ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಡಿಸೆಂಬರ್ 2ರಂದು ನಗರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಂದ್ರ ಸರ್ಕಾರ, ಹಿಂದಿನ ಬಿಜೆಪಿ ಸರ್ಕಾರದ ಯೋಜನೆಗಳು ಹಾಗೂ ಗಣಿಗಾರಿಕೆಯ ಅಭಿವೃದ್ಧಿಯ ಅನುದಾನದ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸುತ್ತಿದ್ದಾರೆ ಎಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶ್‌ಗೌಡ ಟೀಕಿಸಿದರು.ಇದರಲ್ಲಿ ಕಾಂಗ್ರೆಸ್ ಸರ್ಕಾರದ ಕೊಡುಗೆ ಇಲ್ಲ. ಅಧಿಕಾರದ ಕೊನೆಯ ದಿನಗಳನ್ನು ಎಣಿಸುತ್ತಿರುವ ಸಿದ್ದರಾಮಯ್ಯನವರು ಅಸ್ತಿತ್ವ ಉಳಿಸಿಕೊಳ್ಳಲು ನಡೆಸುತ್ತಿರುವ ಬೋಗಸ್ ಕಾರ್ಯಕ್ರಮ ಇದು ಎಂದು ಶನಿವಾರ ನಗರದಲ್ಲಿ ಬಿಜೆಪಿ, ಜೆಡಿಎಸ್ ನಾಯಕರ ನೇತೃತ್ವದ ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದರು.ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ತಮಗೂ ಆಹ್ವಾನ ಬಂದಿದೆ. ಸುಮಾರು 1259 ಕೋಟಿ ರು.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳು ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸುವರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ ಇದರಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ನೀಡಿರುವ ಅನುದಾನ ಎಷ್ಟಿದೆ? ದಿವಾಳಿಯಾಗಿ ಜನರ ಟೀಕೆಗೆ ಗುರಿಯಾಗಿರುವ ಕಾಂಗ್ರೆಸ್ ಸರ್ಕಾರವು ಕೇಂದ್ರ ಸರ್ಕಾರ, ಹಿಂದಿನ ಬಿಜೆಪಿ ಸರ್ಕಾರದ ಯೋಜನೆಗಳಿಗೆ ಚಾಲನೆ ನೀಡಿ ತಮ್ಮ ಸಾಧನೆ ಎಂದು ಬಿಂಬಿಸಿಕೊಳ್ಳಲು ಹೊರಟಿದೆ ಎಂದರು.ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ರೈತರ ಜಮೀನು ಕಸಿದುಕೊಂಡು ಅಂತರರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂ ಮಾಡಲು ಹೊರಟಿದ್ದಾರೆ. ಇದರಿಂದ ಕ್ರಿಕೆಟ್ ಅಕಾಡೆಮಿಗಳಿಗೆ ಉಪಯೋಗವಾಗಬಹುದು ಹೊರತು ಸ್ಥಳೀಯ ರೈತರಿಗೆ ಯಾವುದೇ ಪ್ರಯೋಜನವಿಲ್ಲ ಎಂದರು.ಆದರೆ ಕ್ರಿಕೆಟ್ ಸ್ಟೇಡಿಯಂ ಬಗ್ಗೆ ತಮ್ಮ ವಿರೋಧವಿಲ್ಲ. ಹಾಗೇ ತಮ್ಮ ಕ್ಷೇತ್ರದಲ್ಲಿರುವ ತುಮಕೂರು ವಿಶ್ವವಿದ್ಯಾಲಯಕ್ಕೆ ಸಮರ್ಪಕ ರಸ್ತೆ ಇಲ್ಲ, ರಸ್ತೆ ಮಾಡಲು ಹಲವು ಬಾರಿ ಮನವಿ ಮಾಡಿದರೂ ಸರ್ಕಾರ ಗಮನಹರಿಸಿಲ್ಲ. ಎತ್ತಿನಹೊಳೆ ಯೋಜನೆಯಡಿ ಲಭ್ಯವಿರುವ ಕೆರೆಗಳಿಗೆ ನೀರು ಹರಿಸಲು ಸರ್ಕಾರ ಆದ್ಯತೆ ನೀಡಬೇಕಾಗಿತ್ತು. ಬಡವರಿಗೆ ಮನೆಗಳನ್ನು ಕೊಡಬೇಕಾಗಿತ್ತು. ಆದ್ಯತಾ ಕಾರ್ಯಕ್ರಮಗಳನ್ನು ನಿರ್ಲಕ್ಷ ಮಾಡಿರುವ ಸರ್ಕಾರ ಬಿಟ್ಟಿ ಭಾಗ್ಯಗಳ ಮೂಲಕ ಸರ್ಕಾರ ಜನರ ದಿಕ್ಕು ತಪ್ಪಿಸುತ್ತಿದೆ ಎಂದರು.ವಿಪಕ್ಷಗಳ ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡದೆ ತಾರತಮ್ಯ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳ ಕಾರ್ಯಕ್ರಮವನ್ನು ಜಿಲ್ಲೆಯ ಬಿಜೆಪಿ, ಜೆಡಿಎಸ್ ಶಾಸಕರು ತಿರಸ್ಕರಿಸುತ್ತೇವೆ. ಮುಖ್ಯಮಂತ್ರಿಗಳ ವಿರುದ್ಧ ಕ್ಷೇತ್ರದ ಜನರೊಂದಿಗೆ ಸೇರಿ ಪ್ರತಿಭಟನೆ ನಡೆಸುವುದಾಗಿ ಸುರೇಶ್‌ಗೌಡರು ಹೇಳಿದರು.ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿಶಂಕರ್ ಮಾತನಾಡಿ, ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಹಳ್ಳಿಗಳಿಂದ ಜನರನ್ನು ಕರೆತರಲು ಗ್ರಾಮಪಂಚಾಯ್ತಿ ಅಧಿಕಾರಿಗಳಿಗೆ ಹೊಣೆ ಹೊರಿಸಿದ್ದಾರೆ. 750 ಬಸ್‌ಗಳ ಮೂಲಕ ಜನರನ್ನು ಕರೆತರಲು ಅದರ ವೆಚ್ಚವನ್ನು 15ನೇ ಹಣಕಾಸು ಆಯೋಗ ಮತ್ತು ರಾಜ್ಯ ಹಣಕಾಸು ಆಯೋಗದ ಅನುದಾನ ಹೊರತುಪಡಿಸಿ ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಲಭ್ಯವಿರುವ ಸ್ವಂತ ಸಂಪನ್ಮೂಲದಿಂದ ನಿಯಮಾನುಸಾರ ಭರಿಸಲು ಅನುಮೋದನೆ ನೀಡಿದೆ ಎಂದು ಸರ್ಕಾರ ಸುತ್ತೋಲೆ ಹೊರಡಿಸಿದೆ ಎಂದರು.ಗ್ರಾಮಸ್ಥರ ತೆರಿಗೆ ಹಣ ಗ್ರಾಮದ ಅಭಿವೃದ್ಧಿಗೆ ಬಳಕೆಯಾಗಬೇಕು. ಪ್ರಸ್ತುತ ಗ್ರಾಮ ಪಂಚಾಯ್ತಿಗಳು ಆರ್ಥಿಕ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಸರ್ಕಾರದ ಈ ಕ್ರಮ ಮತ್ತಷ್ಟು ಹೊರೆ ಮಾಡಿದೆ ಎಂದು ಹೇಳಿದರು.ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ, ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ಗುಬ್ಬಿ ಬಿಜೆಪಿ ಮುಖಂಡ ದಿಲೀಪ್‌ಕುಮಾರ್, ಜೆಡಿಎಸ್ ಮುಖಂಡ ಗುಬ್ಬಿ ನಾಗರಾಜು, ಜಿಲ್ಲಾ ಬಿಜೆಪಿ ಮಾಧ್ಯಮ ಪ್ರಮುಖ್ ಜೆ.ಜಗದೀಶ್ ಪತ್ರಿಕಾಗೋಷ್ಠಿಯಲ್ಲಿದ್ದರು.