ಕೇಂದ್ರ ಸರ್ಕಾರ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿಯೋಜನೆಯನ್ನು ರದ್ದುಪಡಿಸಿ, ಅದರ ಬದಲಾಗಿ ವಿಬಿ-ಜಿ ರಾಮ್ ಜಿ ಎನ್ನುವ ಹೊಸ ಮಸೂದೆಯನ್ನು ಜಾರಿಗೆ ತಂದಿರುವುದಕ್ಕೆ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಆಕ್ಷೇಪ ವ್ಯಕ್ತಪಡಿಸಿದರು.

ಶಿವಮೊಗ್ಗ: ಕೇಂದ್ರ ಸರ್ಕಾರ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿಯೋಜನೆಯನ್ನು ರದ್ದುಪಡಿಸಿ, ಅದರ ಬದಲಾಗಿ ವಿಬಿ-ಜಿ ರಾಮ್ ಜಿ ಎನ್ನುವ ಹೊಸ ಮಸೂದೆಯನ್ನು ಜಾರಿಗೆ ತಂದಿರುವುದಕ್ಕೆ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಆಕ್ಷೇಪ ವ್ಯಕ್ತಪಡಿಸಿದರು.ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕೇಂದ್ರ ಮಸೂದೆಗೆ ಧಾರ್ಮಿಕ ಲೇಪನ ಹಚ್ಚುವ ಮೂಲಕ ರಾಜಕೀಯ ಲಾಭ ಪಡೆಯಲು ಮುಂದಾಗಿದೆ ಎಂದು ಗಂಭೀರವಾಗಿ ಆರೋಪಿಸಿದರು.ಮಸೂದೆಯಲ್ಲಿ ಮೂಲತಃ ರಾಮ್ ಎನ್ನುವ ಹೆಸರಿಲ್ಲದಿದ್ದರೂ, ಉದ್ದೇಶಪೂರ್ವಕವಾಗಿ ಧರ್ಮದ ಹೆಸರನ್ನು ಬಳಸಿ ಜನರ ಭಾವನೆಗಳೊಂದಿಗೆ ಆಟವಾಡಲಾಗುತ್ತಿದೆ ಮತ್ತು ಮಹಾತ್ಮಾ ಗಾಂಧೀಜಿಯವರ ಹೆಸರನ್ನು ಯೋಜನೆಯಿಂದ ಕೈಬಿಡಲು ಈ ತಂತ್ರ ರೂಪಿಸಲಾಗಿದೆ ಎಂದು ದೂರಿದರು .ಹೊಸ ಯೋಜನೆಯಿಂದಾಗಿ ಗ್ರಾಮ ಪಂಚಾಯತಿಗಳ ಸ್ವಾಯತ್ತ ಅಧಿಕಾರವನ್ನು ಕಸಿದುಕೊಳ್ಳಲಾಗುತ್ತಿದ್ದು, ಇದು ಗ್ರಾಮೀಣ ನಿರುದ್ಯೋಗಿ ಕಾರ್ಮಿಕರ ಪಾಲಿಗೆ ಮಾರಕವಾಗಿ ಪರಿಣಮಿಸಲಿದೆ ಎಂದು ಆತಂಕ ವ್ಯಕ್ತಪಡಿಸಿದರು.ಈ ಹಿಂದೆ ಮನರೇಗಾ ಯೋಜನೆಯ ಪೂರ್ಣ ವೆಚ್ಚವನ್ನು ಕೇಂದ್ರವೇ ಭರಿಸುತ್ತಿತ್ತು, ಆದರೆ ಈಗ ರಾಜ್ಯ ಸರ್ಕಾರಗಳು ಮತ್ತು ಪಂಚಾಯತಿಗಳ ಮೇಲೆ ಅನಗತ್ಯ ಆರ್ಥಿಕ ಹೊರೆ ಹೇರಲಾಗುತ್ತಿದೆ. ಇದು ಕಾರ್ಮಿಕರ ಕೂಲಿಯಲ್ಲಿ ವಂಚನೆಗೆ ದಾರಿ ಮಾಡಿಕೊಡುವುದಲ್ಲದೆ, ರಾಜ್ಯಗಳ ಹಣಕಾಸಿನ ಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಆದ್ದರಿಂದ ಕೂಡಲೇ ಈ ವಿವಾದಾತ್ಮಕ ಮಸೂದೆಯನ್ನು ರದ್ದುಗೊಳಿಸಿ, ಹಳೆಯ ಮನರೇಗಾ ಯೋಜನೆಯನ್ನೇ ಮುಂದುವರಿಸಬೇಕು ಎಂದು ಆಗ್ರಹಿಸಿದರು.

ರಾಮನ ಹೆಸರನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಂಡು ಜನರನ್ನು ತಪ್ಪು ದಾರಿಗೆ ಎಳೆಯುವುದನ್ನು ನಿಲ್ಲಿಸಬೇಕು ಎಂದು ಕೇಂದ್ರಕ್ಕೆ ಎಚ್ಚರಿಕೆ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಆರ್.ಎಂ.ಮಂಜುನಾಥ್ ಗೌಡ, ಚೇತನಗೌಡ, ಕಲಗೋಡು ರತ್ನಾಕರ್, ಪುಷ್ಪಾ ಶಿವಕುಮಾರ್, ಶ್ವೇತಾಬಂಡಿ, ಜಿ.ಡಿ.ಮಂಜುನಾಥ್ ಸೇರಿದಂತೆ ಹಲವರಿದ್ದರು.

ಶಿವಮೊಗ್ಗದಲ್ಲಿ 20ಕ್ಕೆ ಉಪವಾಸ ಸತ್ಯಾಗ್ರಹ

ಕೇಂದ್ರ ಸರ್ಕಾರವು ಈ ಹಿಂದೆ ಚಾಲ್ತಿಯಲ್ಲಿದ್ದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ರದ್ದುಪಡಿಸಿ, ಅದರ ಬದಲಾಗಿ ಜಿ ರಾಮ್ ಜಿ ಎನ್ನುವ ಹೊಸ ಯೋಜನೆಯನ್ನು ಜಾರಿಗೆ ತಂದಿರುವುದನ್ನು ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಜಿಲ್ಲಾದ್ಯಂತ ಬೃಹತ್ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್. ಪ್ರಸನ್ನ ಕುಮಾರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹೋರಾಟವು ರಾಮನ ಹೆಸರಿನ ವಿರುದ್ಧವಲ್ಲ, ಬದಲಾಗಿ ಯೋಜನೆಯ ಬದಲಾವಣೆಯಿಂದ ಜನ ಸಾಮಾನ್ಯರಿಗೆ ಎದುರಾಗುವ ಗಂಭೀರ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶ ಹೊಂದಿದೆ. ಈ ವಿಚಾರವಾಗಿ ನ್ಯಾಯಾಲಯದ ಮೊರೆ ಹೋಗುವಂತೆ ಸಲಹೆಗಳು ಕೇಳಿಬಂದಿದ್ದರೂ, ಕಾನೂನು ಹೋರಾಟಕ್ಕೂ ಮುನ್ನ ಜನರಿಗೆ ಈ ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಮಾಹಿತಿ ನೀಡುವುದು ಅಗತ್ಯವೆಂದು ಕೆಪಿಸಿಸಿ ಪದಾಧಿಕಾರಿಗಳ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದರು.ಈಗಾಗಲೇ ನಿಗದಿಪಡಿಸಿದ ವೇಳಾಪಟ್ಟಿಯಂತೆ ತೀರ್ಥಹಳ್ಳಿಯಲ್ಲಿ ಈಗಾಗಲೇ ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ಯಶಸ್ವಿಯಾಗಿ ನಡೆಸಲಾಗಿದ್ದು, ಇದರ ಮುಂದುವರಿದ ಭಾಗವಾಗಿ ಜ.20 ರಂದು ಶಿವಮೊಗ್ಗ ನಗರದ ಗಾಂಧಿ ಪಾರ್ಕ್‌ನಲ್ಲಿರುವ ಗಾಂಧಿ ಪ್ರತಿಮೆ ಮುಂದೆ ಬೃಹತ್ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ . ಕೇವಲ ಸತ್ಯಾಗ್ರಹಕ್ಕೆ ಸೀಮಿತವಾಗದೆ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹತ್ತು ಕಿಲೋಮೀಟರ್ ಪಾದಯಾತ್ರೆಯನ್ನು ನಡೆಸಲು ನಿರ್ಧರಿಸಲಾಗಿದೆ. ಅಲ್ಲದೆ ಜ.30 ರ ಹುತಾತ್ಮರ ದಿನದಂದು ವಿಶೇಷ ಪ್ರತಿಭಟನೆ ನಡೆಸಿ, ಮರುದಿನ ಜ.31ರಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಈ ಹಂತದ ಹೋರಾಟವು ಫೆಬ್ರವರಿ 14 ರಂದು ರಾಜ್ಯಮಟ್ಟದ ಬೃಹತ್ ಪ್ರತಿಭಟನೆಯೊಂದಿಗೆ ಮುಕ್ತಾಯಗೊಳ್ಳಲಿದೆ ಎಂದು ಮಾಹಿತಿ ನೀಡಿದರು.