ಪ್ರವಾಹ ಕುರಿತು ಮುಂಜಾಗ್ರತೆ ವಹಿಸಲು ಸಿಇಒ ಸೂಚನೆ

| Published : May 21 2024, 12:34 AM IST

ಸಾರಾಂಶ

ಮಾರ್ಕಂಡೇಯ ನದಿಯ ಸೇತುವೆ ಪರಿಶೀಲನೆ ಮಾಡಿದ ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಶಿಂಧೆ

ಕನ್ನಡಪ್ರಭ ವಾರ್ತೆ ಬೆಳಗಾವಿಮಾರ್ಕಂಡೇಯ ನದಿಯ ವ್ಯಾಪ್ತಿಯಲ್ಲಿ ಬರುವ ಹಿಂಡಲಗಾ, ಸುಳಗಾ.ಯು, ಉಚಗಾಂವ ಹಾಗೂ ಅಂಬೇವಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಳೆಯಿಂದ ಮುಳಗಡೆಯಾಗುವ ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿ ಅತಿವೃಷ್ಟಿಯಾಗದಂತೆ ಮುಂಜಾಗೃತೆ ವಹಿಸಬೇಕು ಎಂದು ಜಿಲ್ಲಾ ಪಂಚಾಯತಿ ಸಿಇಒ ರಾಹುಲ್ ಶಿಂಧೆ ಸೂಚಿಸಿದರು.

ಹಿಂಡಲಗಾ ಹಾಗೂ ಅಂಬೇವಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮಾರ್ಕಂಡ್ಯೇಯ ನದಿಯ ಸೇತುವೆ ಪರಿಶೀಲನೆ ಮಾಡಿದರು. ಈ ಬಾರಿ ಮಳೆಗಾಲ ಸಮಯದಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುವ ಮುನ್ಸೂಚನೆ ಹವಾಮಾನ ಇಲಾಖೆಯಿಂದ ಬಂದಿರುವುದರಿಂದ ಅಧಿಕಾರಿಗಳು ಅತೀವೃಷ್ಟಿಯಾಗುವಂತಹ ಪ್ರದೇಶಗಳಿಗೆ ಭೇಟಿ ನೀಡಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ನಿರ್ದೇಶನ ನೀಡಿದರು.

ಅತಿವೃಷ್ಟಿಯಿಂದಾಗಿ ಹಾನಿ ಸಂಭವಿಸಬಹುದಾದ ಪ್ರದೇಶಗಳನ್ನು ಮೊದಲೇ ಗುರುತಿಸಿಕೊಳ್ಳುವುದು. ಹಾಗೂ ಕೆಲವು ಜನವಸತಿಗಳ ಸಂಪರ್ಕ ಕಡಿತಗೊಂಡರೆ, ಇನ್ನು ಕೆಲವು ಗ್ರಾಮಗಳು ಸಂಪೂರ್ಣ ಜಲಾವೃತಗೊಳ್ಳುತ್ತವೆ. ಮಳೆ ಜೋರಾಗುವ ಮುನ್ಸೂಚನೆ ಕಂಡರೇ ಈ ರೀತಿ ತೊಂದರೆಗೆ ಸಿಲುಕುವ ಜನರನ್ನು ಸ್ಥಳಾಂತರ ಮಾಡಲು ಪೂರ್ವ ತಯಾರಿ ಮಾಡಿಕೊಳ್ಳಬೇಕು. ಭೂಕುಸಿತ ಮತ್ತು ರಸ್ತೆ ಕುಸಿತವಾಗುವ ಸಂಭವ ಇರುವ ಜಾಗದ ಕಡೆ, ಪ್ರವಾಹ ಎದುರಾಗುವ ಸ್ಥಳ, ನೀರು ತುಂಬಿಕೊಳ್ಳಬಹುದಾದ ಪ್ರದೇಶಗಳನ್ನು ಗುರುತಿಸಿ ಕಾಳಜಿ ಕೇಂದ್ರ ಸ್ಥಾಪನೆ, ಈಜುಗಾರರ ಪಟ್ಟಿ ತಯಾರಿಕೆ ಮತ್ತು ಸ್ವಯಂ ಸೇವಕರ ತಂಡಗಳನ್ನು ರಚನೆ ಮಾಡಿಕೊಳ್ಳುವುದು ಇತ್ಯಾದಿ ಅಗತ್ಯ ಕ್ರಮಗಳನ್ನು ಕೈಗೊಳಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ಗಂಗಾಧರ್ ದಿವಟಕರ್, ಕಾರ್ಯನಿರ್ವಾಹಕ ಅಧಿಕಾರಿ ರಾಮರೆಡ್ಡಿ, ಪಂ.ರಾ.ಇ ಉಪ ವಿಭಾಗ ಎಇಇ ಎಸ್.ಬಿ.ಕೋಳಿಗುಡ್ಡ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಸ್.ಕೆ.ಪಾಟೀಲ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಪ್ರವೀಣ ಮಹೆಂದ್ರಕರ್, ತಾಪಂ. ಸಹಾಯಕ ನಿರ್ದೇಶಕ (ಗ್ರಾ.ಉ) ಬಿ.ಡಿ.ಕಡೇಮನಿ, ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕ (ಪ.ರಾ) ಗಣೇಶ ಕೆ.ಎಸ್. ತಾಲೂಕು ಪಂಚಾಯತಿ ವ್ಯವಸ್ಥಾಪಕ ರಾಜೇಂದ್ರ ಮೊರಬದ ಸೇರಿದಂತೆ ಮುಂತಾದವರು ಇದ್ದರು.