವಾಡ: ಕೇಂದ್ರ ಸರ್ಕಾರವು ವಿವಿಧ ಮಂತ್ರಾಲಯಗಳ ಅಡಿಯಲ್ಲಿ ರಾಜ್ಯದ ಅಭಿವೃದ್ಧಿಗಾಗಿ ವಿವಿಧ ಕಾಮಗಾರಿ ಮತ್ತು ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನಕ್ಕಾಗಿ ಅನುದಾನ ಬಿಡುಗಡೆ ಮಾಡುತ್ತದೆ. ಇದರಲ್ಲಿ ಪಾರದರ್ಶಕತೆ ಮತ್ತು ಗುಣಮಟ್ಟ ಕಾಪಾಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಜಿಪಂ ಸಭಾಂಗಣದಲ್ಲಿ ಶನಿವಾರ ಜರುಗಿದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ-ದಿಶಾ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿದರು.ಎಲ್ಲ ಇಲಾಖೆಗಳು ಕೇಂದ್ರ ಸರ್ಕಾರದ ಯೋಜನೆಗಳ ಪ್ರಗತಿ ಮತ್ತು ಅನುದಾನ ಬಳಕೆಯ ಬಗ್ಗೆ ನಿಯಮಿತವಾಗಿ ಸಂಸದರ ಕಚೇರಿಗೆ ವರದಿ ಸಲ್ಲಿಸಬೇಕು. ಕಾಮಗಾರಿಗಳ ಅನುಷ್ಠಾನ ಮತ್ತು ಫಲಾನುಭವಿಗಳ ಆಯ್ಕೆಯಲ್ಲಿ ಯಾವುದೇ ರೀತಿಯ ಗೊಂದಲ ಅಥವಾ ನಿಯಮ ಮೀರಿ ಮಾಡಬಾರದು. ದಿಶಾ ಸಭೆಗೆ ಅಧಿಕಾರಿಗಳು ಅಗತ್ಯ ಮಾಹಿತಿಯೊಂದಿಗೆ ಬರಬೇಕು. ಸಭೆಗೆ ಅನಿವಾರ್ಯ ಕಾರಣಗಳಿಂದ ಗೈರು ಹಾಜರಾಗುತ್ತಿದ್ದಲ್ಲಿ, ಜಿಪಂ ಸಿಇಓ ಅವರಿಗೆ ತಿಳಿಸಿ ಅನುಮತಿ ಪಡೆಯಬೇಕು. ಆದರೆ ಕೆಲವರು ಇಂದಿನ ಸಭೆಗೆ ಅನಧಿಕೃತವಾಗಿ ಗೈರು ಹಾಜರಾಗಿದ್ದು ಈ ಕುರಿತು ಗಂಭೀರವಾಗಿ ಪರಿಗಣಿಸಿ ಪರಿಶೀಲಸಬೇಕೆಂದು ಸಚಿವರು ನಿರ್ದೇಶಿಸಿದರು.
ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಲ್ಲಿ ಶೂನ್ಯ ದರದಲ್ಲಿ 5 ಕೆಜಿ ಪಡಿತರವನ್ನು ದೇಶದ 81.56 ಕೋಟಿ ನಾಗರಿಕರಿಗೆ ಕೇಂದ್ರ ಸರ್ಕಾರದಿಂದ ನೀಡಲಾಗುತ್ತಿದೆ. ಅಕ್ಕಿ ಅಥವಾ ಗೋಧಿ ಅಥವಾ ರಾಜ್ಯ ಸರ್ಕಾರದ ಕೋರಿಕೆಯ ಮೇರೆಗೆ ಸ್ಥಳೀಯ ದವಸಧಾನ್ಯಗಳನ್ನು ನೀಡಲು ಅವಕಾಶವಿದೆ. ಈ ಯೋಜನೆಯಡಿ ವಿತರಿಸುವ 5 ಕೆಜಿ ಪಡಿತರಕ್ಕೆ ಕೇಂದ್ರ ಸರ್ಕಾರದಿಂದ ಉಚಿತವಾಗಿ ನೀಡುವ ಬಗ್ಗೆ ಮಾಹಿತಿ ದಾಖಲಿಸಿ, ರಶೀದಿ ನೀಡಬೇಕು ಮತ್ತು ಪಡಿತರದಾರರಿಗೆ ಎಸ್‍ಎಂಎಸ್ ಮೂಲಕ ಪಡಿತರ ಪಡೆದ ಬಗ್ಗೆ ಮಾಹಿತಿ ಹೋಗಬೇಕು. ಅಕ್ಕಿ ಅಥವಾ ನೀಡುವ ಧಾನ್ಯದ ಸದುಪಯೋಗವಾಗಲು ಅರ್ಹ ಪಡಿತರದಾರನ ಐರಿಸ್ ಪಡೆದುಕೊಂಡು ಎಲೆಕ್ಟ್ರಾನಿಕ್ ವೆವಿಂಗ್ ಮಶೀನ್‍ಗೆ ಲಿಂಕ್ ಮಾಡಿ ಪಡಿತರ ವಿತರಿಸಲು ರಾಜ್ಯಗಳಿಗೆ ಸೂಚಿಸಲಾಗಿದೆ. ಇದನ್ನು ಕಡ್ಡಾಯವಾಗಿ ಎಲ್ಲ ರಾಜ್ಯ ಸರ್ಕಾರಗಳು ಪಾಲಿಸಬೇಕು. ಈ ಕುರಿತು ಆಹಾರ ನಾಗರಿಕ ಸರಬರಾಜು ಇಲಾಖೆ ಕೇಂದ್ರದ ಆಹಾರ ಇಲಾಖೆಗೆ ವರದಿ ಸಲ್ಲಿಸಬೇಕೆಂದು ಸಚಿವರು ನಿರ್ದೇಶಿಸಿದರು.ಕೃಷಿ ಇಲಾಖೆಯಿಂದ ಮುಂಗಾರು ಮಳೆ ಹಾನಿ ಕುರಿತು ನಡೆಸಿರುವ ಸಮೀಕ್ಷೆಯಿಂದ ಅಳ್ನಾವರ, ಕಲಘಟಗಿ ಭಾಗದ ಬೆಳೆಗಳಾದ ಗೋವಿನಜೋಳ, ಸೋಯಾಬಿನ್ ಬೆಳೆಗಳನ್ನು ಬಿಟ್ಟಿರುವುದಾಗಿ ರೈತರು ಮನವಿ ಸಲ್ಲಿಸಿದ್ದಾರೆ. ಈ ಕುರಿತು ಇನ್ನೊಮ್ಮೆ ಕೃಷಿ ಇಲಾಖೆಯ ಅಧಿಕಾರಿಗಳು ಪರಿಶೀಲಿಸಬೇಕು ಮತ್ತು ಹೆಸರು ಬೆಳೆಹಾನಿ ಕುರಿತು ಸರಿಯಾದ ವರದಿ ನೀಡಿ, ಅರ್ಹ ರೈತರಿಗೆ ಪೂರ್ಣ ಪ್ರಮಾಣದ ವಿಮೆ ಸೌಲಭ್ಯ ದೊರಕುವಂತೆ ಅಧಿಕಾರಿಗಳು ಕ್ರಮವಹಿಸಿ ಸಮೀಕ್ಷಾ ವರದಿ ನೀಡಬೇಕೆಂದು ಸಚಿವರು ನಿರ್ದೇಶಿಸಿದರು.
ಜಿಲ್ಲೆಯ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಔಷಧಿಗಳನ್ನು ಹೊರಗಡೆ ಖರೀದಿಸಲು ಚೀಟಿ ನೀಡಿ ಶಿಫಾರಸ್ಸು ಮಾಡುತ್ತಿದ್ದಾರೆ. ಈ ಕುರಿತು ಅನೇಕ ಬಡ ರೋಗಿಗಳು, ಸಾರ್ವಜನಿಕರು ತಮ್ಮ ಕಚೇರಿಗೆ ಮನವಿ ಸಲ್ಲಿಸುತ್ತಿದ್ದು, ವೈದ್ಯರು ತಮ್ಮ ಆಸ್ಪತ್ರೆಯಲ್ಲಿ ಲಭ್ಯವಿರುವ ಔಷಧಿ ಬರೆದು ಉಚಿತವಾಗಿ ನೀಡಬೇಕು. ಈ ಕುರಿತು ಸಮಸ್ಯೆಗಳಿದ್ದಲ್ಲಿ ತಾವು ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳ ಗಮನಕ್ಕೆ ತರಬೇಕು. ಡಯಾಲಿಸಸ್ ಸೇರಿದಂತೆ ಸರ್ಕಾರದ ಎಲ್ಲ ಆರೋಗ್ಯ ಸೇವೆಗಳು ಬಡ ರೋಗಿಗಳು ಸೇರಿದಂತೆ ಎಲ್ಲರಿಗೂ ಉಚಿತವಾಗಿ, ಸಮಪರ್ಕವಾಗಿ ಮತ್ತು ಗುಣಮಟ್ಟದ ಚಿಕಿತ್ಸೆಯ ಮೂಲಕ ದೊರೆಯಬೇಕೆಂದು ತಿಳಿಸಿದರು.ಬೆಳೆಹಾನಿ ಪರಿಹಾರ ಹಾಗೂ ಮನೆಹಾನಿ ಪರಿಹಾರ ಕುರಿತು ಎನ್‍ಡಿಆರ್‌ಎಫ್ ಮಾರ್ಗಸೂಚಿಗಳ ಪ್ರಕಾರ ಪರಿಹಾರ ಬಿಡುಗಡೆ ಮಾಡಲಾಗುತ್ತಿದೆ. ರೈತರಿಗೆ ಹಾಗೂ ಸಾರ್ವಜನಿಕರಿಗೆ ಈ ಕುರಿತು ಹೆಚ್ಚಿನ ಅನುದಾನದ ನಿರೀಕ್ಷೆ ಇದ್ದು, ಸರ್ಕಾರದ ನೀತಿಗೆ ಒಳಪಟ್ಟಿರುವದರಿಂದ ಪರಿಶೀಲಿಸಿ ಸಂಬಂಧಿಸಿದ ಇಲಾಖೆ ಗಮನಕ್ಕೆ ತರುಲಾಗುವುದು ಮತ್ತು ಬೆಳೆ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಈಗಾಗಲೇ ₹20 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಪರಿಹಾರವನ್ನು ರೈತರಿಗೆ ವಿತರಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹುಬ್ಬಳ್ಳಿ ಧಾರವಾಡ ಬೈಪಾಸ್ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು, ಮಾರ್ಚ 2026 ರೊಳಗೆ ಕಾಮಗಾರಿ ಮುಕ್ತಾಗೊಳಿಸಲು ತಿಳಿಸಲಾಗಿದೆ. ಇದರಲ್ಲಿ ಬರುವ ಸೇತುವೆಗಳ ನಿರ್ಮಾಣ ಕಾರ್ಯ ಸ್ವಲ್ಪಮಟ್ಟಿಗೆ ವಿಳಂಬವಾಗಬಹುದು. ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.ಸಭೆಯಲ್ಲಿ ಶಾಸಕರಾದ ಅರವಿಂದ ಬೆಲ್ಲದ, ಎಂ.ಆರ್.ಪಾಟೀಲ, ಮಹೇಶ ಟೆಂಗಿನಕಾಯಿ, ಮಹಾಪೌರ ಜ್ಯೋತಿ ಪಾಟೀಲ ಮತ್ತು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಹಾಗೂ ಜಿಪಂ ಸಿಇಒ ಭುವನೇಶ ಪಾಟೀಲ ಮಾತನಾಡಿದರು.