ಸಾರಾಂಶ
ಯಲಬುರ್ಗಾ:
ಕೇಂದ್ರ ಸರ್ಕಾರ ಸಕಾಲಕ್ಕೆ ಯೂರಿಯಾ ಗೊಬ್ಬರ ಪೂರೈಕೆ ಮಾಡದೆ ಇರುವುದರಿಂದ ರಾಜ್ಯದಲ್ಲಿ ರೈತರು ತೊಂದರೆ ಅನುಭವಿಸುವಂತಾಗಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.ತಾಲೂಕಿನ ವಜ್ರಬಂಡಿ ಗ್ರಾಮದಲ್ಲಿ ಬುಧವಾರ ನೂತನ ಪಶು ಚಿಕಿತ್ಸಾಲಯ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಸಕಾಲಕ್ಕೆ ರಾಜ್ಯಗಳಿಗೆ ಯೂರಿಯಾ ಪೂರೈಕೆ ಮಾಡಬೇಕು. ಈ ಬಗ್ಗೆ ಕೃಷಿ ಸಚಿವರ ಗಮನಕ್ಕೆ ತರಲಾಗಿದೆ. ಕ್ಷೇತ್ರಕ್ಕೆ 1000 ಟನ್ ಯೂರಿಯಾ ಗೊಬ್ಬರ ಪೂರೈಸುವಂತೆ ತಿಳಿಸಲಾಗಿದೆ. ಈಗಾಗಲೇ ೩೦೦ ಟನ್ ಪೂರೈಕೆಯಾಗಿದ್ದು ೭೦೦ ಟನ್ ಬರಲಿದೆ. ರೈತರು ಯೂರಿಯಾ ಹೆಚ್ಚಿನ ಬೇಡಿಕೆಗಾಗಿ ಒತ್ತಾಯಿಸಬೇಕು. ಇದರಿಂದ ಕ್ಷೇತ್ರಕ್ಕೆ ಹೆಚ್ಚು ಗೊಬ್ಬರದ ಅವಶ್ಯಕತೆ ಇದೆಯೆಂದು ನಾನು ಸರ್ಕಾರದ ಗಮನಕ್ಕೆ ತರಲು ಸಾಧ್ಯವಾಗುತ್ತದೆ ಎಂದರು.
ಒಂದು ಪಶು ಆಸ್ಪತ್ರೆ ಪ್ರಾರಂಭಿಸುವುದರಿಂದ ಸರ್ಕಾರ ವರ್ಷಕ್ಕೆ ಅಂದಾಜು ₹೬೦ ಲಕ್ಷ ಖರ್ಚು ಮಾಡುತ್ತದೆ. ರಾಜ್ಯದಲ್ಲಿಯೇ ಯಲಬುರ್ಗಾದಷ್ಟು ಬಡತನ ಇರುವ ತಾಲೂಕು ಮತ್ತೊಂದಿಲ್ಲ. ಕೆರೆಗಳಿಗೆ ನೀರು ತುಂಬಿಸುವುದು, ಶೈಕ್ಷಣಿಕ ಸುಧಾರಣೆಗೆ ಹೆಚ್ಚು ಪ್ರಯತ್ನ ಮಾಡಲಾಗುತ್ತಿದೆ. ವಜ್ರಬಂಡಿಯಲ್ಲಿ ₹೫೦ ಲಕ್ಷ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣವಾಗಲಿದೆ. ತರಲಕಟ್ಟಿ ಗ್ರಾಮಕ್ಕೆ ನೂತನ ಪಶು ಆಸ್ಪತ್ರೆ ಮಂಜೂರು ಮಾಡಲಾಗುವುದು. ರೈತರು ಪಶು ಆಸ್ಪತ್ರೆಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.ಜಾಗ ಸಿಗುತ್ತಿಲ್ಲ:
ತಾಲೂಕಿನಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಜಾಗ ಸಿಗುತ್ತಿಲ್ಲ. ಈ ಹಿಂದೆ ಅಭಿವೃದ್ಧಿ ಕೆಲಸಗಳಿಗೆ ರೈತರು ಭೂದಾನ ಮಾಡುತ್ತಿದ್ದರು. ಈಗ ದುಡ್ಡು ಕೊಟ್ಟರೂ ಒಂದು ಗುಂಟೆ ಜಾಗ ಸಿಗುತ್ತಿಲ್ಲ. ಹೀಗಾದರೆ ಅಭಿವೃದ್ಧಿ ಕೆಲಸ ನಡೆಯಲು ಹೇಗೆ ಸಾಧ್ಯ? ಗ್ರಾಮಗಳ ಅಭಿವೃದ್ಧಿಗೆ ಜನರು ಸಹಕಾರ ನೀಡಬೇಕು ಎಂದು ರಾಯರಡ್ಡಿ ಹೇಳಿದರು.ಕ್ಷೇತ್ರದಲ್ಲಿ ಕೆರೆ ತುಂಬಿಸುವ ಯೋಜನೆಯಡಿ ಮುಂದಿನ ವಾರದೊಳಗೆ ೨೪ ಕೆರೆ ಭರ್ತಿಯಾಗಲಿವೆ. ಹೊಸದಾಗಿ ೩೨ ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ. ಇದರಿಂದ ಅಂತರ್ಜಲ ಮಟ್ಟ ಸುಧಾರಣೆಗೆ ಸಹಕಾರಿಯಾಗಲಿದೆ. ಯಾವುದೇ ರಾಜಕಾರಣಿಗಳು ಕ್ಷೇತ್ರಕ್ಕೆ ನೀರಾವರಿ ಮಾಡುತ್ತೇವೆ ಎಂದು ನಿಮ್ಮ ಮುಂದೆ ಬಂದಾಗ ಮೊದಲು ನಿಮ್ಮ ಜಮೀನಿಗೆ ಮಾಡಿಕೊಳ್ಳಿ ಎಂದು ಉತ್ತರಿಸಬೇಕು. ಒಬ್ಬ ಶಾಸಕ, ಸಂಸದರಾದವರಿಗೆ ಕಾನೂನು, ತಾಂತ್ರಿಕ ಮತ್ತು ಆಡಳಿತಾತ್ಮಕದ ಬಗ್ಗೆ ಅರಿವಿರಬೇಕು. ನೀರಾವರಿ ಬಗ್ಗೆ ಜ್ಞಾನವಿರಬೇಕು. ಬರಿ ಸುಳ್ಳು ಭಾಷಣ ಮಾಡುವುದಲ್ಲ ಎಂದು ಬಿಜೆಪಿ ವಿರುದ್ಧ ರಾಯರಡ್ಡಿ ಹರಿದಾಯ್ದರು.
ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಯ್ಯ ಮಾತನಾಡಿದರು. ವಜ್ರಬಂಡಿಯಲ್ಲಿ ನೂತನ ಪಶು ಆಸ್ಪತ್ರೆ ಉದ್ಘಾಟನೆ ಮುಂಚೆ ಗೋಮಾತೆಗೆ ಪೂಜಿಸುವ ಮೂಲಕ ಬಸವರಾಜ ರಾಯರಡ್ಡಿ ಆಕಳಿಗೆ ಅಕ್ಕಿ, ಬೆಲ್ಲ ಹಾಗೂ ಬಾಳೆಹಣ್ಣು ತಿನಿಸಿದರು.ಈ ವೇಳೆ ಗ್ರಾಪಂ ಅಧ್ಯಕ್ಷೆ ಚಂದವ್ವ ಲಮಾಣಿ, ತಹಸೀಲ್ದಾರ್ ಬಸವರಾಜ ತೆನ್ನಳ್ಳಿ, ತಾಪಂ ಇಒ ಸಂತೋಷ ಪಾಟೀಲ್, ಪಶು ಇಲಾಖೆ ಸಹಾಯಕ ನಿರ್ದೇಶಕ ಪ್ರಕಾಶ ಚೂರಿ, ಸಿಪಿಐ ಮೌನೇಶ್ವರ ಮಾಲಿಪಾಟೀಲ್, ಪಿಡಿಒ ಹನುಮಂತರಾಯ ಯಂಕಂಚಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆರಿಬಸಪ್ಪ ನಿಡಗುಂದಿ, ಪ್ರಮುಖರಾದ ವೀರನಗೌಡ ಬಳೂಟಗಿ, ಶರಣಪ್ಪ ಗಾಂಜಿ, ಬಂಡೇರಾವ್ ದೇಸಾಯಿ, ರಾಮಣ್ಣ ಸಾಲಭಾವಿ, ರೇವಣಪ್ಪ ಸಂಗಟಿ, ಡಾ. ಶಿವನಗೌಡ ದಾನರಡ್ಡಿ, ಆನಂದ ಉಳ್ಳಾಗಡ್ಡಿ, ಶರಣಪ್ಪ ಉಪ್ಪಾರ, ಸುಧೀರ ಕೊರ್ಲಹಳ್ಳಿ, ಸಂಗಣ್ಣ ತೆಂಗಿನಕಾಯಿ, ಹುಲಗಪ್ಪ ಬಂಡಿವಡ್ಡರ್, ಶಂಕ್ರಗೌಡ ಸಾಲಭಾವಿ, ನಾಗರಾಜ ತಲ್ಲೂರು ಸೇರಿದಂತೆ ಮತ್ತಿತರರು ಇದ್ದರು.