ಬೆಳ್ಳಂಬೆಳಿಗ್ಗೆ ಗ್ರಾಮಗಳಲ್ಲಿ ಹೆಜ್ಜೆ ಹಾಕಿ ಅಲ್ಲಿನ ಸಮಸ್ಯೆಗಳಿಗೆ ಕಿವಿಯಾಗೋದು, ಪಂಚಾಯತ್ ಅಧಿಕಾರಿಗಳ ಕರ್ತವ್ಯ ಕಾರ್ಯವೈಖರಿಯನ್ನು ಪರಿಶೀಲಿಸುವ ಮೂಲಕ ದಾವಣಗೆರೆಯಲ್ಲಿ ಗಮನ ಸೆಳೆದಿರುವ ಜಿಪಂ ಸಿಇಒ ಗಿಟ್ಟೆ ಮಾಧವ ವಿಠಲರಾವ್ ಅವರು ಬೀದರ್‌ಗೆ ವರ್ಗವಾಗಿ ಬಂದ ಮೊದಲ ದಿನದಿಂದಲೇ ಬೀದರ್‌ನಲ್ಲಿ ಬೆಳಗ್ಗೆ ನಡೆ ಗ್ರಾಮಗಳ ಕಡೆ ಆರಂಭಿಸಿ ಅಧಿಕಾರಿ, ಸಿಬ್ಬಂದಿಗಳಲ್ಲಿ ಎಚ್ಚರಿಕೆ ಗಂಟೆ ಬಾರಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೀದರ್
ಬೆಳ್ಳಂಬೆಳಿಗ್ಗೆ ಗ್ರಾಮಗಳಲ್ಲಿ ಹೆಜ್ಜೆ ಹಾಕಿ ಅಲ್ಲಿನ ಸಮಸ್ಯೆಗಳಿಗೆ ಕಿವಿಯಾಗೋದು, ಪಂಚಾಯತ್ ಅಧಿಕಾರಿಗಳ ಕರ್ತವ್ಯ ಕಾರ್ಯವೈಖರಿಯನ್ನು ಪರಿಶೀಲಿಸುವ ಮೂಲಕ ದಾವಣಗೆರೆಯಲ್ಲಿ ಗಮನ ಸೆಳೆದಿರುವ ಜಿಪಂ ಸಿಇಒ ಗಿಟ್ಟೆ ಮಾಧವ ವಿಠಲರಾವ್ ಅವರು ಬೀದರ್‌ಗೆ ವರ್ಗವಾಗಿ ಬಂದ ಮೊದಲ ದಿನದಿಂದಲೇ ಬೀದರ್‌ನಲ್ಲಿ ಬೆಳಗ್ಗೆ ನಡೆ ಗ್ರಾಮಗಳ ಕಡೆ ಆರಂಭಿಸಿ ಅಧಿಕಾರಿ, ಸಿಬ್ಬಂದಿಗಳಲ್ಲಿ ಎಚ್ಚರಿಕೆ ಗಂಟೆ ಬಾರಿಸಿದ್ದಾರೆ.ತಾಲೂಕಿನ ಕಮಠಾಣ, ಬಗದಲ್ ಹಾಗೂ ಚಟ್ನಳ್ಳಿ ಗ್ರಾಮಗಳಿಗೆ ಮಂಗಳವಾರ ಬೆಳಿಗ್ಗೆ 6.30 ಗಂಟೆಯಿಂದಲೇ ಜಿಲ್ಲಾ ಪಂಚಾಯತ್ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿಟ್ಟೆ ಮಾಧವ ವಿಠ್ಠಲರಾವ್ ದಿಢೀರ್ ಭೇಟಿ ನೀಡಿ, ಹಲವು ಕಡೆ ಪರಿಶೀಲನೆ ನಡೆಸಿ ಬಿಸಿ ಮುಟ್ಟಿಸಿದರು.
ಸಿಇಒ ಅವರು ಮೊದಲು ಕಮಠಾಣ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಆಸ್ಪತ್ರೆಯ ಪ್ರತಿಯೊಂದು ಮೂಲೆಗೂ ಹೋಗಿ ಸ್ವಚ್ಛತೆ ಸೇರಿ ಹಲವು ತಪಾಸಣೆ ನಡೆಸಿದರು. ಪ್ರಮುಖವಾಗಿ ರೋಗಿಗಳಿಗೆ ಕೊಡುವ ಮಾತ್ರೆಗಳು ಹಾಗೂ ಔಷಧಗಳ ದಾಸ್ತಾನು ಸರಿಯಾಗಿದೆಯಾ ಎಂದು ಫಾರ್ಮಸಿಯಲ್ಲಿ ಪರಿಶೀಲನೆ ನಡೆಸಿದರು. ಬಳಿಕ ಲ್ಯಾಬೋರೇಟರಿಗೆ ಭೇಟಿ ನೀಡಿ, ಅಲ್ಲಿಯ ತಪಾಸಣಾ ವ್ಯವಸ್ಥೆಯನ್ನು ವೀಕ್ಷಿಸಿದರು.ಅಲ್ಲಿಂದ ನೇರವಾಗಿ ಕಮಠಾಣ ಗ್ರಾಮ ಪಂಚಾಯಿತಿ ಕಚೇರಿಗೆ ತೆರಳಿ ಪರಿಶೀಲನೆ ನಡೆಸಿದರು. ನಂತರ ಸ್ಥಳದಲ್ಲಿದ್ದ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿದರು. ಈ ವೇಳೆ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಜನರು ಅಳಲು ತೋಡಿಕೊಂಡರು. ಇದಕ್ಕೆ ತಕ್ಷಣವೇ ಸ್ಪಂದಿಸಿದ ಸಿಇಒ ಅವರು ಗ್ರಾಮದ ನೀರಿನ ಸಮಸ್ಯೆ ಯನ್ನು ಆದಷ್ಟು ಬೇಗ ಬಗೆಹರಿಸಲಾಗುವುದು, ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಕಮಠಾಣ ಗ್ರಾಮಸ್ಥರಿಗೆ ಧೈರ್ಯ ತುಂಬಿದರು.
ಬಳಿಕ ಬಗದಲ್‌ನಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ, ಶಾಲೆಯ ಅಡುಗೆ ಮನೆಗೆ ತೆರಳಿ ಅಲ್ಲಿ ಬಳಸುವ ತರಕಾರಿ ಹಾಗೂ ದಿನಸಿ ಪದಾರ್ಥಗಳ ಗುಣಮಟ್ಟವನ್ನು ಸೂಕ್ಷ್ಮವಾಗಿ ಪರಿಶೀಲಿಸಿದರು. ನಂತರ ವಿದ್ಯಾರ್ಥಿಗಳ ಸಾಲಿನಲ್ಲೇ ಕುಳಿತು, ಅವರೊಂದಿಗೆ ಮಧ್ಯಾಹ್ನದ ಊಟ ಸವಿದರು. ಊಟ ಹೇಗಿದೆ ಎಂದು ಮಕ್ಕಳ ಬಳಿಯೇ ಕೇಳಿ ತಿಳಿದುಕೊಂಡರು.ಇದೇ ವೇಳೆ ಮಕ್ಕಳ ಜೊತೆ ಸಂವಾದ ನಡೆಸಿದ ಅವರು, ಮುಂದಿನ SSLC ಪರೀಕ್ಷೆಯಲ್ಲಿ ಬಗದಲ್ ಮೊರಾರ್ಜಿ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಬೇಕು. ಪ್ರತಿಯೊಬ್ಬರೂ ಶಿಸ್ತನ್ನು ಅಳವಡಿಸಿಕೊಂಡು ಚೆನ್ನಾಗಿ ಓದಬೇಕು ಎಂದ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ತದನಂತರ ಅಲ್ಲಿನ ಚೆಸ್ ಪಾರ್ಕ್ ಹಾಗೂ ಮ್ಯಾಥ್ಸ್ ಪಾರ್ಕ್ ವೀಕ್ಷಿಸಿದರು.
ಕೊನೆಯದಾಗಿ ಚಟ್ನಳ್ಳಿ ಗ್ರಾಮದ ವಿಬಿಜಿ ಗ್ರಾಮ್ ಜಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಸಿಇಒ ಅವರು, ಕೇವಲ ವೀಕ್ಷಣೆ ಮಾಡದೇ, ಸ್ಥಳದಲ್ಲಿದ್ದ ಕಾರ್ಮಿಕರ ಹಾಜರಾತಿಯನ್ನು ತಾವೇ ಖುದ್ದಾಗಿ ಪಡೆದರು. ಅಷ್ಟೇ ಅಲ್ಲ, ತಾವು ಕೂಡ ಕೆಲಕಾಲ ಕೆಲಸಗಾರರೊಂದಿಗೆ ಕಾಯಕದಲ್ಲಿ ತೊಡಗಿಸಿಕೊಂಡು, ಶ್ರಮದಾನದ ಅನುಭವ ಪಡೆದುಕೊಂಡರು. ನಂತರ ಚಟ್ನಳ್ಳಿ ಗ್ರಾಮ ಪಂಚಾಯತಿ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಜನ ಸಮಸ್ಯೆ ಆಲಿಸಿ ಪರಿಹಾರದ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಸಂಯೋಜಕರು, ತಾಂತ್ರಿಕ ಸಹಾಯಕರು ಹಾಗೂ ಇತರೆ ಸಂಬಂಧಪಟ್ಟ ಅಧಿಕಾರಿ ಸಿಬ್ಬಂದಿ ಇದ್ದರು.