ಕನ್ನಡಪ್ರಭ ವಾರ್ತೆ ಮಂಗಳೂರು

ಅಡಕೆ ಬೆಳೆಗಾರರು ಮತ್ತು ಸಹಕಾರ ಸಂಘಗಳು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ದೃಢ ಸಂಕಲ್ಪದೊಂದಿಗೆ ಉನ್ನತ ಮಟ್ಟದ ಗಣ್ಯರ ನಿಯೋಗ ಶುಕ್ರವಾರ ನವದೆಹಲಿಯಲ್ಲಿ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಸುದೀರ್ಘ ಹಾಗೂ ಫಲಪ್ರದ ಚರ್ಚೆ ನಡೆಸಿತು.

ನಿಯೋಗದಲ್ಲಿ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಬಿ.ವೈ.ರಾಘವೇಂದ್ರ, ಕೋಟಾ ಶ್ರೀನಿವಾಸ ಪೂಜಾರಿ, ಅಡಕೆ ಮಹಾಮಂಡಲದ ಅಧ್ಯಕ್ಷ ಆರಗ ಜ್ಞಾನೇಂದ್ರ, ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಹಾಗೂ ಕ್ಯಾಂಪ್ಕೊ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ವಿ.ಸತ್ಯನಾರಾಯಣ ಪಾಲ್ಗೊಂಡಿದ್ದರು.

ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ನಿಯೋಗ ಅಡಕೆ ವಲಯ ಪ್ರಸಕ್ತ ಎದುರಿಸುತ್ತಿರುವ ಗಂಭೀರ ಸವಾಲುಗಳನ್ನು ವಿವರಿಸಿತು.

ಅಕ್ರಮ ಆಮದಿಗೆ ಕಡಿವಾಣ:


ವಿವಿಧ ಎಚ್ಎಸ್ ಕೋಡ್‌ಗಳನ್ನು ಮರೆಮಾಚಿ ನಡೆಯುತ್ತಿರುವ ಅಡಕೆಯ ಅಕ್ರಮ ಆಮದು, ಕಳೆದ ಅಕ್ಟೋಬರ್‌ನಿಂದ ‘ಹುರಿದ ಅಡಕೆ’ ಎಂಬ ನೂತನ ವರ್ಗೀಕರಣದ ನೆಪದಲ್ಲಿ ದೇಶದೊಳಗೆ ನುಸುಳುತ್ತಿರುವ ಕಳಪೆ ಗುಣಮಟ್ಟದ ಅಡಕೆಯ ಬಗ್ಗೆ ಸಚಿವರ ಗಮನ ಸೆಳೆಯಲಾಯಿತು.

ಧಾರಣೆ ಕುಸಿತದ ಆತಂಕ:

ಕನಿಷ್ಠ ಆಮದು ಬೆಲೆ ನಿಯಮಗಳನ್ನು ಗಾಳಿಗೆ ತೂರಿ, ಸುಂಕ ರಹಿತವಾಗಿ ಅಗ್ಗದ ದರದಲ್ಲಿ ವಿದೇಶಿ ಅಡಕೆ ದೇಶೀಯ ಮಾರುಕಟ್ಟೆಯನ್ನು ಪ್ರವೇಶಿಸುತ್ತಿರುವುದರಿಂದ, ಅಡಕೆ ಧಾರಣೆಯಲ್ಲಿ ಉಂಟಾಗಿರುವ ದಿಢೀರ್ ಕುಸಿತದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಲಾಯಿತು.

‘ಒಂದು ದೇಶ, ಒಂದು ತೆರಿಗೆ’ ಜಾರಿ:

ಖಾಸಗಿ ವ್ಯಾಪಾರಿಗಳು ತೆರಿಗೆ ವಂಚಿಸುತ್ತಿರುವಾಗ, ಪ್ರಾಮಾಣಿಕವಾಗಿ ವಹಿವಾಟು ನಡೆಸುವ ಸಹಕಾರ ಸಂಘಗಳ ಮೇಲೆ ಬೀಳುತ್ತಿರುವ ಅನಗತ್ಯ ತೆರಿಗೆ ಹೊರೆಯನ್ನು ತಪ್ಪಿಸಲು, ‘ಒಂದು ದೇಶ ಒಂದು ತೆರಿಗೆ’ ನೀತಿ ಜಾರಿಗೊಳಿಸುವ ತುರ್ತು ಅಗತ್ಯವನ್ನು ಕ್ಯಾಂಪ್ಕೊ ಅಧ್ಯಕ್ಷರು ಪ್ರಬಲವಾಗಿ ಮಂಡಿಸಿದರು.

ನಿಯೋಗದ ಮನವಿಗೆ ಸ್ಪಂದಿಸಿದ ಅಮಿತ್ ಶಾ, ಈ ಅಕ್ರಮಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಅಲ್ಲದೆ ಸಹಕಾರ ಕ್ಷೇತ್ರ ಹಾಗೂ ಅದರ ಸದಸ್ಯರ ಹಿತರಕ್ಷಣೆಗೆ ಕೇಂದ್ರ ಸರ್ಕಾರ ಸದಾ ಬೆಂಬಲವಾಗಿ ನಿಲ್ಲಲಿದೆ ಎಂಬ ಅಭಯ ನೀಡಿದರು. ನಂತರ ನಿಯೋಗ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ರೈತರು ಎದುರಿಸುತ್ತಿರುವ ತೆರಿಗೆಯ ಹೊರೆಯ ಬಗ್ಗೆ ಮನವರಿಕೆ ಮಾಡಿಕೊಟ್ಟಿತು.