ಸಾರಾಂಶ
ನೂರಾರು ವರ್ಷಗಳ ಬಳಿಕ ಇತ್ಯರ್ಥ ಕಂಡು ದೇಗುಲ ನಿರ್ಮಾಣ ಆಗಿರುವ ಅಯೋಧ್ಯೆಯಲ್ಲಿ ಜ.22ರಂದು ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಕರ್ನಾಟಕ ಸಿಎಂ ಅವರನ್ನು ಆಹ್ವಾನಿಸಿಲ್ಲ, ಶ್ರೀರಾಮನನ್ನು ಬಿಜೆಪಿಯ ರಾಮ ಅಂತ ವರ್ಗೀಕರಿಸುವವರಿಗೆ ಆಮಂತ್ರಣ ನೀಡಿಲ್ಲ ಎಂದು ಈಶ್ವರಪ್ಪ ಶಿವಮೊಗ್ಗದಲ್ಲಿ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ನಡೆಯಲಿರುವ ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ ಪ್ರಭು ಶ್ರೀರಾಮಚಂದ್ರ ಭಕ್ತರು ಇದ್ದಾರೋ ಅವರಿಗೆ ಆಹ್ವಾನ ಕೊಟ್ಟಿದ್ದೇವೆ. ಬಿಜೆಪಿಯ ರಾಮ ಎನ್ನುವವರಿಗೆ ಕೇಂದ್ರದ ನಾಯಕರು ಆಹ್ವಾನ ಕೊಟ್ಟಿಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕುಟುಕಿದರು.ಶಿವಮೊಗ್ಗದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀರಾಮ ಮಂದಿರದಲ್ಲಿ ನಡೆಯಲಿರುವ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿಲ್ಲ. ಕಾರಣ ರಾಮಮಂದಿರವನ್ನು ರಾಜಕಾರಣ ದೃಷ್ಟಿಯಿಂದ ನೋಡುವವರಿಗೆ, ರಾಮನನ್ನು ಬಿಜೆಪಿಯ ರಾಮ ಅಂತ ವರ್ಗೀಕರಿಸುವವರಿಗೆ ಕೇಂದ್ರದ ರಾಮಮಂದಿರ ಸಮಿತಿ ಆಮಂತ್ರಣ ನೀಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
496 ವರ್ಷದ ಕೆಳಗೆ ಅಯೋಧ್ಯೆಯಲ್ಲಿ ರಾಮ ಮಂದಿರ ಧ್ವಂಸ ಮಾಡಿದ್ದರು. ಬಾಬರ್ ಮಸೀದಿ ಕಟ್ಟಿದ್ದರು. ಈಗ ಗುಲಾಮಗಿರಿ ಮಸೀದಿ ಒಡೆದು ರಾಮಮಂದಿರ ಕಟ್ಟಿದ್ದೇವೆ. ನಮ್ಮೆಲ್ಲರ ಸೌಭಾಗ್ಯ, ನಾವು ಬದುಕಿರುವ ದಿನದಲ್ಲೇ ಬಾಲರಾಮನ ವಿಗ್ರಹ ಪ್ರತಿಷ್ಠಾಪನೆ ಆಗುತ್ತಿದೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಆಗಬೇಕೆಂಬ ತೀರ್ಮಾನ ಆಗುತ್ತಿದ್ದಂತೆ ಕಾಶಿ ಮಥುರಾದಲ್ಲಿ ಸರ್ವೇಗೆ ಆದೇಶವಾಗಿದೆ. ನಮ್ಮ ಪರವಾಗಿ ತೀರ್ಪು ಬರುತ್ತದೆ. ಕಾಶಿಯಲ್ಲೂ ಮಸೀದಿ ಒಡೆದು ಹಾಕಿ ಕಾಶಿ ಮಂದಿರ ಕಟ್ಟುತ್ತೇವೆ. ಮಥುರಾದಲ್ಲೂ ಶ್ರೀ ಕೃಷ್ಣನ ದೇವಸ್ಥಾನ ಕಟ್ಟಿಯೇ ಕಟ್ಟುತ್ತೇವೆ ಎಂದು ಹೇಳಿದರು.ಮನೆ ಮನೆಗೆ ಮಂತ್ರಾಕ್ಷತೆ ಕೊಡ್ತಿದ್ದೇವೆ. ಜ.22ರಂದು ದೇವರ ಮನೆಯಲ್ಲಿಟ್ಟು ಪೂಜೆ ಮಾಡಿ, ಸಿಹಿ ಮಾಡಿ, ಊಟ ಮಾಡಬೇಕು. ಬಳಿಕ ದೀಪಾವಳಿ ಹಬ್ಬದ ರೀತಿ ಭಕ್ತರು ಆಚರಣೆ ಮಾಡಬೇಕು ಎಂದು ಈಶ್ವರಪ್ಪ ಹೇಳಿದರು.
- - - -2ಎಸ್‌ಎಂಜಿಕೆಪಿ05: ಕೆ.ಎಸ್.ಈಶ್ವರಪ್ಪ