ಕಲ್ಯಾಣ ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರದ ಮಾದರಿ, ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಶಿರಾ, ಪಾವಗಡ, ಮಧುಗಿರಿ, ಕೊರಟಗೆರೆ ಸೇರಿದಂತೆ ಬೆಂಗಳೂರು ಗ್ರಾಮಾಂತರ ಹಾಗೂ ಚಾಮರಾಜನಗರ ಜಿಲ್ಲೆಯ ಹಲವಾರು ತಾಲೂಕುಗಳನ್ನು ಒಗ್ಗೂಡಿಸಿ ಸರಕಾರ ಮಧ್ಯ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಮಾಡಬೇಕು ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್.ಮಂಜುನಾಥ್ ಹೇಳಿದರು.
pಕನ್ನಡಪ್ರಭ ವಾರ್ತೆ ಶಿರಾ
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರದ ಮಾದರಿ, ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಶಿರಾ, ಪಾವಗಡ, ಮಧುಗಿರಿ, ಕೊರಟಗೆರೆ ಸೇರಿದಂತೆ ಬೆಂಗಳೂರು ಗ್ರಾಮಾಂತರ ಹಾಗೂ ಚಾಮರಾಜನಗರ ಜಿಲ್ಲೆಯ ಹಲವಾರು ತಾಲೂಕುಗಳನ್ನು ಒಗ್ಗೂಡಿಸಿ ಸರಕಾರ ಮಧ್ಯ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಮಾಡಬೇಕು ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್.ಮಂಜುನಾಥ್ ಹೇಳಿದರು.ಅವರು ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ಜಾತ್ರಾ ಮಹೋತ್ಸವ ಹಾಗೂ ೨೩ನೇ ವರ್ಷದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದ ಸಮಾರೋಪ ಸಮಾರಂಭ ಗುರುವಾರ ಉದ್ಘಾಟಿಸಿ ಮಾತನಾಡಿದರು. ೨೦೨೬ ನೇ ಸಾಲಿನ ಬಜೆಟ್ ನಲ್ಲಿ ಪ್ರಾಧಿಕಾರ ಸ್ಥಾಪಿಸುವ ಪ್ರಸ್ತಾವನೆಯನ್ನು ಮಂಡಿಸಿ, ವಿಶೇಷ ಅನುದಾನ ನೀಡಿ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಸರಕಾರ ಮುಂದಾಗ ಬೇಕಿದೆ ಎಂದ ಅವರು ಮಾಜಿ ಪ್ರಧಾನ ಮಂತ್ರಿಗಳಾದ ಎಚ್.ಡಿ.ದೇವೇಗೌಡ ರವರು ಹೇಮಾವತಿ ಡ್ಯಾಂ ಎತ್ತರ ಗೊಳಿಸಿದ ಕಾರಣ , ಜಲಾಶಯದಲ್ಲಿ ನೀರಿನ ಸಂಗ್ರಹ ಹೆಚ್ಚಾಗಲು ಸಾಧ್ಯವಾಗಿ ತುಮಕೂರು ಸೇರಿದಂತೆ ಶಿರಾ ಭಾಗಕ್ಕೆ ಹೇಮಾವತಿ ನೀರು ಹರಿಯಲು ಸಾಧ್ಯವಾಯಿತು. ರೈತರು ಕೃಷಿಯನ್ನೇ ನಂಬಿ ಬದುಕುವುದು ಕಷ್ಟ ಸಾಧ್ಯವಾಗಿದ್ದು, ಹೈನುಗಾರಿಕೆ ಸೇರಿದಂತೆ ಕುರಿ ಮೇಕೆ ಸಾಕಾಣಿಕೆ ಅಂತ ಕೆಲಸ ಮಾಡಿ ಆರ್ಥಿಕವಾಗಿ ಸಬಲರಾಗಬೇಕು ಎಂದರು.
ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಸ್ಪಟಿಕಪುರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ಡಾ. ನಂಜಾವಧೂತ ಸ್ವಾಮೀಜಿಗಳು ಡಾ.ಸಿ.ಎನ್.ಮಂಜುನಾಥ್ ಅವರು ಜಯದೇವ ಹೃದ್ರೋಗ ಆಸ್ಪತ್ರೆಯನ್ನು ಗುಣಮಟ್ಟದ ಚಿಕಿತ್ಸೆಯಿಂದಲೇ ವಿಶ್ವವಿಖ್ಯಾತಿಗೊಳಿಸಿದ್ದರು. ಎಚ್.ಡಿ ದೇವೇಗೌಡ ರವರ ಜನಪರ ಹಾಗೂ ರೈತ ಪರ ಕಾಳಜಿ, ಗೋರೂರು ಹೇಮಾವತಿ ಜಲಾಶಯದ ಎತ್ತರ ದ್ವಿಗುಣ ಗೊಳ್ಳಲು ಸಾಧ್ಯವಾಗಿ ನೀರಿನ ಪ್ರಮಾಣ ಡ್ಯಾಮ್ ನಲ್ಲಿ ಹೆಚ್ಚಾದ ಕಾರಣ ಶಿರಾ ಭಾಗಕ್ಕೆ ಹೇಮಾವತಿ ನೀರು ಸರಾಗವಾಗಿ ಹರಿಯಲು ಸಾಧ್ಯವಾಯಿತು ಎಂದರು.ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ. ಗೌಡ ಮಾತನಾಡಿ, ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಈ ಭಾಗದ ರೈತರಿಗೆ ಹೆಚ್ಚು ಅನುಕೂಲವಾಗಿದ್ದು, ಸಾಮಾಜಿಕ ಕಳಕಳಿ, ರೈತಪರ ಕಾಳಜಿ, ಪ್ರತಿಭೆಗಳ ಪ್ರೋತ್ಸಾಹ ಶ್ರೀಗಳ ಸಮಾಜಮುಖಿ ಚಿಂತನೆಯನ್ನು ಸಾಕ್ಷಿಕರಿಸುತ್ತದೆ ಎಂದರು.
ಮಾಜಿ ಶಾಸಕ ಡಾ.ಸಿ.ಎಂ. ರಾಜೇಶ್ ಗೌಡ ಮಾತನಾಡಿ ತಂತ್ರಜ್ಞಾನ ಆಧಾರಿತ ಕೃಷಿಗೆ ಯುವಕರು ಮುಂದಾಗಬೇಕು ಎಂಬ ದೂರ ದೃಷ್ಟಿಯೊಂದಿಗೆ ಪ್ರಾತ್ಯಕ್ಷಿಕ ಬೆಳೆ ಮೂಲಕ ರೈತ ಸಮೂಹಕ್ಕೆ ಮಾಹಿತಿ ನೀಡುತ್ತಿರುವುದು ಉತ್ತಮ ಕೆಲಸ. ಅಪರ ಭದ್ರ, ಎತ್ತಿನಹೊಳೆ, ಹೇಮಾವತಿ ನೀರಾವರಿ ಯೋಜನೆಗಳ ಬಗ್ಗೆ ಶ್ರೀಗಳಿಗೆ ಇರುವ ಅಪಾರ ಕಾಳಜಿ ಸಮಾಜ ಎಂದು ಮರೆಯಲು ಸಾಧ್ಯವಿಲ್ಲ, ನಂಜಾವಧೂತ ಶ್ರೀಗಳು ನಿಜವಾದ ಜಲಧರ್ಮ ಯೋಗಿ ಎಂದರು.ಹಾಲು ಕರೆಯುವ ಸ್ಪರ್ಧೆಯಲ್ಲಿ ವಿಜೇತರಾದ ರೈತರಿಗೆ ಬಹುಮಾನ ವಿತರಿಸಿ ಮಾತನಾಡಿದ ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್. ಗೌಡ ಹೈನುಗಾರಿಕೆಯಲ್ಲಿ ರೈತರು ಹೆಚ್ಚು ಆಸಕ್ತಿವಹಿಸಿ ಆರ್ಥಿಕವಾಗಿ ಸಬಲರಾಗಬೇಕು. ಶ್ರೀಗಳ ಸಲಹೆ ಮೇರೆಗೆ ತಾಲೂಕು ಮಟ್ಟದ ಹಾಲು ಕರೆಯುವ ಸ್ಪರ್ಧೆಯನ್ನು ಏರ್ಪಡಿಸಿ ತುಮಕೂರು ಹಾಲು ಒಕ್ಕೂಟದ ವತಿಯಿಂದ ಪ್ರಥಮ ೫೦ ಸಾವಿರ ರುಪಾಯಿ, ದ್ವಿತೀಯ ೩೦. ಸಾವಿರ ರೂಪಾಯಿ, ೨೦. ಸಾವಿರ ರೂಪಾಯಿ ಬಹುಮಾನ ನೀಡಿ ರೈತರಿಗೆ ಪ್ರೋತ್ಸಾಹಿಸಿದ್ದೇವೆ ಎಂದರು.
ತಮ್ಮಣ್ಣ, ಡಾ.ಎಸ್.ಪಿ. ಶಂಕರ್, ಡಾ. ವಿನಯ್ ಕುಮಾರ್ ಬಿ.ಪಿ, ಡಾ. ಡಿ.ಎಂ. ಗೌಡ, ಸಿದ್ದಗಂಗಪ್ಪ, ಡಾ. ಮುದ್ದ ರಂಗಪ್ಪ, ರಾಮಕೃಷ್ಣ, ಕೆ.ಎಂ.ಶ್ರೀನಿವಾಸ್, ಡಾ. ಹೆಚ್. ಎಂ .ಶಿವಪ್ರಸಾದ್, ಬಿ. ಗಿರೀಶ್, ಡಾ.ನಾಗೇಶ್ ರಕ್ಷಿತಾ, ಸಂಪತ್ ಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.