ಸಾರಾಂಶ
ಕನ್ನಡಪ್ರಭ ವಾರ್ತೆ ಧಾರವಾಡ
ಶತಮಾನ ಕಂಡಿರುವ ಕೆಲಗೇರಿ ಕೆರೆಯ ಸ್ವಚ್ಛತೆ ಹಾಗೂ ನಿರ್ವಹಣೆ ವಿಷಯವಾಗಿ ಸರ್ಕಾರದ ಮಟ್ಟದಲ್ಲಿ ಹಲವು ಬಾರಿ ಪ್ರಯತ್ನಗಳಾದರೂ ಯಶಸ್ವಿಯಾಗಿಲ್ಲ. ಕೆರೆಗೆ ಐದಾರು ಕೋಟಿ ವೆಚ್ಚ ಮಾಡಿಯೂ ಏನೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಈ ಕೆರೆಯ ನೀರನ್ನು ಮತ್ತೆ ಕುಡಿಯಲು ಯೋಗ್ಯ ಆಗುವಂತೆ ಮಾಡಲು ಸಾರ್ವಜನಿಕರೇ ಕೆರೆ ಹಿತರಕ್ಷಣಾ ಸಮಿತಿ ಕಟ್ಟಿಕೊಂಡು ಅಭಿಯಾನವೊಂದನ್ನು ಶುರು ಮಾಡಿದ್ದಾರೆ.ಕೆಲಗೇರಿ ಗ್ರಾಮಸ್ಥರು ಸೇರಿದಂತೆ ಪರಿಸರವಾದಿಗಳು, ಕೆರೆ ಬಳಕೆದಾರರು ನಮ್ಮ ಶ್ರಮದಾನ, ಕೆರೆಯ ಸನ್ಮಾನ ಘೋಷಣಾ ವಾಕ್ಯದಲ್ಲಿ ಭಾನುವಾರದಿಂದ ಕೆಲಗೇರಿ ಕೆರೆ ಅಭಿಯಾನ ಸ್ವಚ್ಛತಾ ಅಭಿಯಾನವನ್ನು ನ್ಯಾಯಾಧೀಶ ಪರಶುರಾಮ ದೊಡಮನಿ ನೇತೃತ್ವದಲ್ಲಿ ಶುರು ಮಾಡಿದ್ದಾರೆ.
ಮೊದಲ ದಿನ ಕಲ್ಮೇಶ್ವರ ಗುಡಿಯಿಂದ ಗಣಪತಿ ಗುಡಿ ವರೆಗಿನ ಕಸ ತೆರವುಗೊಳಿಸಲಾಯಿತು. ದೇವರ ಫೋಟೋಗಳು ಮಾತ್ರವಲ್ಲದೇ, ಮನೆ ಕಸ, ಮದ್ಯದ ಬಾಟಲ್‌ಗಳು, ಗುಟಕಾ ಚೀಟುಗಳನ್ನು ತೆರವು ಮಾಡಲಾಯಿತು. ಅತಿ ಬೇಸರ ಎಂದರೆ ಏನೆಲ್ಲ ಎಸೆಯಬಾರದೋ ಅಂತಹ ವಸ್ತುಗಳೂ ಕೆರೆಯಲ್ಲಿ ಸಿಕ್ಕವು. ಕಸ ಎತ್ತುವ ವಸ್ತುಗಳ ಸಹಾಯದಿಂದ ಕಸವನ್ನು ತೆಗೆದು ತೆರವುಗೊಳಿಸಲಾಯಿತು.ಕೆಲಗೇರಿ-ಆಂಜನೇಯ ನಗರದ ಕೊಳಚೆ ನೀರು ಮಾತ್ರವಲ್ಲದೇ ಶ್ರೀನಗರ, ಬನಶಂಕರಿ ನಗರ, ವಿನಾಯಕ ನಗರ ಹಾಗೂ ಮೇಲಿನ ಎಲ್ಲ ಪ್ರದೇಶಗಳ ಕೊಳಚೆ ನೀರು ಕೆರೆ ಗರ್ಭ ಸೇರುತ್ತಿದೆ. ಕೊಳಚೆ ನೀರು ಸೇರದಂತೆ ಕೆರೆ ದಂಡೆಯ ಬಳಿ ದೊಡ್ಡ ಗಟಾರು ಸ್ಥಾಪಿಸಲಾಗಿದೆ. ಸಾಮಾನ್ಯ ಸ್ಥಿತಿಯಲ್ಲಿ ಅದು ಯಶಸ್ವಿಯಾದರೂ ಮಳೆ ಬಂದಾಗ ಎಲ್ಲ ಕೊಳಚೆ ಕೆರೆಯನ್ನೇ ಸೇರುತ್ತಿದೆ. ಹೀಗಾಗಿ ಹಲವು ವರ್ಷಗಳಿಂದ ಸಾಮಾನ್ಯ ಗಟಾರು ಕಸ ಮಾತ್ರವಲ್ಲದೇ ಜಲಕಳೆ ಬೆಳೆದಿದ್ದು ತುಂಬಾ ಸಮಸ್ಯೆಯಾಗಿದೆ.
ಕೆರೆಯಲ್ಲಿ ಶಾಸಕ ಅರವಿಂದ ಬೆಲ್ಲದ ಅವರು ಬೋಟಿಂಗ್ ವ್ಯವಸ್ಥೆ ಮಾಡಿದ್ದಾರೆ. ಆದರೆ, ಬೋಟ್ ಸಂಚರಿಸಲು ಜಾಗವಿಲ್ಲದಂತೆ ಜಲಕಳೆ ಬೆಳೆದಿದ್ದು ಯಾರೊಬ್ಬರೂ ಬೋಟಿಂಗ್ ಪ್ರಯೋಜನ ಪಡೆಯದಂತಾಗಿದೆ. ಇನ್ನು, ಕೃಷಿ ವಿವಿ ವ್ಯಾಪ್ತಿಯಲ್ಲಿರುವ ಈ ಕೆರೆಯನ್ನು ವಿವಿ ಪೂರ್ಣವಾಗಿ ಕೈ ಬಿಟ್ಟಿದ್ದು ತೀವ್ರ ಒತ್ತಡ ಬಂದಾಗ ಮಾತ್ರ ಜೆಸಿಬಿ ಮೂಲಕ ಕಳೆಯನ್ನು ತೆರವುಗೊಳಿಸುತ್ತದೆ. ಇಲ್ಲದೇ ಹೋದಲ್ಲಿ ಸಂಬಂಧವಿಲ್ಲದಂತೆ ಇರುತ್ತದೆ ವಿವಿ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರೇ ಇದೀಗ ಸ್ವಚ್ಛತೆ ಅಭಿಯಾನ ನಡೆಸುತ್ತಿದ್ದಾರೆ.ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ನ್ಯಾಯಾಧೀಶರಾದ ಪರಶುರಾಮ ದೊಡಮನಿ, ಪ್ರತಿ ಭಾನುವಾರದಂತೆ ಹತ್ತು ಭಾನುವಾರ ಈ ಅಭಿಯಾನ ನಡೆಸಲು ಯೋಜಿಸಲಾಗಿದೆ. ಇದಕ್ಕಿಂತ ಹೆಚ್ಚಾಗಿ ಮೊದಲು ಗ್ರಾಮಸ್ಥರು ಈ ಕೆರೆಯ ನೀರನ್ನು ಕುಡಿಯಲು ಬಳಸುತ್ತಿದ್ದರು. ಅದೇ ರೀತಿ ಸ್ವಚ್ಛತಾ ಅಭಿಯಾನದ ಮೂಲಕ ಮತ್ತೆ ಈ ಕೆರೆಯ ನೀರನ್ನು ಕುಡಿಯಲು ಯೋಗ್ಯವಾಗುವಂತೆ ಕೆಲಸ ಮಾಡಬೇಕಿದೆ. ಜತೆಗೆ ಗಟಾರು ನೀರು ಬರದಂತೆ ಎಚ್ಚರ ವಹಿಸಲು ಹೊಸ ಯೋಜನೆ ರೂಪಿಸಬೇಕಿದೆ. ನಾಗರಿಕರು ಜಲಮೂಲಗಳನ್ನು ಸರಿಯಾಗಿ ಬಳಸದ ಹಿನ್ನೆಲೆಯಲ್ಲಿ ಅವಸಾನದ ಅಂಚಿನಲ್ಲಿವೆ ಎಂಬುದಕ್ಕೆ ಕೆಲಗೇರಿ ಕೆರೆಯೇ ಸಾಕ್ಷಿ. ಕೆರೆಯನ್ನು ಬರೀ ಸರ್ಕಾರ ಉಳಿಸಲಿ ಎನ್ನುವುದಕ್ಕಿಂತ ಜನರ ಸಹಕಾರ ಬೇಕು. ನಾಗರಿಕರು ಇನ್ನಾದರೂ ಜವಾಬ್ದಾರಿ ಅರಿತು ಕೆಲಗೇರಿ ಕೆರೆಯನ್ನು ಉಳಿಸಬೇಕು ಎಂದರು.
ಕೆಲಗೇರಿ ಗ್ರಾಮಸ್ಥರು ಹಾಗೂ ಕವಿತಾ ಎಲೆದಳ್ಳಿ, ಶಂಕರ ಕುಂಬಿ, ಪ್ರಕಾಶ ಭಟ್, ಕೆ.ಎಚ್. ನಾಯಕ, ಮಂಜುನಾಥ ಹಿರೇಮಠ, ವಾಲ್ಮಿ ನಿರ್ದೇಶಕ ಡಾ. ರಾಜೇಂದ್ರ ಪೋದ್ದಾರ, ಪಾಲಿಕೆ ಸದಸ್ಯರಾದ ಚಂದ್ರಕಲಾ ಕೊಟಬಾಗಿ, ಶಂಕರ ಕೊಟ್ರಿ, ರಾಜು ಕೊಟಬಾಗಿ ಮತ್ತಿತರರು ಇದ್ದರು.