ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಂಡರ್ ಸೆಕ್ರೆಟರಿ ದೀಪಕ್ ಕುಮಾರ್ ಹಾಗೂ ಪ್ರಾಜೆಕ್ಟ್ ಡೈರೆಕ್ಟರ್ ಶ್ರೀಮತಿ ಸಾಹು ಅವರನ್ನೊಳಗೊಂಡ ತಂಡವು ಬೀದರ್‌ನ ಕರೆಜ್ ವ್ಯವಸ್ಥೆಯ ನಿರ್ಮಾಣ, ಐತಿಹಾಸಿಕ ಹಿನ್ನೆಲೆ, ನೀರು ಸಂಗ್ರಹಣೆ ಮತ್ತು ಅಂತರಜಲ ಮರುಪೂರಣಕ್ಕೆ ಅದರ ಕೊಡುಗೆ ಹಾಗೂ ಇತ್ತೀಚಿನ ಪುನರುಜ್ಜೀವನ ಕಾರ್ಯಗಳ ಕುರಿತು ಮಾಹಿತಿ ಪಡೆದುಕೊಂಡಿತು.
ಕನ್ನಡಪ್ರಭ ವಾರ್ತೆ ಬೀದರ್
ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ (Ministry of Rural Development) ಅಧಿಕಾರಿಗಳ ತಂಡವು ಬೀದರ್ ಜಿಲ್ಲೆಯ ಐತಿಹಾಸಿಕ ಕರೆಜ್ (Karez) ಜಲವ್ಯವಸ್ಥೆ ಹಾಗೂ ಅದರ ಪುನರುಜ್ಜೀವನ ಕಾರ್ಯದ ಅಧ್ಯಯನ ಮಾಡುವ ಉದ್ದೇಶದಿಂದ ಬೀದರ್‌ಗೆ ಭೇಟಿ ನೀಡಿ ಕರೆಜ್ ವ್ಯವಸ್ಥೆಯನ್ನು ವೀಕ್ಷಿಸಿತು.ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಂಡರ್ ಸೆಕ್ರೆಟರಿ ದೀಪಕ್ ಕುಮಾರ್ ಹಾಗೂ ಪ್ರಾಜೆಕ್ಟ್ ಡೈರೆಕ್ಟರ್ ಶ್ರೀಮತಿ ಸಾಹು ಅವರನ್ನೊಳಗೊಂಡ ತಂಡವು ಬೀದರ್‌ನ ಕರೆಜ್ ವ್ಯವಸ್ಥೆಯ ನಿರ್ಮಾಣ, ಐತಿಹಾಸಿಕ ಹಿನ್ನೆಲೆ, ನೀರು ಸಂಗ್ರಹಣೆ ಮತ್ತು ಅಂತರಜಲ ಮರುಪೂರಣಕ್ಕೆ ಅದರ ಕೊಡುಗೆ ಹಾಗೂ ಇತ್ತೀಚಿನ ಪುನರುಜ್ಜೀವನ ಕಾರ್ಯಗಳ ಕುರಿತು ಮಾಹಿತಿ ಪಡೆದುಕೊಂಡಿತು.
ದೇಶಕ್ಕೆ ಪಾಠವಾಗಬಹುದು: ಕರೇಜ್ ವ್ಯವಸ್ಥೆಯ ಕುರಿತು ವಿವರವಾಗಿ ಮಾಹಿತಿ ಪಡೆದ ಕೇಂದ್ರ ಗ್ರಾಮೀಣಾ ಭಿವೃದ್ಧಿ ಸಚಿವಾಲಯದ ಅಂಡರ್ ಸೆಕ್ರೆಟರಿ ದೀಪಕ್ ಕುಮಾರ್ ಅವರು ಬೀದರ್‌ನಲ್ಲಿ ಐತಿಹಾಸಿಕ ಜಲಸಂಪ ನ್ಮೂಲಗಳ ಪುನರುಜ್ಜೀವನಕ್ಕಾಗಿ ನಡೆದಿರುವ ಪ್ರಯತ್ನಗಳನ್ನು ಗಮನವಿಟ್ಟು ಆಲಿಸಿ ಕರೆಜ್ ವ್ಯವಸ್ಥೆಯ ಪುನರುಜ್ಜೀವನದಲ್ಲಿ ವಿವಿಧ ಸಂಘಟನೆಗಳು ಹಾಗೂ ಸ್ಥಳೀಯ ಸಮುದಾಯಗಳು ವಹಿಸಿರುವ ಪಾತ್ರವನ್ನು ಅವರು ಪ್ರಶಂಸಿಸಿದರು.ಇಂತಹ ವಿಶಿಷ್ಟ ಅವಕಾಶಗಳು ಮತ್ತು ಸ್ಥಳೀಯ ಜ್ಞಾನವನ್ನು ರಾಜ್ಯ ಸರ್ಕಾರಗಳು ಅರ್ಥಮಾಡಿಕೊಂಡು ಬಳಸಿಕೊಳ್ಳಲು ಪ್ರಾರಂಭಿಸಿದಾಗ, ಒಂದು ಸಾಮಾನ್ಯ ಕೆಲಸವು ದೊಡ್ಡ ಉಪಕ್ರಮವಾಗಿ ರೂಪುಗೊಳ್ಳುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಬೀದರ್‌ನಲ್ಲಿ ನೀರಿನ ಸಂರಕ್ಷಣೆ, ಸಂಗ್ರಹಣೆ ಮತ್ತು ಅಂತರಜಲ ಮರುಪೂರಣಕ್ಕೆ ಸಂಬಂಧಿಸಿದಂತೆ ಲಭ್ಯವಿರುವ ಅನುಭವಗಳು ದೇಶದ ವಿವಿಧ ಭಾಗಗಳಲ್ಲಿ ಎದುರಾಗುತ್ತಿರುವ ನೀರಿನ ಕೊರತೆ ಮತ್ತು ಜಲಸಂಕಷ್ಟಕ್ಕೆ ಪರಿಹಾರ ಕಂಡುಕೊಳ್ಳಲು ಮಾರ್ಗದರ್ಶಕ ಅಂಶಗಳಾಗಬಹುದು ಎಂದು ಅವರು ಹೇಳಿದರು.ಪ್ರಮುಖ ಪಾಠಗಳನ್ನು ಮರೆಯಬಾರದು: ಪ್ರಾಜೆಕ್ಟ್ ಡೈರೆಕ್ಟರ್ ಶ್ರೀಮತಿ ಸಾಹು ಅವರು ಕೂಡ ಬೀದರ್‌ನ ಕರೆಜ್ ವ್ಯವಸ್ಥೆ ಮತ್ತು ಅದರ ಪುನರುಜ್ಜೀವನ ಕಾರ್ಯ ಗಳನ್ನು ಮೆಚ್ಚಿಕೊಂಡರು. ಹಳೆಯ ಕಾಲದ ಜನರು ನೀರಿನ ಅಗತ್ಯವನ್ನು ಅರಿತು, ಸ್ಥಳೀಯ ಪರಿಸರ ಮತ್ತು ಭೌಗೋಳಿಕ ಪರಿಸ್ಥಿತಿಗೆ ಅನುಗುಣವಾಗಿ ರೂಪಿಸಿ ಕೊಂಡಿದ್ದ ಇಂತಹ ಜಲಸಂಪನ್ಮೂಲಗಳು ನಮ್ಮ ಇತಿಹಾಸದ ಪ್ರಮುಖ ಪಾಠಗಳಾಗಿವೆ. ಅವುಗಳನ್ನು ಗೌರವಿಸುವುದರ ಜೊತೆಗೆ ಮುಂದಿನ ಪೀಳಿಗೆಗಾಗಿ ಸಂರಕ್ಷಿಸಬೇಕು ಎಂದು ಹೇಳಿದರು.
ಕರೆಜ್, ಕಲ್ಯಾಣಿ, ಕೆರೆಗಳ ಪುನರುಜ್ಜೀವನಕ್ಕೆ ಕೇಂದ್ರದ ಪೈಲಟ್ ಅಧ್ಯಯನಕ್ಕೆ ಮನವಿ: ಯುವಾ ಟೀಮ್ ಸಹ ಸಂಸ್ಥಾಪಕ ವಿನಯ ಕುಮಾರ್ ಮಾಳಗೆ ಅವರು ಬೀದರ್‌ನಲ್ಲಿ ಕರೆಜ್‌ಗಳ ಜೊತೆಗೆ ಐತಿಹಾಸಿಕ ಸ್ಟೆಪ್‌ವೆಲ್‌ಗಳು, ತೆರೆದ ಬಾವಿಗಳು, ಕೆರೆಗಳು, ಕಟ್ಟೆಗಳು ಹಾಗೂ ಇತರ ಸಾಂಪ್ರದಾಯಿಕ ಜಲಸಂಪನ್ಮೂಲಗಳ ಪುನರುಜ್ಜೀವನಕ್ಕೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ ನಡೆದಿರುವ ಅನುಭವವನ್ನು ದಾಖಲಿಸಿ, ಇದನ್ನು ಕೇಂದ್ರ ಸರ್ಕಾರದ ಮಟ್ಟದಲ್ಲಿ ಪೈಲಟ್ ಅಧ್ಯಯನವಾಗಿ ಕೈಗೆತ್ತಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.ರಾಜ್ಯ ಸರ್ಕಾರವು ಈಗಾಗಲೇ ಬೀದರ್‌ನ ಕರೆಜ್ ಪುನರುಜ್ಜೀವನ ಕಾಮಗಾರಿಗಳ ಎರಡನೇ ಹಂತಕ್ಕೆ ಸುಮಾರು 10 ಕೋಟಿ ರು. ಅನುದಾನ ಮಂಜೂರು ಮಾಡಿರುವುದು ಈ ಕಾರ್ಯಕ್ಕೆ ದೊರೆತಿರುವ ಮಹತ್ವದ ಬೆಂಬಲವಾಗಿದೆ ಎಂದು ವಿನಯ ಕುಮಾರ್ ಮಾಳಗೆ ತಿಳಿಸಿದರು.
ಈ ಸಂದರ್ಭದಲ್ಲಿ ಯುವಾ ಟೀಮ್ ಸಂಸ್ಥೆಯ ಸಹ ಸಂಸ್ಥಾಪಕ ವಿನಯ ಕುಮಾರ್ ಮಾಳಗೆ ಹಾಗೂ ತಂಡದ ಸದಸ್ಯರಾದ ಪ್ರೇಮ್ ಕುಮಾರ್ ಮತ್ತು ಶಂಕರ್ ಅವರು ಕೇಂದ್ರದ ಅಧಿಕಾರಿಗಳಿಗೆ ಕರೆಜ್ ವ್ಯವಸ್ಥೆಯ ಕುರಿತು ವಿವರಿಸಿದರಲ್ಲದೇ ಕೇಂದ್ರದ ಅಧಿಕಾರಿಗಳೊಂದಿಗೆ ನಡೆದ ಈ ಅಧ್ಯಯನ ಪ್ರವಾಸದಲ್ಲಿ ಕಮಲನಗರ ತಾಲೂಕು ಪಂಚಾಯತ್ ಅಧಿಕಾರಿ ಹನುಮಂತರಾವ್ ಕೌಟಗೆ, ಪಿಡಿಓ ಶರತ್ ಕುಮಾರ್, ಉಪ ಕಾರ್ಯದರ್ಶಿ ಸೂರ್ಯಕಾಂತ್ ಬಿರಾದಾರ್ ಹಾಗೂ ಪ್ರಾಜೆಕ್ಟ್ ಕೋ-ಆರ್ಡಿನೇಟರ್ ದೀಪಕ್ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ಉಪಸ್ಥಿತರಿದ್ದರು.--
ಚಿತ್ರ 9ಬಿಡಿಆರ್61:ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಂಡರ್ ಸೆಕ್ರೆಟರಿ ದೀಪಕ್ ಕುಮಾರ್ ಹಾಗೂ ಪ್ರಾಜೆಕ್ಟ್ ಡೈರೆಕ್ಟರ್ ಶ್ರೀಮತಿ ಸಾಹು ಅವರನ್ನೊಳಗೊಂಡ ತಂಡವು ಬೀದರ್‌ನ ಕರೆಜ್ ವ್ಯವಸ್ಥೆ ಪರಿಶೀಲಿಸಿತು.