ಸಾರಾಂಶ
- ಹಿಂದಿ ಸಪ್ತಾಹ ವಿರೋಧಿಸಿ ಕರವೇ ಪ್ರತಿಭಟನೆಯಲ್ಲಿ ರಾಮೇಗೌಡ ಆಕ್ರೋಶ । ಪಿಡಬ್ಲ್ಯುಡಿ ಕಚೇರಿಗೆ ಮುತ್ತಿಗೆ
- - - ಕನ್ನಡಪ್ರಭ ವಾರ್ತೆ ದಾವಣಗೆರೆಹಿಂದಿ ಸಪ್ತಾಹ ಆಚರಣೆ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಪದಾಧಿಕಾರಿಗಳು, ಸದಸ್ಯರು ತೋಳಿಗೆ ಕಪ್ಪು ಪಟ್ಟಿ ಧರಿಸಿ, ನಗರದ ಲೋಕೋಪಯೋಗಿ ಇಲಾಖೆ ಕಚೇರಿಗೆ ಶನಿವಾರ ಮುತ್ತಿಗೆ ಹಾಕಿದರು. ಕರಾಳ ದಿನವಾಗಿ ಆಚರಿಸುವ ಮೂಲಕ ಹಿಂದಿ ಹೇರಿಕೆ ನೀತಿಯನ್ನು ಪ್ರತಿಭಟಿಸಿದರು.
ನಗರದ ಹಳೇ ಪಿ.ಬಿ. ರಸ್ತೆಯ ಲೋಕೋಪಯೋಗಿ ಇಲಾಖೆ ಕಚೇರಿಗೆ ಕರವೇ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ಇತರರ ನೇತೃತ್ವದಲ್ಲಿ ಮುತ್ತಿಗೆ ಹಾಕಲಾಯಿತು. ದೇಶದಲ್ಲಿ ವಿಶೇಷವಾಗಿ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತ ರಾಜ್ಯಗಳಲ್ಲಿ ಹಿಂದಿ ಹೇರಿಕೆಯ ಹಿಂದಿ ಸಪ್ತಾಹದ ವಿರುದ್ಧ ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಲಾಯಿತು.ಮುಖಂಡ ಎಂ.ಎಸ್.ರಾಮೇಗೌಡ ಈ ಸಂದರ್ಭ ಮಾತನಾಡಿ, ಒಕ್ಕೂಟ ವ್ಯವಸ್ಥೆಯ ಭಾರತ ದೇಶದಲ್ಲಿ ಕನ್ನಡ ಸೇರಿದಂತೆ 22 ಅಧಿಕೃತ ಭಾಷೆಗಳಿವೆ. ಅದರಂತೆ ಹಿಂದಿ ಭಾಷೆಯೂ ಒಂದಾಗಿದೆ ಅಷ್ಟೇ. ಆದರೆ, ಹಲವಾರು ದಶಕಗಳಿಂದಲೂ ಹಿಂದಿ ಭಾಷೆಯನ್ನು ರಾಷ್ಟ್ರಭಾಷೆ ಎಂಬುದಾಗಿ ಸುಳ್ಳು ಹೇಳುತ್ತಾ, ದೇಶದ ಜನರಿಗೆ ಯಾಮಾರಿಸಲಾಗಿದೆ ಎಂದು ದೂರಿದರು.
ಕೇಂದ್ರ ಸರ್ಕಾರದ ಸಚಿವರು ಈಚೆಗೆ ಹಿಂದಿ ರಾಷ್ಟ್ರಭಾಷೆ ಅಲ್ಲ ಎಂದು ಸ್ಪಷ್ಟನೆ ನೀಡಿದ್ದರೂ, ಹಿಂದಿ ಸಪ್ತಾಹ ಆಚರಣೆ ಖಂಡನೀಯ. ಭಾರತ ಅಂದಾಕ್ಷಣ ಬರೀ ಹಿಂದಿ ಭಾಷಿಕರು ಅಂತಾ ಅರ್ಥವೂ ಅಲ್ಲ. ರಾಜ್ಯವಾರು ಆಯಾ ಸ್ಥಳೀಯ ಭಾಷೆಗಳು, ಸ್ಥಳೀಯ ಸಂಸ್ಕೃತಿಯಲ್ಲಿ ವ್ಯತ್ಯಾಸವಿದ್ದರೂ, ಕೇಂದ್ರ ಸರ್ಕಾರವು ನಮ್ಮ ರಾಜ್ಯ ಭಾಷೆ ಕನ್ನಡದ ಮೇಲೆ ದಬ್ಬಾಳಿಕೆ ನಡೆಸುತ್ತಾ ಬರುತ್ತಿದೆ ಎಂದು ಆರೋಪಿಸಿದರು.ಕನ್ನಡ ನಾಡಿಗೆ ದೊಡ್ಡ ಅವಮಾನ:
ದೇಶದಲ್ಲಿ 2005ರ, ಸೆಪ್ಟಂಬರ್ 14ರಿಂದಲೂ ಪ್ರತಿವರ್ಷ ಕೇಂದ್ರ ಸರ್ಕಾರ ಹಿಂದಿ ಸಪ್ತಾಹ ಆಚರಿಸುತ್ತಿದೆ. ಇದನ್ನು ಖಂಡಿಸಿ ಕರವೇ ದಾವಣಗೆರೆ ಸೇರಿದಂತೆ ರಾಜ್ಯವ್ಯಾಪಿ ಸೆ.14ರಂದು ಹೋರಾಟ ನಡೆಸುತ್ತಿದೆ. ಬ್ಯಾಂಕ್, ಅಂಚೆ ಕಚೇರಿ, ಬಿಎಸ್‌ಎನ್‌ಎಲ್, ಕೇಂದ್ರೀಯ ಶಾಲೆಗಳು, ಸಿಬಿಎಸ್‌ಇ ಶಾಲೆಗಳಲ್ಲಿ ಹಿಂದಿ ಸಪ್ತಾಹ ಆಚರಿಸಲಾಗುತ್ತಿದೆ. ಬೀರೂರಿನಿಂದ ಸಮ್ಮಸಗಿ ರಾಜ್ಯ ಹೆದ್ದಾರಿಯ ಮಾರ್ಗಸೂಚಿಗಳು, ನಾಮಫಲಕಗಳನ್ನು ಹಿಂದಿಯಲ್ಲಿ ಬರೆಸುವ ಮೂಲಕ ಕನ್ನಡ ನಾಡಿಗೆ ದೊಡ್ಡ ಅವಮಾನ ಮಾಡಲಾಗಿದೆ ಎಂದು ದೂರಿದರು.ಪಿಡಬ್ಲ್ಯುಡಿ ಸಹಾಯಕ ಅಭಿಯಂತರ ಸಿದ್ದರಾಜು ಮೂಲಕ ಸರ್ಕಾರಕ್ಕೆ ಮನವಿ ಅರ್ಪಿಸಲಾಯಿತು. ಪ್ರತಿಭಟನೆಯಲ್ಲಿ ಕರವೇ ಮುಖಂಡರಾದ ಜಾನಪದ ತತ್ವ ಕವಿ ಯುಗಧರ್ಮ ರಾಮಣ್ಣ, ಕರವೇ ನಗರ ಅಧ್ಯಕ್ಷ ಎನ್.ಟಿ.ಹನುಮಂತಪ್ಪ, ಜಿ.ಎಸ್.ಸಂತೋಷ, ಗಣೇಶ, ಗಜೇಂದ್ರ, ಉತ್ತರ ಅಧ್ಯಕ್ಷ ಎನ್.ಬಿ.ಎ.ಲೋಕೇಶ, ದಕ್ಷಿಣ ಅಧ್ಯಕ್ಷ ಜಬೀವುಲ್ಲಾ, ಖಾದರ್, ಭಾಷಾ, ಮುಷರಫ್, ಆಟೋ ರಫೀಕ್, ಯುವ ಘಟಕದ ತನ್ವೀರ್, ಪಾದಚಾರಿ ವ್ಯಾಪಾರಿಗಳ ಘಟಕದ ಸುರೇಶ, ಸಂಜು, ನಾಗರಾಜಪ್ಪ, ರಾಜು, ಅಕ್ಷಯ್, ಪ್ರಕಾಶ, ಸಾಗರ, ದಾದಾಪೀರ್, ಬಸವರಾಜ, ಹರಿಹರ ಅಧ್ಯಕ್ಷ ರಾಜೇಶ, ಅಮಾನುಲ್ಲಾ ಖಾನ್, ಇಮ್ತಿಯಾಜ್, ಶಶಿ ನಾಯ್ಕ, ರುದ್ರೇಶ್ ಗೌಡ, ರೈತ ಘಟಕದ ಕೋಡಿಹಳ್ಳಿ ಗಂಗಾಧರ, ಮಂಜುಳಾ ಗಣೇಶ, ಮಂಜುಳಾ ಮಹಾಂತೇಶ, ಮಾಯಕೊಂಡ ಕ್ಷೇತ್ರದ ನಾಗಮ್ಮ. ರವಿಚಂದ್ರ, ರವಿಕುಮಾರ ಇತರರು ಇದ್ದರು.
- - -ಬಾಕ್ಸ್ * ಮಾರ್ಗಸೂಚಿ, ಮೈಲುಗಲ್ಲು ಕನ್ನಡದಲ್ಲೇ ಬರೆಸಿ
ಕರ್ನಾಟಕದ ಆಡಳಿತ ಭಾಷೆ ಕನ್ನಡ. ಈ ನೆಲದಲ್ಲಿ ಕನ್ನಡವೇ ಸಾರ್ವಭೌಮ. ರಾಜ್ಯ ಸರ್ಕಾರವೂ ಈಚೆಗೆ ಯಾವುದೇ ಫಲಕಗಳಲ್ಲಿ ಶೇ.60ರಷ್ಟು ಕನ್ನಡದಲ್ಲಿ ಇರಬೇಕೆಂಬ ಆದೇಶ ಮಾಡಿದೆ. ರಾಜ್ಯ ಹೆದ್ದಾರಿಗಳಲ್ಲಿ ಮಾರ್ಗಸೂಚಿ, ಮೈಲುಗಲ್ಲು, ನಾಮಫಲಕಗಳಲ್ಲಿ ಕನ್ನಡದಲ್ಲಿ ಶೇ.60ರಷ್ಟು, ಹೊರ ರಾಜ್ಯದವರಿಗೆ ಅರ್ಥವಾಗುವಂತೆ ಸಣ್ಣದಾಗಿ ಆಂಗ್ಲ ಭಾಷೆಯಲ್ಲಿ ಬರೆಸಿದರೆ ಸಾಕು. ಆದರೆ, ಅಧಿಕಾರಿ ವರ್ಗವು ಹಿಂದಿ ಭಾಷೆಯಲ್ಲಿ ಮಾರ್ಗಸೂಚಿ ಹಾಗೂ ಊರುಗಳ ಹೆಸರನ್ನು ಬರೆಸಿದೆ. ಅವುಗಳಿಗೆ ಮಸಿ ಬಳಿದು, ಪ್ರತಿಭಟಿಸಲಾಗಿದೆ. ತಕ್ಷಣ ಕನ್ನಡದಲ್ಲಿ ಮಾರ್ಗಸೂಚಿ, ಮೈಲುಗಲ್ಲುಗಳನ್ನು ಬರೆಸುವಂತೆ ರಾಮೇಗೌಡ ತಾಕೀತು ಮಾಡಿದರು.- - - -14ಕೆಡಿವಿಜಿ1, 2:
ಹಿಂದಿ ಸಪ್ತಾಹ ವಿರೋಧಿಸಿ ದಾವಣಗೆರೆಯಲ್ಲಿ ಕರವೇ ಜಿಲ್ಲಾ ಘಟಕದಿಂದ ಕರಾಳ ದಿನ ಆಚರಿಸಿ, ಲೋಕೋಪಯೋಗಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು.