84.78 ಕಿಲೋ ಮೀಟರ್ ಉದ್ದದ ಮಾರ್ಗ ಮೇಲ್ದರ್ಜೆಗೆ ।

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕೇಂದ್ರ ಸರ್ಕಾರ ಕೇಂದ್ರ ರಸ್ತೆ ಮತ್ತು ಮೂಲ ಸೌಕರ್ಯ ನಿಧಿಯಡಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಸಂಪರ್ಕ ರಸ್ತೆಗಳ ಸುಧಾರಣೆಗೆ ಕೇಂದ್ರ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಒಟ್ಟು ₹68 ಕೋಟಿ ವೆಚ್ಚದ ಕಾಮಗಾರಿಗಳಿಗೆ ಮಂಜೂರಾತಿ ನೀಡಿದೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಒಟ್ಟು 13 ಪ್ರಮುಖ ರಸ್ತೆಗಳ 84.78 ಕಿಲೋ ಮೀಟರ್ ಉದ್ದದ ಮಾರ್ಗವನ್ನು ಮರು ಡಾಂಬರೀಕರಣದೊಂದಿಗೆ ಮೇಲ್ದರ್ಜೆಗೇರಿಸಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಿವಮೊಗ್ಗ ನಗರ, ಗ್ರಾಮಾಂತರ, ಭದ್ರಾವತಿ, ಶಿಕಾರಿಪುರ, ಸೊರಬ, ಸಾಗರ, ತೀರ್ಥಹಳ್ಳಿ ಹಾಗೂ ಬೈಂದೂರು ತಾಲ್ಲೂಕುಗಳ ಪ್ರಮುಖ ಸಂಪರ್ಕ ರಸ್ತೆಗಳು ಈ ಯೋಜನೆಯಲ್ಲಿವೆ.


ಶಿವಮೊಗ್ಗ ತಾಲೂಕಿನ ಒಟ್ಟು 13.20 ಕಿ.ಮೀ ರಸ್ತೆ ಅಭಿವೃದ್ಧಿ ₹20 ಕೋಟಿ ಮಂಜೂರಾಗಿದೆ. ಇದರಲ್ಲಿ ರಾಜ್ಯ ಹೆದ್ದಾರಿ 57 ರಲ್ಲಿ (ಕಾಚಿನಕಟ್ಟೆಯಿಂದ ವಿಮಾನ ನಿಲ್ದಾಣದ ಮೂಲಕ ಲಕ್ಕಿನಕೊಪ್ಪದವರೆಗೆ), ರಾಜ್ಯ ಹೆದ್ದಾರಿ 254 (ಲಕ್ಕಿನಕೊಪ್ಪದಿಂದ ಉಂಬ್ಳೆಬೈಲುವರೆಗೆ) ಮತ್ತು ರಾಜ್ಯ ಹೆದ್ದಾರಿ 65 (ಉಂಬ್ಳೆಬೈಲುನಿಂದ ಚೆಕ್ ಪೋಸ್ಟ್ ವರೆಗೆ) ರಸ್ತೆ ಅಭಿವೃದ್ಧಿ ನಡೆಯಲಿದೆ.

ಭದ್ರಾವತಿ ತಾಲ್ಲೂಕಿನಲ್ಲಿ ₹2 ಕೋಟಿ ವೆಚ್ಚದಲ್ಲಿ 3 ಕಿ.ಮೀ ರಸ್ತೆ ಅಭಿವೃದ್ಧಿಯಲ್ಲಿ ರಾಜ್ಯ ಹೆದ್ದಾರಿ-250 ರಲ್ಲಿ ಭದ್ರಾವತಿಯಿಂದ ಸಾಸ್ವೇಹಳ್ಳಿ ರಸ್ತೆ (ವಯಾ: ಹೊಳೆಹೊನ್ನೂರು, ಸಿದ್ಲಿಪುರ, ಸನ್ಯಾಸಿಕೋಡಮಗ್ಗಿ, ನಾಗಸಮುದ್ರ, ಮಂಗೋಟೆ, ಆನವೇರಿ, ನಿಂಬೆಗೊಂದಿ, ದೈದರಕಲ್ಲಹಳ್ಳಿ) ರಸ್ತೆ ಕಾಮಗಾರಿ ನಡೆಯಲಿದೆ.

ಇದಲ್ಲದೇ ಭದ್ರಾವತಿ ತಾಲೂಕಿನಲ್ಲಿ ₹6 ಕೋಟಿ ವೆಚ್ಚದಲ್ಲಿ 8 ಕಿ.ಮೀ ರಸ್ತೆ ಕಾಮಗಾರಿ ನಡೆಯಲಿದೆ. ರಾಜ್ಯ ಹೆದ್ದಾರಿ 68 ಮತ್ತು 57 ರ ಮಧ್ಯದ ಜಿಲ್ಲಾ ಮುಖ್ಯ ಸಂಪರ್ಕ ರಸ್ತೆ (ವಯಾ: ಕಡದಕಟ್ಟೆ-ವಿಶ್ವೇಶ್ವರನಗರ-ಸಿರಿಯೂರು-ಹಾಗಲಮನೆ-ಅವೃತಪುರ) ಅಭಿವೃದ್ಧಿ ನಡೆಯಲಿದೆ.

ಸಾಗರ ತಾಲೂಕಿನಲ್ಲಿ ₹6 ಕೋಟಿ ವೆಚ್ಚದಲ್ಲಿ ರಾಜ್ಯ ಹೆದ್ದಾರಿ-62 ರಲ್ಲಿ ಶಿರಾಳಕೊಪ್ಪ-ಸಾಗರ ರಸ್ತೆ (9.86 ಕಿ.ಮೀ) ಅಭಿವೃದ್ಧಿ ನಡೆಯಲಿದೆ. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ₹4 ಕೋಟಿ ವೆಚ್ಚದಲ್ಲಿ ರಾಜ್ಯ ಹೆದ್ದಾರಿ-26 ರಲ್ಲಿ ಹಲಗೇರಿ-ಹಾಲ್ಕಲ್ ರಸ್ತೆ ಒಟ್ಟು 4.92 ಕಿ.ಮೀ ಅಭಿವೃದ್ಧಿಯಾಗಲಿದೆ.

ಬೈಂದೂರು ತಾಲೂಕಿನಲ್ಲಿ ಒಟ್ಟು ₹6 ಕೋಟಿ ವೆಚ್ಚದಲ್ಲಿ ರಾಜ್ಯ ಹೆದ್ದಾರಿ ರಸ್ತೆ ಕಾಮಗಾರಿ ನಡೆಯಲಿದೆ. ₹2ಕೋಟಿ ರಾಜ್ಯ ಹೆದ್ದಾರಿ 52 ರಲ್ಲಿ ಅನಪಾರು-ಸಿದ್ದಾಪುರ ರಸ್ತೆ 3 ಕಿ.ಮೀ ಅಭಿವೃದ್ಧಿ ಹಾಗೂ ₹2 ಕೋಟಿ ವೆಚ್ಚದಲ್ಲಿ ರಾಜ್ಯ ಹೆದ್ದಾರಿ-52 ರಲ್ಲಿ ತೀರ್ಥಹಳ್ಳಿಯಿಂದ ಕುಂದಾಪುರ ರಸ್ತೆ 3 ಕಿ.ಮೀ ಅಭಿವೃದ್ಧಿ , ₹2 ಕೋಟಿ ವೆಚ್ಚದಲ್ಲಿ ಜಿಲ್ಲಾ ಮುಖ್ಯ ರಸ್ತೆ ತಲ್ಲೂರಿನಿಂದ ಉಪ್ಪಿನಕುದ್ರುವರೆಗೆ 4 ಕಿ.ಮೀ ಅಭಿವೃದ್ಧಿಯಾಗಲಿದೆ.

ತೀರ್ಥಹಳ್ಳಿ ತಾಲೂಕಿನ ಜಿಲ್ಲಾ ಮುಖ್ಯ ರಸ್ತೆಯ 3.80 ಕಿ.ಮೀ ಮಾರ್ಗದ ಅಭಿವೃದ್ಧಿಗೆ ₹3.50 ಕೋಟಿ ಹಾಗೂ ಹೊಸನಗರ ತಾಲೂಕಿನ ರಾಜ್ಯ ಹೆದ್ದಾರಿ-01 ರಲ್ಲಿ ಪಡುಬಿದ್ರೆಯಿಂದ ಚಿಕ್ಕಲಗೋಡುವರೆಗೆ 4 ಕಿ.ಮೀ ರಸ್ತೆ ಅಭಿವೃದ್ಧಿಗೆ ₹2.50 ಕೋಟಿ ಮತ್ತು ಶಿಕಾರಿಪುರ ತಾಲೂಕಿನ ರಾಜ್ಯ ಹೆದ್ದಾರಿ-148 ರಸ್ತೆಯ 11 ಕಿ.ಮೀ ಮಾರ್ಗದ ಅಭಿವೃದ್ಧಿಗೆ ₹6 ಕೋಟಿ,ಸೊರಬ ತಾಲೂಕಿನ ರಾಜ್ಯ ಹೆದ್ದಾರಿ-76, 50, 01, 77 ರಲ್ಲಿ ಅಂಕರವಳ್ಳಿ, ಮೂಡಿದೊಡ್ಡಿಕೊಪ್ಪ, ಹುರಳಿಕೊಪ್ಪ, ಕೋಟಿಪುರ, ಆನವಟ್ಟಿ, ಹರಳಿಕೊಪ್ಪ, ಕುಪ್ಪಗಡ್ಡೆ, ತವನಂದಿ, ಬಿಳವಗೋಡು, ಕಲ್ಲಂಬಿ, ಗುಡವಿ, ಕಾಂತನಹಳ್ಳಿ, ಗುಂಜನೂರುವರೆಗಿನ 10 ಕಿ.ಮೀ ರಸ್ತೆ ಅಭಿವೃದ್ಧಿ ₹6 ಕೋಟಿ, ಶಿವಮೊಗ್ಗ ನಗರಕ್ಕೆ ರಾಜ್ಯ ಹೆದ್ದಾರಿ-254, 57 ರಲ್ಲಿ ಬೊಮ್ಮನಕಟ್ಟೆಯಿಂದ ಗೆಜ್ಜೇನಹಳ್ಳಿ ವರೆಗಿನ 7 ಕಿ.ಮೀ ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿ ₹6 ಕೋಟಿ ಮಂಜೂರಾತಿಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಪೊಟೋ: 19ಎಸ್‌ಎಂಜಿಕೆಪಿ06