ಕಳೆದ 25 ವರ್ಷದ ಸುದೀರ್ಘ ಅವಧಿಯಲ್ಲಿ ಪ್ರಧಾನಿ ನರೇಂದ್ರಮೋದಿಯವರ ಮೇಲೆ ಒಂದು ಸಣ್ಣ ಭ್ರಷ್ಟಾಚಾರದ ಕಲೆಯೂ ಇಲ್ಲದಿರುವುದು ಅವರ ಪ್ರಾಮಾಣಿಕತೆಗೆ ಸಾಕ್ಷಿಯಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ ತಿಳಿಸಿದರು.
ಕನ್ನಡಪ್ರಭ ವಾರ್ತೆ ನೆಲಮಂಗಲ/ದಾಬಸ್‍ಪೇಟೆ
ಕಳೆದ 25 ವರ್ಷದ ಸುದೀರ್ಘ ಅವಧಿಯಲ್ಲಿ ಪ್ರಧಾನಿ ನರೇಂದ್ರಮೋದಿಯವರ ಮೇಲೆ ಒಂದು ಸಣ್ಣ ಭ್ರಷ್ಟಾಚಾರದ ಕಲೆಯೂ ಇಲ್ಲದಿರುವುದು ಅವರ ಪ್ರಾಮಾಣಿಕತೆಗೆ ಸಾಕ್ಷಿಯಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ ತಿಳಿಸಿದರು.ನೆಲಮಂಗಲದ ಪವಾಡ ಬಸವಣ್ಣದೇವರ ಮಠದಲ್ಲಿ ಹಮ್ಮಿಕೊಂಡಿದ್ದ ‘ಸೇವಾ ಸಂಕಲ್ಪ ಅಭಿಯಾನ’ ಕಾರ್ಯಕ್ರಮದ ಅಂಗವಾಗಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಾರ್ವಜನಿಕ ಜೀವನದಲ್ಲಿ ಸರ್ಕಾರದ ಮುಖ್ಯಸ್ಥರಾಗಿ ಯಶಸ್ವಿ 25 ವರ್ಷಗಳ ಅಧಿಕಾರಾವಧಿಯನ್ನು ಪೂರೈಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಯಶೋಗಾಥೆಯನ್ನು ಸ್ಮರಿಸುವ ದಿಸೆಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.
ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿ 13 ವರ್ಷ ಹಾಗೂ ದೇಶದ ಪ್ರಧಾನಿಯಾಗಿ 12 ವರ್ಷಗಳ ಕಾಲ, ಅಂದರೆ ಸತತ ಕಾಲು ಶತಮಾನದ ಕಾಲ ಸರ್ಕಾರದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ. ಅಧಿಕಾರವನ್ನು ಭೋಗಕ್ಕಾಗಿ ಬಳಸದೆ, ದೇಶದ 140 ಕೋಟಿ ಜನರನ್ನು ತಮ್ಮ ಕುಟುಂಬ ಎಂದು ಭಾವಿಸಿ ಕೇವಲ ''''''''''''''''ಪ್ರಧಾನ ಸೇವಕನಾಗಿ ಕೆಲಸ ಮಾಡುತ್ತಿದ್ದಾರೆ. 2047ರ ವೇಳೆಗೆ ಭಾರತವನ್ನು ಜಗತ್ತಿನ ನಂ. ಒನ್ ಬಲಿಷ್ಠ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ (ವಿಕಸಿತ ಭಾರತ) ಮಾಡುವುದು ಮೋದಿಯವರ ಸಂಕಲ್ಪವಾಗಿದೆ ಎಂದು ಹೇಳಿದರು.ಕೇಂದ್ರದ ಯೋಜನೆಗಳಿಂದ ಮಹಿಳಾ ಸಬಲೀಕರಣ:
ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಸುರೇಶ್ ಮಾತನಾಡಿ, ಕೇಂದ್ರ ಸರ್ಕಾರದ ಯೋಜನೆಗಳು ದೇಶದ ತಳಮಟ್ಟದ ಜನರಿಗೂ ತಲುಪುತ್ತಿವೆ. ಮೋದಿಯವರ ಲಖಪತಿ ದೀದಿ, ಮುದ್ರಾ ಯೋಜನೆ, ಉಜ್ವಲ ಯೋಜನೆ ಮತ್ತು ಆಯುಷ್ಮಾನ್ ಭಾರತದಂತಹ ಕ್ರಾಂತಿಕಾರಿ ಯೋಜನೆಗಳು ದೇಶದ ಗ್ರಾಮೀಣ ಮಹಿಳೆಯರನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಬಲರನ್ನಾಗಿ ಮಾಡಿವೆ. ಕ್ಷೇತ್ರದ ಸಾವಿರಾರು ಮಹಿಳೆಯರು ಇಂದು ಸ್ವಯಂ ಉದ್ಯೋಗ ಆರಂಭಿಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮೋದಿಯವರ ಆಡಳಿತ ವೈಖರಿಯೇ ಕಾರಣ ಎಂದು ಶ್ಲಾಘಿಸಿದರು.ಜನಜಾಗೃತಿ ಮೂಡಿಸಲು ಸೇವಾ ಕಾರ್ಯಗಳ ವಿಸ್ತಾರ:
ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ವೇದಾವತಿ ಮಂಜುನಾಥ್ ಮಾತನಾಡಿ, ಸೇವಾ ಸಂಕಲ್ಪ ಅಭಿಯಾನದ ಅಂಗವಾಗಿ ಮುಂದಿನ ದಿನಗಳಲ್ಲಿ ನೆಲಮಂಗಲ ಕ್ಷೇತ್ರಾದ್ಯಂತ ಸ್ವಚ್ಛತಾ ಕಾರ್ಯಕ್ರಮಗಳು, ಉಚಿತ ವೈದ್ಯಕೀಯ ಶಿಬಿರಗಳು ಹಾಗೂ ಕೇಂದ್ರ ಸರ್ಕಾರದ ಜನಕಲ್ಯಾಣ ಯೋಜನೆಗಳ ಬಗ್ಗೆ ಜನಜಾಗೃತಿ ಮೂಡಿಸುವ ಮಹತ್ವದ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಿದ್ದೇವೆ ಎಂದು ಹೇಳಿದರು.ನಾಟಕ ಪ್ರದರ್ಶನ:
ಸಾಮಾನ್ಯ ಬಾಲಕನೊಬ್ಬ ದೇಶದ ಪ್ರಧಾನಿಯಾಗಿ ಜಾಗತಿಕ ಮಟ್ಟದಲ್ಲಿ ಬೆಳಗಿದ ರೋಚಕ ಇತಿಹಾಸ ಮತ್ತು ಅವರ 25 ವರ್ಷಗಳ ಸುದೀರ್ಘ ರಾಜಕೀಯ ಪಯಣದ ಪ್ರಮುಖ ಘಟ್ಟಗಳನ್ನು ರಂಗಭೂಮಿ ಮೇಲೆ ಅದ್ಭುತವಾಗಿ ಅಭಿನಯಿಸಲಾಯಿತು.ಕಾರ್ಯಕ್ರಮದಲ್ಲಿ ತಾಲೂಕು ಅಧ್ಯಕ್ಷ ಜಗದೀಶ್ ಚೌದರಿ, ಪ್ರಧಾನ ಕಾರ್ಯದರ್ಶಿ ಸತೀಶ್, ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಉಪಾಧ್ಯಕ್ಷೆ ಶೀಲಾಶಂಕರ್, ಶಾಂತಕುಮಾರಿ, ನಾಟಕದ ಸಂಚಾಲಕ ಶಾಂತಕುಮಾರ್, ಜೈರಾಮ್ ಸೇರಿದಂತೆ ಮುಖಂಡರು, ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.