ಜಿಲ್ಲೆಯ ವಿವಿಧ ಗ್ರಾಪಂಗಳಿಗೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕಾಂದೂ ಅವರು ದಿಢೀರ್ ಭೇಟಿ ನೀಡಿ, ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಿದರು. ಮೊದಲು ಜಿಲ್ಲೆ ಮಾನ್ವಿ ತಾಲೂಕಿನ ಕುರ್ಡಿ ಗ್ರಾಪಂ ವ್ಯಾಪ್ತಿಯ ಕುರುಡಿ ಗ್ರಾಮಕ್ಕೆ ಭೇಟಿ ನೀಡಿ, ವಿಬಿ ಜಿ ರಾಮ್ ಜಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಯನ್ನು ಪರಿಶೀಲಿಸಿದರು.
ಕನ್ನಡಪ್ರಭ ವಾರ್ತೆ ರಾಯಚೂರು
ಜಿಲ್ಲೆಯ ವಿವಿಧ ಗ್ರಾಪಂಗಳಿಗೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕಾಂದೂ ಅವರು ದಿಢೀರ್ ಭೇಟಿ ನೀಡಿ, ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಿದರು. ಮೊದಲು ಜಿಲ್ಲೆ ಮಾನ್ವಿ ತಾಲೂಕಿನ ಕುರ್ಡಿ ಗ್ರಾಪಂ ವ್ಯಾಪ್ತಿಯ ಕುರುಡಿ ಗ್ರಾಮಕ್ಕೆ ಭೇಟಿ ನೀಡಿ, ವಿಬಿ ಜಿ ರಾಮ್ ಜಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಯನ್ನು ಪರಿಶೀಲಿಸಿದರು.ಎನ್ಎಂಆರ್ ಮೂಲಕ ಕೂಲಿ ಕಾರ್ಮಿಕರ ಹಾಜರಾತಿ ಹಾಗೂ ಕೆಲಸದ ಮಾಹಿತಿಯನ್ನು ಪಡೆದು, ಎನ್ಎಂಎಂಎಸ್ ಆನ್ಲೈನ್ ಹಾಜರಾತಿಯನ್ನು ಪರಿಶೀಲಿಸಿದರು. ಈ ವೇಳೆ ಕೂಲಿ ಕಾರ್ಮಿಕರೊಂದಿಗೆ ಸಂವಾದ ನಡೆಸಿ, ಅವರ ಸಮಸ್ಯೆಗಳನ್ನು ಆಲಿಸಿದರು.
ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ನಿರಂತರವಾಗಿ ಉದ್ಯೋಗ ಒದಗಿಸುವಂತೆ ಕಾರ್ಮಿಕರು ಮನವಿ ಮಾಡಿದರು. ಅಲ್ಲದೆ, 125 ದಿನಗಳಿಗಿಂತ ಹೆಚ್ಚುವರಿಯಾಗಿ ಇನ್ನೂ 50 ದಿನಗಳ ಕೂಲಿ ಕೆಲಸ ಒದಗಿಸುವಂತೆ ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ ಅವರು, ಕಾರ್ಮಿಕರ ಮನವಿಯಂತೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದರು.ನಂತರ ಆರೋಲಿ ಗ್ರಾಪಂ ವ್ಯಾಪ್ತಿಯ ಸರ್ಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಹಾಜರಾತಿಯನ್ನು ಪರಿಶೀಲಿಸಿದರು. ನಿರಂತರ ಶಿಕ್ಷಣದ ಹಾಜರಾತಿ ಕುರಿತು ಮಾಹಿತಿ ಪಡೆದು, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ವಿದ್ಯಾರ್ಥಿಗಳಿಗೆ ಬಟ್ಟೆ, ಪುಸ್ತಕ ಸೇರಿದಂತೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳು ಸಮರ್ಪಕವಾಗಿ ವಿತರಿಸಲಾಗಿದೆಯೇ ಎಂಬುದನ್ನು ವಿಚಾರಿಸಿದರು.
ಶಾಲೆಯ ಬಿಸಿಯೂಟದ ಕೋಣೆಯನ್ನು ಪರಿಶೀಲಿಸಿದ ಅವರು, ನೂತನ ಅಡುಗೆ ಕೋಣೆಯನ್ನು ಸಮರ್ಪಕವಾಗಿ ಬಳಸುವಂತೆ ಸೂಚಿಸಿದರು. ವಿದ್ಯಾರ್ಥಿಗಳಿಗೆ ನೀಡಲಾಗುವ ಬಿಸಿಯೂಟವನ್ನು ಪರಿಶೀಲಿಸಿ, ಸ್ವತಃ ಊಟ ಸವಿದು ಗುಣಮಟ್ಟವನ್ನು ಪರಿಶೀಲಿಸಿದರು.ಶಾಲೆಯಲ್ಲಿ ನಡೆಯುತ್ತಿರುವ ಕೆಜಿಎಂ ಕಾಮಗಾರಿಗಳನ್ನು ವಾರದಲ್ಲಿ ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸದಿದ್ದಲ್ಲಿ ಸಂಬಂಧಪಟ್ಟ ಗುತ್ತಿಗೆದಾರರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಳಿಕ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಅವರು, ಮಕ್ಕಳ ಹಾಜರಾತಿ, ದಾಸ್ತಾನು ಹಾಗೂ ಮಕ್ಕಳಿಗೆ ಒದಗಿಸಲಾಗುತ್ತಿರುವ ಆಹಾರ ಮತ್ತು ಇತರೆ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿ ಮಾಹಿತಿ ಪಡೆದರು.ನಂತರ ಮಾನ್ವಿ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ನಿರ್ವಹಿಸಲಾಗುತ್ತಿರುವ ಡಾ.ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿ, ಮೆನು ಚಾರ್ಟ್ ಪ್ರಕಾರ ವಿದ್ಯಾರ್ಥಿನಿಯರಿಗೆ ಊಟ ನೀಡಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಿದರು. ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿ, ಊಟದ ಗುಣಮಟ್ಟ ಹಾಗೂ ವಸತಿ ನಿಲಯದಲ್ಲಿನ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು. ದಾಸ್ತಾನು ಕೊಠಡಿಯನ್ನು ಪರಿಶೀಲಿಸಿ, ವಿದ್ಯಾರ್ಥಿನಿಯರಿಗೆ ನೀಡಲಾಗುತ್ತಿದ್ದ ಊಟವನ್ನು ಸ್ವತಃ ಸವಿದು ಗುಣಮಟ್ಟವನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ವಿವಿಧ ತಾಲೂಕುಗಳ ಇಒ, ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಒ, ಸಿಬ್ಬಂದಿ ಸೇರಿ ಅನೇಕರು ಇದ್ದರು.ಮಾನ್ವಿ ಅಕ್ಕ ಕೆಫೆಯಲ್ಲಿ ಊಟ ಮಾಡಿದ ಸಿಇಒ: ಮಾನ್ವಿ ಪಟ್ಟಣದ ಹಳೆಯ ಪಂಚಾಯ್ತಿ ಕಟ್ಟಡದಲ್ಲಿ ನಿರ್ಮಿಸಲಾಗಿರುವ ಅಕ್ಕ ಕೆಫೆಗೆ ಸಿಇಒ ಈಶ್ವರ್ ಕಾಂದೂ ಅವರು ಭೇಟಿ ನೀಡಿರು, ಅಕ್ಕ ಕೆಫೆಯ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸುವಂತೆ ಹಾಗೂ ಪ್ರಚಾರ ಕಾರ್ಯವನ್ನು ಕೈಗೊಳ್ಳುವಂತೆ ಸೂಚಿಸಿದರು. ಬಳಿಕ ಅಕ್ಕ ಕೆಫೆಯಲ್ಲಿ ಊಟ ಮಾಡಿದರು.