ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಬಡವರ ವಿರೋಧಿ : ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ

| N/A | Published : Apr 18 2025, 12:42 AM IST / Updated: Apr 18 2025, 12:40 PM IST

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಬಡವರ ವಿರೋಧಿ : ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ದೇಶದ ಮಧ್ಯಮ ವರ್ಗ ಮತ್ತು ಬಡ ಜನರ ವಿರೋಧಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

 ಬೆಂಗಳೂರು : ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ದೇಶದ ಮಧ್ಯಮ ವರ್ಗ ಮತ್ತು ಬಡ ಜನರ ವಿರೋಧಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಗುರುವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ಧದ ಪ್ರತಿಭಟನೆಯಲ್ಲಿ ಮಾತನಾಡಿ, ಗ್ಯಾಸ್‌ ಸಬ್ಸಿಡಿ ತೆಗೆದು ಪ್ರಧಾನಿ ಮೋದಿ ಸರ್ಕಾರ ಬಡವರ ವಿರೋಧಿಯೆನಿಸಿದೆ. ಔಷಧಿ, ಗೊಬ್ಬರ, ಡೀಸೆಲ್‌, ಪೆಟ್ರೋಲ್‌ ಸೇರಿ ಎಲ್ಲದರ ಬೆಲೆ ಏರಿಕೆ ಮಾಡುವ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಯಾವ ಮುಖವಿಟ್ಟುಕೊಂಡು ರಾಜ್ಯ ಕಾಂಗ್ರೆಸ್‌ ಸರ್ಕಾರದ ಬಗ್ಗೆ ಮಾತನಾಡುತ್ತಿದೆ? 4 ರು.ಹಾಲಿನ ದರ ಹೆಚ್ಚಿಸಿ ಅದನ್ನು ನೇರವಾಗಿ ರೈತರ ಜೇಬಿಗೆ ಹಾಕಿದ್ದೇವೆ. ಇದರಲ್ಲಿ ನಯಾಪೈಸೆಯೂ ಸರ್ಕಾರದ ಖಜಾನೆಗೆ ಬರುವುದಿಲ್ಲ. ರಾಜಕೀಯ ಅಂದರೆ ಬರೀ ಅಧಿಕಾರ ಅಲ್ಲ. ಸೈದ್ಧಾಂತಿಕ ಸ್ಪಷ್ಟತೆಯಿಂದ ಜನರ ಪರವಾಗಿ ನಿಂತು ನಿರಂತರ ಹೋರಾಟ ನಡೆಸುವುದು ರಾಜಕೀಯ ಬದ್ಧತೆಯೇ ಆಗಿದೆ. ಸುಳ್ಳೇ ಬಿಜೆಪಿಯ ಮನೆ ದೇವರು. ಆರ್‌ಎಸ್‌ಎಸ್‌ ಸುಳ್ಳಿನ ಮಹಾ ಕಾರ್ಖಾನೆ. ಅಂಬೇಡ್ಕರ್‌ ಅವರನ್ನು ಸೋಲಿಸಿದ್ದೇ ಸಾವರ್ಕರ್‌ ಮತ್ತು ಢಾಂಗೆ ಎಂದು ಸ್ವತಃ ಅಂಬೇಡ್ಕರ್‌ ಬರೆದಿದ್ದಾರೆ. ಆದರೆ ಕಾಂಗ್ರೆಸ್‌ ಸೋಲಿಸಿದ್ದು ಎಂದು ಬಿಜೆಪಿ ಬಂಡಲ್‌ ಬಿಡುತ್ತಿದೆ ಎಂದು ವ್ಯಂಗ್ಯವಾಡಿದರು.

ಆರೆಸ್ಸೆಸ್‌ ಸುಳ್ಳಿನ ಕಾರ್ಖಾನೆ:

ನಾವು ಸುಳ್ಳಿನ ಕಾರ್ಖಾನೆ ಆರ್‌ಎಸ್‌ಎಸ್‌ನ ಸುಳ್ಳುಗಳ ವಿರುದ್ಧ ಸತ್ಯವನ್ನು ದೇಶದ ತುಂಬ ಹೇಳುವ ಎದೆಗಾರಿಕೆ ಬೆಳೆಸಿಕೊಳ್ಳಬೇಕು. ನಮ್ಮ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಅಪಪ್ರಚಾರ ಮಾಡುತ್ತಾ ಮೋದಿ ಸರ್ಕಾರ ತನ್ನ ಬಡವರ, ಮಧ್ಯಮ ವರ್ಗ ವಿರೋಧಿತನವನ್ನು ಬಚ್ಚಿಡಲು ಯತ್ನಿಸುತ್ತಿದೆ. ಸರ್ಕಾರ ದಿವಾಳಿ ಆಗಿದ್ದರೆ ಗ್ಯಾರಂಟಿಗಳಿಗೆ 56 ಸಾವಿರ ಕೋಟಿ ರೂಪಾಯಿ ಪ್ರತೀ ವರ್ಷ ತೆಗೆದಿಡಲು ಸಾಧ್ಯವಾಗುತ್ತಿತ್ತೇ ಎಂದು ಪ್ರಶ್ನಿಸಿದರು.

ಹಾಲಿನ ಬೆಲೆ 4 ರು. ಹೆಚ್ಚಳ ಮಾಡಿರುವುದು ರೈತರ ಜೇಬಿಗೆ ಹೋಗುತ್ತಿದೆ. ಸರ್ಕಾರಕ್ಕೆ ಬರುತ್ತಿಲ್ಲ. ನೀವು ಗ್ಯಾಸ್ ಬೆಲೆ ಹತ್ತಾರು ಬಾರಿ ಹೆಚ್ಚಿಸಿ ಈಗ ಮತ್ತೆ 50 ರು. ಹೆಚ್ಚಿಸಿದ್ದೀರಿ. ಈ ಹೆಚ್ಚುವರಿ ಹಣ ಯಾರಿಗೆ ಹೋಗುತ್ತಿದೆ ಹೇಳಿ. ಅನಗ್ಯತವಾಗಿ ದಿನೋಪಯೋಗಿ ವಸ್ತುಗಳ ಬೆಲೆ ಏರಿಸುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ಮಧ್ಯಮ ಮತ್ತು ಬಡವರ ವಿರೋಧಿ ಸರ್ಕಾರವಾಗಿದೆ ಎಂದು ಕಿಡಿಕಾರಿದರು.