ಸಾರಾಂಶ
ಹಾಸನ : ಹಾಸನ ಲೋಕಸಭಾ ಕ್ಷೇತ್ರಕ್ಕೆ ನಡೆಯುವ ಚುನಾವಣೆಯಲ್ಲಿ ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳೊಂದಿಗೆ ಕೇಂದ್ರ ಚುನಾವಣಾ ಆಯೋಗದ ವೀಕ್ಷಕರು ಸೋಮವಾರ ಸಂಜೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದರು.
ಸಾಮಾನ್ಯ ವೀಕ್ಷಕ ಚಂದ್ರಮೋಹನ್ ಠಾಕೂರ್ ಮಾತನಾಡಿ, ಸುಗಮವಾಗಿ ಚುನಾವಣಾ ಪ್ರಕ್ರಿಯೆ ನಡೆಯಲು ಅಭ್ಯರ್ಥಿಗಳು ಸಹಕರಿಸಬೇಕು. ಅಭ್ಯರ್ಥಿಗಳು ಚುನಾವಣಾ ಖರ್ಚಿನ ಮಿತಿಯೊಳಗೆ ವೆಚ್ಚ ಮಾಡಬೇಕು. ಧಾರ್ಮಿಕ ಸ್ಥಳಗಳನ್ನು ಚುನಾವಣಾ ಪ್ರಚಾರಕ್ಕೆ ಬಳಸುವಂತಿಲ್ಲ ಎಂದು ತಿಳಿಸಿದರು.
ಪ್ರಚಾರದಲ್ಲಿ ಇತರೆ ಅಭ್ಯರ್ಥಿಗಳ ಬಗ್ಗೆ ವೈಯಕ್ತಿಕ ನಿಂದನೆ, ಅವಾಚ್ಯ ಶಬ್ದಗಳ ಬಳಕೆಗೆ ಅವಕಾಶವಿಲ್ಲ. ಧರ್ಮ, ಜಾತಿ ಹೆಸರಿನಲ್ಲಿ ದ್ವೇಷ ಭಾಷಣ ಮಾಡಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಸಭೆ-ಸಮಾರಂಭ ನಡೆಸಲು ಅನುಮತಿ ಪಡೆಯಲೇಬೇಕು. ವಾಹನಗಳನ್ನು ಅನುಮತಿ ಇಲ್ಲದೆ ಪ್ರಚಾರ ಕಾರ್ಯಕ್ಕೆ ಬಳಸುವಂತಿಲ್ಲ. ಅಭ್ಯರ್ಥಿಗಳು ಸಂಚರಿಸುವ ವಾಹನಗಳಿಗೂ ಅನುಮತಿ ಪಡೆಯಬೇಕಿದೆ ಎಂದು ಹೇಳಿದರು.
ಅಭ್ಯರ್ಥಿಗಳಿಗೆ ಪ್ರತಿ ಮತಗಟ್ಟೆಗೆ ಒಬ್ಬರಂತೆ ಏಜೆಂಟರನ್ನು ನೇಮಿಸಬಹುದು. ಲೋಕಸಭಾ ಕ್ಷೇತ್ರದಲ್ಲಿ 561 ಮತಗಟ್ಟೆಗಳನ್ನು ಸೂಕ್ಷ್ಮ ಎಂದು ಗುರುತಿಸಲಾಗಿದೆ. ಯಾವುದೇ ಮತಗಟ್ಟೆಗಳ ಬಗ್ಗೆ ಅಭ್ಯರ್ಥಿಗಳಿಗೆ ಯಾವುದೇ ಆತಂಕ, ಸಮಸ್ಯೆಗಳಿದ್ದರೆ ತನ್ನ ಗಮನಕ್ಕೆ ತರಬಹುದು ಎಂದು ಚಂದ್ರಮೋಹನ್ ಠಾಕೂರ್ ತಿಳಿಸಿದರು.
ಸಭೆಯಲ್ಲಿ ಕೇಂದ್ರ ಚುನಾವಣಾ ಆಯೋಗದ ವೆಚ್ಚ ವೀಕ್ಷಕರಾದ ವಿಕಾಸ್ ಸಿಂಗ್ ಭಗ್ರಿ ಹಾಗೂ ವೈಭವ್ ಅಗರವಾಲ್ ಮಾತನಾಡಿ, ಚುನಾವಣಾ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಖರ್ಚು ವೆಚ್ಚಗಳು ನಿಯಮಾನುಸಾರವೇ ನಡೆಯಬೇಕು. ಬ್ಯಾಂಕ್ ಖಾತೆಯ ಮೂಲಕವೇ ಪಾವತಿಯಾಗಬೇಕು. ಅಭ್ಯರ್ಥಿಗಳು 95 ಲಕ್ಷ ರು. ವರೆಗೆ ವೆಚ್ಚ ಮಾಡಬಹುದು ಎಂದರು.
ಸಭೆಯಲ್ಲಿ ಅಭ್ಯರ್ಥಿಗಳಿಗೆ ಚುನಾವಣಾ ಕೈಪಿಡಿಗಳನ್ನು ವಿತರಿಸಲಾಯಿತು. ಜಿಲ್ಲಾ ಚುನಾವಣಾಧಿಕಾರಿ ಸತ್ಯಭಾಮಾ ಅವರು ಅಭ್ಯರ್ಥಿಗಳಿಗೆ ಚುನಾವಣಾ ಪ್ರಕ್ರಿಯೆಗಳ ಮಾಹಿತಿ ನೀಡಿದರು. ಸಭೆಯಲ್ಲಿ ಕೇಂದ್ರ ಪೊಲೀಸ್ ವೀಕ್ಷಕರಾದ ದಿವ್ಯ ಸತ್ಯನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ, ಜಿಲ್ಲಾ ಪೊಲೀಸ್ ಅಧೀಕ್ಷಕ ಮುಹಮ್ಮದ್ ಸುಜೀತಾ, ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ ಇದ್ದರು.
ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚುನಾವಣಾ ಅಭ್ಯರ್ಥಿಗಳೊಂದಿಗೆ ಕೇಂದ್ರ ವೀಕ್ಷಕರ ಸಭೆ