‘ಸಿದ್ದರಾಮಯ್ಯ ಬರೀ ಮುಸ್ಲಿಂರ ಮುಖ್ಯಮಂತ್ರಿಯೇ ? : ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

| N/A | Published : Apr 18 2025, 12:36 AM IST / Updated: Apr 18 2025, 12:20 PM IST

‘ಸಿದ್ದರಾಮಯ್ಯ ಬರೀ ಮುಸ್ಲಿಂರ ಮುಖ್ಯಮಂತ್ರಿಯೇ ? : ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

‘ಸಿದ್ದರಾಮಯ್ಯನವರೇ, ಕಾಂಗ್ರೆಸ್ ಸರ್ಕಾರದ ವಿರುದ್ಧ ಯಾವ ರೀತಿ ಜನಾಕ್ರೋಶ ಇದೆ ಎಂಬುದನ್ನು ತಿಳಿದುಕೊಳ್ಳಬೇಕಿದ್ದರೆ, ನಿಮ್ಮ ಗುಂಡಿಗೆ ಗಟ್ಟಿ ಇದ್ದರೆ, ವಿಜಯಪುರಕ್ಕೆ ಒಮ್ಮೆ ಬಂದು ನೋಡಿ, ಜನ ನಿಮ್ಮ ವಿರುದ್ಧ ಬೀದಿಗಿಳಿದಿದ್ದಾರೆ.

 ಬಾಗಲಕೋಟೆ/ವಿಜಯಪುರ : ‘ಸಿದ್ದರಾಮಯ್ಯನವರೇ, ಕಾಂಗ್ರೆಸ್ ಸರ್ಕಾರದ ವಿರುದ್ಧ ಯಾವ ರೀತಿ ಜನಾಕ್ರೋಶ ಇದೆ ಎಂಬುದನ್ನು ತಿಳಿದುಕೊಳ್ಳಬೇಕಿದ್ದರೆ, ನಿಮ್ಮ ಗುಂಡಿಗೆ ಗಟ್ಟಿ ಇದ್ದರೆ, ವಿಜಯಪುರಕ್ಕೆ ಒಮ್ಮೆ ಬಂದು ನೋಡಿ, ಜನ ನಿಮ್ಮ ವಿರುದ್ಧ ಬೀದಿಗಿಳಿದಿದ್ದಾರೆ. ಅಹಿಂದ ಹೆಸರಲ್ಲಿ ಸಿಎಂ ಕುರ್ಚಿ ಮೇಲೆ‌ ಕುಳಿತ ನೀವು, ಹಿಂದುಳಿದ ಸಮಾಜಗಳನ್ನು ಸಂಪೂರ್ಣ ಮರೆತು, ಅಲ್ಪಸಂಖ್ಯಾತರ ಓಲೈಕೆಗೆ ಮುಂದಾಗಿದ್ದೀರಿ. ಸಿದ್ದರಾಮಯ್ಯನವರೇ, ನೀವು ರಾಜ್ಯದ ಮುಖ್ಯಮಂತ್ರಿಯೋ ಅಥವಾ ಕೇವಲ‌‌ ಮುಸ್ಲಿಮರ ಮುಖ್ಯಮಂತ್ರಿಯೋ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ತಮ್ಮ ವಿರುದ್ಧ ರೆಬೆಲ್‌ ಆಗಿದ್ದ ಬಸನಗೌಡ ಯತ್ನಾಳ್‌ ಅವರನ್ನು ಪಕ್ಷದಿಂದ ಉಚ್ಚಾಟನೆಗೊಳಿಸಿದ ಬಳಿಕ ಇದೇ ಮೊದಲ ಬಾರಿಗೆ ಯತ್ನಾಳ್‌ರ ತವರು ವಿಜಯಪುರಕ್ಕೆ ಆಗಮಿಸಿದ ವಿಜಯೇಂದ್ರ, ಜನಾಕ್ರೋಶ ಯಾತ್ರೆ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದರು. ನಗರದ ದರಬಾರ ಗ್ರೌಂಡ್‌ನಲ್ಲಿ ನಡೆದ ಜನಾಕ್ರೋಶ ಯಾತ್ರೆಯಲ್ಲಿ ಮಾತನಾಡಿ, ಬಿಜೆಪಿ ಮುಸ್ಲಿಮರ ವಿರೋಧಿಯಲ್ಲ. ಆದರೆ, ವಿಧಾನಸೌಧದಲ್ಲಿ ‘ಪಾಕಿಸ್ತಾನ್‌ ಜಿಂದಾಬಾದ್’ ಎಂದಾಗ ರಕ್ಷಣೆ ಕೊಟ್ಟಿರಲ್ಲಾ ಸಿದ್ದರಾಮಯ್ಯನವರೇ, ಇದನ್ನು ಬಿಜೆಪಿ ಸಹಿಸಲ್ಲ. ಉಗ್ರಗಾಮಿಗಳ ಸವಾಲು ಸ್ವೀಕಾರ ಮಾಡಿ ಮುರಳಿ ಮನೋಹರ ಜೋಶಿ ಅವರ ನೇತೃತ್ವದಲ್ಲಿ ಕಾಶ್ಮೀರದ ಲಾಲ್ ಚೌಕ್‌ಗೆ ಹೋಗಿ ಬಂದವರು ನಾವು ಎಂದು ಕಿಡಿ ಕಾರಿದರು. ಇದೇ ವೇಳೆ, ಬಿಜೆಪಿಗೆ ವ್ಯಕ್ತಿಗಿಂತ ದೇಶ ಮುಖ್ಯ ಎಂದು ಎರಡೆರಡು ಬಾರಿ ಹೇಳುವ ಮೂಲಕ ಪರೋಕ್ಷವಾಗಿ ಯತ್ನಾಳ್‌ಗೂ ಟಾಂಗ್ ಕೊಟ್ಟರು.

ಸಿದ್ದರಾಮಯ್ಯನವರೇ, ಈ ಹಿಂದೆ ನೀವು ವೀರಶೈವ-ಲಿಂಗಾಯತ‌ ಪ್ರತ್ಯೇಕ ಧರ್ಮ ಎಂದು ಜಾತಿ ಒಡೆಯುವ ಕೆಲಸ ಮಾಡಲಿಲ್ಲವೇ?. ನಿಮ್ಮ‌ ಸರ್ಕಾರ ಬಂದ ಮೇಲೆ ಲವ್ ಜಿಹಾದ್ ಕೇಸ್‌ಗಳು ಹೆಚ್ಚಾಗುತ್ತಿವೆ. ಇಂತಹ ಸರ್ಕಾರ ಇರಬಾರದು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾವು ಸೋತಿರಬಹುದು. ಆದರೆ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕಿತ್ತೊಗೆಯುವ ಕೆಲಸವನ್ನು ಬಿಜೆಪಿ ಕಾರ್ಯಕರ್ತರು ಮಾಡಲಿದ್ದಾರೆ. ಕಳೆದ ಚುನಾವಣೆಯಲ್ಲಿ ‘ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ’ ಎಂದು ಬೊಬ್ಬೆ ಹೊಡೆದಿರಿ. ಅಧಿಕಾರಕ್ಕೆ ಬಂದರೆ ಪ್ರತಿವರ್ಷ ₹50 ಸಾವಿರ ಕೋಟಿ ಅನುದಾನ ಕೊಡುತ್ತೇವೆ ಎಂದು ಹೇಳಿದಿರಿ. ಆದರೆ, ಒಂದೇ ಒಂದು ಬಿಡಿಗಾಸೂ ಕೊಡಲಿಲ್ಲ‌ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೂ ಮೊದಲು ಬಾಗಲಕೋಟೆಯಲ್ಲಿ ಬಿಜೆಪಿಯ ಜನಾಕ್ರೋಶ ಯಾತ್ರೆ ನಡೆಯಿತು. ಹಳೆ ಬಾಗಲಕೋಟೆಯಲ್ಲಿನ ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡಿ, ಎತ್ತಿನ ಬಂಡಿಯಲ್ಲಿ ನಿಂತು, ಬಾರುಕೋಲು ಬೀಸಿ ವಿಜಯೇಂದ್ರ ಯಾತ್ರೆಗೆ ಚಾಲನೆ ನೀಡಿದರು. ಬಳಿಕ, ಬಸವೇಶ್ವರ ವೃತ್ತದಲ್ಲಿ ನಡೆದ ಬೃಹತ್‌ ಸಮಾವೇಶದಲ್ಲಿ ಮಾತನಾಡಿ, ರಾಜ್ಯದಲ್ಲಿ ಹಿಂದೂ ವಿರೋಧಿ, ರೈತ ವಿರೋಧಿ ಸರ್ಕಾರ ಇದೆ. ಬೆಲೆ ಏರಿಕೆ ವಿಪರೀತವಾಗಿದೆ. ಈ ಮೂರು ಕಾರಣಕ್ಕೆ ಬಿಜೆಪಿಯಿಂದ ಜನಾಕ್ರೋಶ ಯಾತ್ರೆ ನಡೆಸಲಾಗುತ್ತಿದೆ ಎಂದರು.

ಮಾಜಿ ಡಿಸಿಎಂ, ಸಂಸದ ಗೋವಿಂದ ಕಾರಜೋಳ, ವಿಪ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಜಗದೀಶ್‌ ಶೆಟ್ಟರ್ ಮತ್ತಿತರ ನಾಯಕರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಪ್ರಧಾನಿ ನರೇಂದ್ರ ಮೋದಿ ಒಬ್ಬ ಶಕ್ತಿ. ಜಗತ್ತಿನಲ್ಲಿ ಭಾರತವನ್ನು ಆರ್ಥಿಕ ಶಕ್ತಿಯನ್ನಾಗಿಸಿದ್ದಾರೆ. ಆದರೆ, ರಾಜ್ಯದಲ್ಲಿ ಆಡಳಿತ ಪಕ್ಷದ ಶಾಸಕರಿಗೇ ಸಿಎಂ ಮೇಲೆ ವಿಶ್ವಾಸ ಇಲ್ಲ. ಇನ್ನು ಜನರಿಗೆ ಹೇಗೆ ವಿಶ್ವಾಸ ಬಂದೀತು? ಎಂದು ಪ್ರಶ್ನಿಸಿದರು. ಎಲ್ಲರೂ ಒಗ್ಗಟ್ಟಾಗಿ ಮತ್ತೆ ಬಾಗಲಕೋಟೆ ಜಿಲ್ಲೆಯ 7 ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಪಣ ತೊಡಬೇಕು ಎಂದು ಕರೆ ನೀಡಿದರು.