ಸಾರಾಂಶ
ವಿಮಾ ಕಂಪೆನಿಯ ನಿಯಂತ್ರಣ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕಿದ್ದು, ಮಳೆ ಮಾಪನಯಂತ್ರ ಸರಿಯಿಲ್ಲ ಎಂದು ಹೇಳುತ್ತಿದ್ದಾರೆ.
ಶಿರಸಿ: ವಿಮಾ ಕಂಪನಿಯ ಡೊಂಬರಾಟವನ್ನು ಕೇಂದ್ರ ಸರ್ಕಾರ ನಿಯಂತ್ರಣ ಮಾಡಬೇಕಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಸಂಘರ್ಷ ಬೇಡ. ರೈತರಿಗೆ ನೆರವಾಗುವುದು ಒಳ್ಳೆಯದು ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.
ಅವರು ಮಾಧ್ಯಮದವರ ಜತೆ ಮಾತನಾಡಿ, ವಿಮಾ ಕಂಪೆನಿಯ ನಿಯಂತ್ರಣ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕಿದ್ದು, ಮಳೆ ಮಾಪನಯಂತ್ರ ಸರಿಯಿಲ್ಲ ಎಂದು ಹೇಳುತ್ತಿದ್ದಾರೆ. ವಿಮಾ ಹಣ ಭರಣ ಮಾಡಿಕೊಂಡಿದ್ದಾರೆ. ವಿಮಾ ಕಂಪೆನಿಯು ಅನಗತ್ಯ ಸವಾರಿ ಮಾಡುತ್ತಿದೆ. ರಾಜ್ಯ ಸರ್ಕಾರದಿಂದ ೫ ಸಭೆ ನಡೆಸಲಾಗಿದೆ. ೪೨ ಗ್ರಾಪಂಗೆ ಬೆಳೆ ವಿಮೆ ಬಂದಿದೆ. ಶೇ.೧೦ ರಷ್ಟು ತೋಟಗಾರಿಕಾ ಬೆಳೆ ಇರುವ ಪಂಚಾಯತ ವ್ಯಾಪ್ತಿಯ ರೈತರಿಗೆ ವಿಮೆ ಬಂದಿದೆ. ಅಡಿಕೆ ಬೆಳೆ ದೊಡ್ಡ ಪ್ರಮಾಣದಲ್ಲಿ ಇರುವ ಗ್ರಾಪಂ ವ್ಯಾಪ್ತಿಯ ರೈತರಿಗೆ ವಿಮೆ ಪರಿಹಾರ ಬಂದಿಲ್ಲ. ವಿಮಾ ಕಂಪೆನಿಯ ಈ ಧೋರಣೆಯನ್ನು ಖಂಡಿಸುತ್ತೇನೆ ಎಂದರು.ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ನೇತೃತ್ವದಲ್ಲಿ ಕಾನೂನು ಹೋರಾಟಕ್ಕೆ ಸಿದ್ಧರಾಗಿದ್ದೇವೆ. ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಬಾಗಲು ತಟ್ಟಿಲಿದ್ದೇವೆ. ಪ್ರತಿ ತಿಂಗಳು ವಿಮಾ ಕಂಪೆನಿ ಮಳೆ ಮಾಪನ ಕೇಂದ್ರವನ್ನು ಪರಿಶೀಲನೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕಿತ್ತು. ಈಗ ಮಳೆ ಮಾಪನ ಕೇಂದ್ರದ ಅಂಕಿ-ಅಂಶ ಹೊಂದಾಣಿಕೆಯಾಗುತ್ತಿಲ್ಲ ಎನ್ನುವುದು ತಪ್ಪು ಎಂದು ಹೇಳಿದರು.
ಲೋಕಸಭಾ ಸದಸ್ಯರು ರಾಜ್ಯ ಸರ್ಕಾರದ ವಿರುದ್ಧ ಆರೋಪ ನಿಲ್ಲಿಸಿದರೆ ಆರೋಗ್ಯ ದೃಷ್ಟಿಯಿಂದ ಒಳ್ಳೆಯದು. ರಾಜಕಾರಣವನ್ನು ಬದಗಿಟ್ಟು ಎಲ್ಲರೂ ಒಟ್ಟಾಗಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೊಂದಾಣಿಕೆ ಮಾಡಿಕೊಂಡು ರೈತರಿಗೆ ವಿಮೆ ಹಣ ಬಿಡುಗಡೆಗೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.