ಗ್ರಾಮೀಣ ಜನರಿಗೆ ಉದ್ಯೋಗದ ಆಸರೆಯಾಗಿದ್ದ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಗೆ ಕೇಂದ್ರ ಸರ್ಕಾರ ಕತ್ತರಿ ಹಾಕಿದೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಳಿಯಾಳ: ಗ್ರಾಮೀಣ ಜನರಿಗೆ ಉದ್ಯೋಗದ ಆಸರೆಯಾಗಿದ್ದ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಗೆ ಕೇಂದ್ರ ಸರ್ಕಾರ ಕತ್ತರಿ ಹಾಕಿದೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಿಬಿ ಜಿ ರಾಮ್ ಜಿ ಕಾಯ್ದೆ ಹಿಂಪಡೆಯಲು ಆಗ್ರಹಿಸಿ ಕಾಂಗ್ರೆಸ್ ದೇಶದಾದ್ಯಂತ ಹೋರಾಟ ನಡೆಸಲು ತೀರ್ಮಾನಿಸಿದೆ. ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲೂ ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ಕೇಂದ್ರ ಸರ್ಕಾರ ಈ ಯೋಜನೆಯನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಗ್ರಾಪಂಗಳ ಹಕ್ಕು ಮೊಟಕುಗೊಳಿಸಲು ಮುಂದಾಗಿದೆ. ಈ ಹಿಂದೆ ಯೋಜನೆಯಲ್ಲಿ ರಾಜ್ಯ ಸರ್ಕಾರದ ಪಾಲು ಶೇ. 10 ಇತ್ತು. ಈಗ ರಾಜ್ಯ ಸರ್ಕಾರದ ಪಾಲನ್ನು ಶೇ. 40ಕ್ಕೆ ಹೆಚ್ಚಿಸುವ ಮೂಲಕ ಗ್ರಾಪಂಗಳ ಮೇಲೆ ಆರ್ಥಿಕ ಭಾರ ಹೊರಿಸಿದೆ. ಒಂದು ಕಡೆ ಗ್ರಾಮೀಣ ವಿಕಾಸ, ಗ್ರಾಮ ಸ್ವರಾಜ್ಯ, ಬಡವರ ಅಭಿವೃದ್ಧಿಯೆಂದು ಹೇಳುವ ಕೇಂದ್ರ ಸರ್ಕಾರ ಇನ್ನೊಂದೆಡೆ ತಾನು ನುಡಿದಂತೆ ನಡೆಯುವುದಿಲ್ಲ ಎಂದು ತೋರಿಸಿದೆ ಎಂದರು. ಅದಕ್ಕಾಗಿ ಈ ಕಾಯ್ದೆಯನ್ನು ಹಿಂಪಡೆಯುವ ವರೆಗೂ ನಮ್ಮ ಹೋರಾಟವು ನಡೆಯಲಿದೆ ಎಂದರು.

ಎಸ್‌ಸಿ-ಎಸ್‌ಟಿ ಅಭಿವೃದ್ಧಿ: ಮಹರ್ಷಿ ವಾಲ್ಮೀಕಿ ಯೋಜನೆಯಡಿ ತಾಲೂಕಿನ ಕೆರವಾಡ ಗ್ರಾಮದಲ್ಲಿ ಶಾಲೆಯ ನಿರ್ಮಾಣ, ಮೂಲಭೂತ ಸೌಲಭ್ಯ ಹಾಗೂ ನವೀಕರಣಕ್ಕಾಗಿ ₹369.35 ಲಕ್ಷ ಅನುದಾನ ಮಂಜೂರಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ತಾಲೂಕಿನಲ್ಲಿರುವ ಎಲ್ಲ ವಸತಿ ಶಾಲೆಗಳು ತಮ್ಮ ಸ್ವಂತ ಕಟ್ಟಡದಲ್ಲಿಯೇ ಕಾರ್ಯ ನಿರ್ವಹಿಸಲಿವೆ ಎಂದರು.

ಕೇಂದ್ರ ಸರ್ಕಾರ ಗಿರಿಜನ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ ಕೈಗೊಂಡಿರುವ ದರ್ತಿ ಅಬಾ ಜನಜಾತೀಯ ಗ್ರಾಮ ಉತ್ಕರ್ಷ ಅಭಿಯಾನ ಯೋಜನೆಯಡಿ ಬುಡಕಟ್ಟು ಸಿದ್ದಿ ಸಮುದಾಯದವರು ನೆಲೆಸಿರುವ ಗರಡೊಳ್ಳಿ ಗ್ರಾಮವನ್ನು ಆಯ್ಕೆ ಮಾಡಲಾಗಿದೆ. ಈ ಯೋಜನೆಯಡಿ ಗ್ರಾಮದಲ್ಲಿ ವಸತಿ, ಕುಡಿಯುವ ನೀರು, ಆರೋಗ್ಯ, ವಿದ್ಯುತ್ ಸೇರಿದಂತೆ ಮೂಲಸೌಕರ್ಯಗಳ ಸುಧಾರಣೆಯೊಂದಿಗೆ ಆರೋಗ್ಯ, ಶಿಕ್ಷಣ ಮತ್ತು ಪೌಷ್ಟಿಕ ಆಹಾರ ನೀಡಲಾಗುವುದು ಎಂದರು.

ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯಡಿ ರಸ್ತೆ, ಒಳಚರಂಡಿ ಹಾಗೂ ಕುಡಿಯುವ ನೀರಿನ ಮೂಲಭೂತ ಸೌಕರ್ಯಗಳಿಗಾಗಿ ತಾಲೂಕಿಗೆ ₹1 ಕೋಟಿ ಅನುದಾನ ಮಂಜೂರಾಗಿದೆ ಎಂದು ದೇಶಪಾಂಡೆ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ, ಕಾಂಗ್ರೆಸ್ ಪ್ರಮುಖರಾದ ಉಮೇಶ ಬೊಳಶೆಟ್ಟಿ, ರವಿ ತೋರಣಗಟ್ಟಿ, ಸಂಜು ಮಿಶಾಳೆ ಹಾಗೂ ವಿಆರ್‌ಡಿ ಟ್ರಸ್ಟ್‌ ಆಡಳಿತಾಧಿಕಾರಿ ಪ್ರಕಾಶ ಪ್ರಭು ಇದ್ದರು.