ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಇತ್ತೀಚಿನ ದಿನಗಳಲ್ಲಿ ಗರ್ಭಕಂಠದ ಕ್ಯಾನ್ಸರ್ ಹೆಚ್ಚಾಗಿ ಕಂಡುಬರುತ್ತಿರುವ ಕಾರಣ ಈ ಬಗ್ಗೆ ಎಚ್ಚರ ವಹಿಸುವುದು ಅಗತ್ಯ ಎಂದು ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸ್ತ್ರೀರೋಗ ವಿಭಾಗದ ಪ್ರಾಧ್ಯಾಪಕ ಡಾ.ಮನೋಹರ್ ಸಲಹೆ ನೀಡಿದರು.ಸಮರ್ಥನಾ ಮಹಿಳಾ ವೇದಿಕೆಯಿಂದ ಸಂಸ್ಥೆಯ ಆವರಣದಲ್ಲಿ ಏರ್ಪಡಿಸಿದ್ದ ಮಹಿಳೆಯರ ಆರೋಗ್ಯ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿ, ಗರ್ಭಕಂಠ ಕ್ಯಾನ್ಸರ್ ಬಗ್ಗೆ ಎಲ್ಲರಿಗೂ ಜಾಗೃತಿ ಮೂಡಿಸುವುದು ಅಗತ್ಯವಿದೆ. ಮಹಿಳೆಯರು ಆಗಾಗ್ಗೆ ವೈದ್ಯಕೀಯ ತಪಾಸಣೆ ಮಾಡಿಸಿಕೊಂಡಲ್ಲಿ ಇಂತಹ ಕ್ಯಾನ್ಸರ್ ರೋಗ ಬರುವುದನ್ನು ತಡೆಯಲು ಸಾಧ್ಯ ಎಂದರು.
ಸಾಮಾನ್ಯವಾಗಿ ಋತುಚಕ್ರ ೪೦ ವರ್ಷ ಮೇಲ್ಪಟ್ಟವರಲ್ಲಿ ವ್ಯತ್ಯಾಸವಾಗುತ್ತದೆ. ಇಂತಹ ಮಹಿಳೆಯರಲ್ಲಿ ಬಿಳಿಮುಟ್ಟು ಹೆಚ್ಚಾಗಿ ಹೋಗುತ್ತಿದ್ದರೆ ತಕ್ಷಣ ಸ್ತ್ರೀ ರೋಗತಜ್ಞರನ್ನು ಭೇಟಿ ಮಾಡಿ ಸಲಹೆ ಮತ್ತು ಚಿಕಿತ್ಸೆ ಪಡೆದುಕೊಳ್ಳುವುದು ಅಗತ್ಯ. ಕೆಲವರಿಗೆ ಬಿಳಿ ಮುಟ್ಟು ಹೋಗುತ್ತಿದ್ದರೆ ತಾತ್ಸಾರ ಮಾಡುತ್ತಾರೆ. ಮತ್ತೆ ಕೆಲವರಲ್ಲಿ ವಾಸನೆ, ತುರಿಕೆ ಇರುತ್ತದೆ. ಅಂತಹ ಸಂದರ್ಭದಲ್ಲಿ ಸೋಂಕು ಕಂಡುಬಂದಿರುವ ಸಾಧ್ಯತೆಗಳಿರುತ್ತದೆ. ಆದ್ದರಿಂದ ನಿರ್ಲಕ್ಷ್ಯ ಮಾಡದೆ ತಜ್ಞ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯುವಂತೆ ಸೂಚಿಸಿದರು.ಸಾಮಾನ್ಯವಾಗಿ ಮಹಿಳೆಯರಲ್ಲಿ ೪೦ ರಿಂದ ೫೩ ವರ್ಷದೊಳಗೆ ಮುಟ್ಟು ನಿಲ್ಲುವ ಸಾಧ್ಯತೆಗಳಿರುತ್ತವೆ. ಇಂತಹ ಸಂದರ್ಭದಲ್ಲಿ ದೇಹದಲ್ಲಿ ಸಾಕಷ್ಟು ಬದವಣೆಗಳಾಗುವ ಸಾಧ್ಯತೆಗಳೂ ಇವೆ. ತಲೆಯಿಂದ ಕಾಲಿನವರೆಗೂ ವ್ಯತ್ಯಾಸಗಳಾಗುತ್ತವೆ. ಕೂದಲು ಉದುರುವಿಕೆ, ಚರ್ಮದಲ್ಲಿ ಬದಲಾವಣೆ, ಕಣ್ಣಿನಲ್ಲಿ ದೋಷ ಸೇರಿದಂತೆ ಹಲವು ಸಮಸ್ಯೆಗಳು ಕಂಡುಬರುತ್ತವೆ. ಇಂತಹ ಲಕ್ಷಣಗಳು ಕಂಡುಬಂದಲ್ಲಿ ಹಿಂಜರಿಕೆ ಬಿಟ್ಟು ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಅತ್ಯಾವಶ್ಯಕ ಎಂದು ಸಲಹೆ ನೀಡಿದರು.
ಕೆಲವರಲ್ಲಿ ಆಯಾಸ, ಮೈಕೈ ನೋವು, ಜೀರ್ಣ ಸರಿಯಾಗಿ ಆಗದಿರುವುದು, ಗ್ಯಾಸ್ಟ್ರಿಕ್, ಎದೆನೋವು, ಪದೇ ಪದೇ ಮೂತ್ರ ವಿಸರ್ಜನೆ, ಉರಿ. ತಲೆಯಲ್ಲಿ ಒಂದು ರೀತಿಯ ಚರ್ಮ ಒಣಗುವುದು ಇನ್ನೂ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಈ ಬಗ್ಗೆ ಎಚ್ಚರ ವಹಿಸುವಂತೆ ಕಿವಿಮಾತು ಹೇಳಿದರು.ಋತುಚಕ್ರ ನಿಂತುಹೋಗಿರುವ ಮಹಿಳೆಯರು ಕಡ್ಡಾಯವಾಗಿ ಮೂರು ವರ್ಷಕ್ಕೊಮ್ಮೆ ಈ ಬಗ್ಗೆ ತಪಾಸಣೆ ಮಾಡಿಸಿಕೊಳ್ಳಬೇಕು. ನಿರ್ಲಕ್ಷ್ಯ ಮಾಡಿದರೆ ದೊಡ್ಡ ಮಟ್ಟದ ರೋಗಗಳಿಗೆ ತುತ್ತಾಗುವ ಅಪಾಯವಿದೆ ಎಂದು ಎಚ್ಚರಿಕೆ ನೀಡಿದರು.
ಸಮರ್ಥನ ಮಹಿಳಾ ವೇದಿಕೆ ಅಧ್ಯಕ್ಷೆ ನಾಗರೇವಕ್ಕ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಶ್ರೀದೇವಿ, ಡಾ.ಎಂ.ಎಸ್.ಅನಿತಾ, ಭಾರತಿ ಹಾಗೂ ಇತರರಿದ್ದರು.