ಆಯಿಷ್‌ ಪದವೀಧರರಿಗೆ ವಿಶ್ವದೆಲ್ಲೆಡೆ ವಿಫುಲ ಅವಕಾಶ

| Published : Dec 21 2024, 01:19 AM IST

ಸಾರಾಂಶ

, ಯಾವುದೇ ಕ್ಷೇತ್ರದಲ್ಲಿ ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸುವವರಿಗೆ ಅವಕಾಶಗಳು ಹೆಚ್ಚಿರುತ್ತವೆ.

ಕನ್ನಡಪ್ರಭ ವಾರ್ತೆ ಮೈಸೂರು

ಆಯಿಷ್‌ ಪದವೀಧರರಿಗೆ ವಿಶ್ವದ ವಿವಿಧ ಸಂಸ್ಥೆಗಳಲ್ಲಿ ವಿಫುಲ ಅವಕಾಶಗಳಿವೆ ಎಂದು ಮಂಗಳೂರಿನ ನಿಟ್ಟೆ ವಾಕ್‌ ಮತ್ತು ಶ್ರವಣ ಸಂಸ್ಥೆಯ ಪ್ರಾಧ್ಯಾಪಕಿ ಡಾ. ಜಯಶ್ರೀ ಎಸ್. ಭಟ್ ತಿಳಿಸಿದರು. ನಗರದ ಅಖಿಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆಯಲ್ಲಿ (ಆಯಿಷ್) ಶುಕ್ರವಾರ ನಡೆದ ಪದವಿ ದಿನಾಚರಣೆಯಲ್ಲಿ ನೂತನ ಪದವೀಧರರಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದ ಅವರು, ಆಯಿಷ್ ನಲ್ಲಿ ಕಲಿತ ಜ್ಞಾನ, ಕೌಶಲ ನಿಮ್ಮ ಜೀವನದ ಉದ್ದಕ್ಕೂ ಉಪಯೋಗಕ್ಕೆ ಬರಲಿದೆ. ಆಡಿಯೋಲಜಿ, ಪ್ಯಾಥಾಲಜಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಇಂದು ಸಾಕಷ್ಟು ಅವಕಾಶಗಳು ಇವೆ ಎಂದರು. ಯಾವ ಕ್ಷೇತ್ರವನ್ನೇ ಆಯ್ದುಕೊಳ್ಳಿ. ಅದರಲ್ಲಿ ಕಠಿಣ ಪರಿಶ್ರಮ ಪಡಿ, ಶ್ರೇಷ್ಠತೆ ಸಾಧಿಸಿ.‌ ಜೀವನದಲ್ಲಿ ಕಲಿಕೆ ಎಂಬುದು ನಿರಂತರ. ಕಷ್ಟ ಬಂದಾಗ ಧೈರ್ಯದಿಂದ ಎದುರಿಸಿ. ‌ಪ್ರತಿ ಸಂಗತಿಯೂ ಒಳಿತೇ ಆಗುತ್ತಿದೆ ಎಂದು ಭಾವಿಸಿ ಎಂದು ಅವರು ಕಿವಿಮಾತು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಬೆಂಗಳೂರು ವಿವಿ ಕುಲಪತಿ ಪ್ರೊ.ಎಸ್.ಎಂ. ಜಯಕರ ಮಾತನಾಡಿ, ಯಾವುದೇ ಕ್ಷೇತ್ರದಲ್ಲಿ ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸುವವರಿಗೆ ಅವಕಾಶಗಳು ಹೆಚ್ಚಿರುತ್ತವೆ. ಸಮಾಜ ಹಾಗೂ ಜನರ ಒಳಿತಿಗೆ ನೂತನ ಪದವೀಧರರು ಶ್ರಮಿಸಬೇಕು ಎಂದು ಸಲಹೆ ನೀಡಿದರು.

174 ಮಂದಿಗೆ ಪದವಿ ಪ್ರದಾನ:

ಬಿ.ಎ. ಎಸ್‌ಎಲ್‌ ಪಿ ವಿಭಾಗದಲ್ಲಿ 63, ಆಡಿಯೊಲಜಿ ಸ್ನಾತಕೋತ್ತರ ವಿಭಾಗದಲ್ಲಿ 44, ಸ್ಪೀಚ್‌ ಲಾಂಗ್ವೇಜ್‌ ಪ್ಯಾಥೊಲಜಿ ಸ್ನಾತಕೋತ್ತರ ವಿಭಾಗದಲ್ಲಿ 43, 5 ಪಿಎಚ್‌ ಡಿ ಹಾಗೂ ಬಿಇಡಿ ವಿಶೇಷ ಶಿಕ್ಷಣ ವಿಭಾಗದಲ್ಲಿ 19 ಸೇರಿದಂತೆ ಒಟ್ಟು 174 ಮಂದಿಗೆ ಪದವಿ ಪ್ರದಾನ ಮಾಡಲಾಯಿತು. ಉತ್ತಮ ಸಾಧಕರಿಗೆ ಚಿನ್ನದ ಪದಕ, ಪುರಸ್ಕಾರ ನೀಡಲಾಯಿತು. ಆಯಿಷ್‌ ನಿರ್ದೇಶಕಿ ಡಾ.ಎಂ. ಪುಷ್ಪಾವತಿ ಅಧ್ಯಕ್ಷತೆ ವಹಿಸಿದ್ದರು.

-----------------