18, 19ರಂದು ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಸಿಇಟಿ

| Published : Apr 17 2024, 01:17 AM IST

ಸಾರಾಂಶ

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ 2024ನೇ ಸಾಲಿನ ಎಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶು ಸಂಗೋಪನಾ, ಫಾರ್ಮಸಿ, ಬಿ.ಎಸ್ಸಿ ನರ್ಸಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಏ.18, 19ರಂದು ಸಿಇಟಿ ಪರೀಕ್ಷೆ ನಡೆಯಲಿದೆ. ನಗರದ 23 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಅಪರ ಜಿಲ್ಲಾಧಿಕಾರಿ ಸೈಯ್ಯದ್ ಆಫ್ರೀನ್ ಭಾನು ಎಸ್. ಬಳ್ಳಾರಿ ದಾವಣಗೆರೆಯ್ಲಲ್ಲಿ ಹೇಳಿದ್ದಾರೆ.

- ಸಿದ್ಧತಾ ಸಭೆಯಲ್ಲಿ ಅಪರ ಡಿಸಿ ಮಾಹಿತಿ । ದಾವಣಗೆರೆ ನಗರ 23 ಕೇಂದ್ರಗಳಲ್ಲಿ 12289 ವಿದ್ಯಾರ್ಥಿಗಳು

- - -

ಕನ್ನಡಪ್ರಭ ವಾರ್ತೆ, ದಾವಣಗೆರೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ 2024ನೇ ಸಾಲಿನ ಎಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶು ಸಂಗೋಪನಾ, ಫಾರ್ಮಸಿ, ಬಿ.ಎಸ್ಸಿ ನರ್ಸಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಏ.18, 19ರಂದು ಸಿಇಟಿ ಪರೀಕ್ಷೆ ನಡೆಯಲಿದೆ. ನಗರದ 23 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಅಪರ ಜಿಲ್ಲಾಧಿಕಾರಿ ಸೈಯ್ಯದ್ ಆಫ್ರೀನ್ ಭಾನು ಎಸ್. ಬಳ್ಳಾರಿ ಹೇಳಿದರು.

ಡಿಸಿ ಕಚೇರಿ ತುಂಗಭದ್ರಾ ಸಭಾಂಗಣದಲ್ಲಿ ಮಂಗಳವಾರ ಪರೀಕ್ಷಾ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಏ.18ರಂದು ಬೆಳಗ್ಗೆ 10.30 ರಿಂದ 11.50 ರವರೆಗೆ 60 ಅಂಕಗಳಿಗೆ ಜೀವಶಾಸ್ತ್ರ, ಮಧ್ಯಾಹ್ನ 2.30 ರಿಂದ 3.50 ರವರೆಗೆ 60 ಅಂಕಗಳಿಗೆ ಗಣಿತ ಪರೀಕ್ಷೆ ನಡೆಯಲಿದೆ. ಏ.19ರಂದು ಬೆಳಗ್ಗೆ 10.30 ರಿಂದ 11.50ರ ವರೆಗೆ 60 ಅಂಕಗಳಿಗೆ ಭೌತಶಾಸ್ತ್ರ, ಮಧ್ಯಾಹ್ನ 2.30 ರಿಂದ 3.50 ರ ವರೆಗೆ 60 ಅಂಕಗಳಿಗೆ ರಸಾಯನಶಾಸ್ತ್ರ ವಿಷಯದ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಕೇಂದ್ರಗಳ ವಿವರ:

ದಾವಣಗೆರೆ ನಗರದ 23 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಡಿಆರ್‌ಎಂ ಸೈನ್ಸ್ ಪಿಯು ಕಾಲೇಜು, ಎವಿಕೆ ಬಾಲಕಿಯರ ಪದವಿ ಪೂರ್ವ ಕಾಲೇಜು, ಮೋತಿ ವೀರಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜು, ಸರ್ಕಾರಿ ಎಕ್ಸ್ ಮುನ್ಸಿಪಲ್ ಪಿಯು ಕಾಲೇಜು, ಎಆರ್‌ಜಿ ಪಿ.ಯು ಕಲಾ ಮತ್ತು ವಾಣಿಜ್ಯ, ರಾಜಮ್ಮ ಸೀತಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಶ್ರೀ ತರಳಬಾಳು ಜಗದ್ಗುರು ಸಂಯುಕ್ತ ಪದವಿ ಪೂರ್ವ ಕಾಲೇಜು, ವಿಶ್ವಚೇತನ ಪಿಯು ಕಾಲೇಜು, ಅಥಣಿ ಸಂಯುಕ್ತ ಪದವಿ ಪೂರ್ವ ಕಾಲೇಜು, ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಪಿಯು ಸೈನ್ಸ್ ಕಾಲೇಜು, ಸೆಂಟ್ ಜಾನ್ ಪಿಯು ಕಾಲೇಜು, ಶ್ರೀ ಸಿದ್ದಗಂಗಾ ಪಿಯು ಕಾಲೇಜು, ರಾಘವೇಂದ್ರ ಹೈಟೆಕ್ ಪಿಯು ಕಾಲೇಜು, ಟಿಎಂಸಿ ಮತ್ತು ಟಿಎಂ ಮೆಮೋ ಪಿಯು ಕಾಲೇಜು, ಸೆಂಟ್ ಪಾಲ್ಸ್ ಪಿಯು ಕಾಲೇಜು, ಚಾಣಕ್ಯ ಪಿಯು ಕಾಲೇಜು, ಲಲಿತಾ ಪಿಯು ಕಾಲೇಜು, ಸರ್‌ಎಂವಿ ಸಂಯುಕ್ತ ಪದವಿ ಪೂರ್ವ ಕಾಲೇಜು, ಆನಂದ್ ಪಿಯು ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಎಸ್‌ಬಿಸಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ದಾವಣಗೆರೆ ಇಲ್ಲಿ ಸಿಇಟಿ ಪರೀಕ್ಷೆ ನಡೆಯಲಿದೆ. ಮೂಲಸೌಕರ್ಯಕ್ಕೆ ಸೂಚನೆ:

ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಕುಡಿಯುವ ನೀರು, ಆಸನ, ಗಾಳಿ, ಬೆಳಕು ವ್ಯವಸ್ಥೆ ಸಮರ್ಪಕ ಇರಬೇಕು. ಕಪ್ಪು ಮತ್ತು ನೀಲಿ ಬಾಲ್‌ಪೆನ್ ಮಾತ್ರ ಉಪಯೋಗಿಸಬೇಕು. ಬ್ಲೇಡ್, ವೈಟ್ನರ್, ಎಲೆಕ್ಟ್ರಾನಿಕ್‌ ವಸ್ತುಗಳ ತರುವಂತಿಲ್ಲ. ಪೂರ್ಣ ತೋಳಿನ ಶರ್ಟ್ ಹಾಕದೆ ಸ್ಲ್ಯಾಗ್‌ ಧರಿಸಬೇಕು. ಅವ್ಯವಹಾರಗಳಿಗೆ ಅವಕಾಶ ಇಲ್ಲದಂತೆ ಪರೀಕ್ಷೆ ನಡೆಸುವುದು ಪ್ರಾಂಶುಪಾಲರ ಜವಾಬ್ದಾರಿ. ಉಪಮುಖ್ಯ ಅಧೀಕ್ಷಕರು ಪರೀಕ್ಷೆ ಪಾರದರ್ಶಕ, ಪರಿಣಾಮಕಾರಿಯಾಗಿ ನಡೆಸಿಕೊಡಬೇಕು. ಪ್ರತಿ ಕೇಂದ್ರದಲ್ಲಿ ಹಿರಿಯ ಉಪನ್ಯಾಸಕರನ್ನು ಹಾಗೂ ಹಿರಿಯ ಅಧಿಕಾರಿಗಳನ್ನು ಜಾಗೃತ ದಳ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗುತ್ತದೆ ಎಂದರು.

ನಿಷೇಧಾಜ್ಞೆ:

ಸಿಇಟಿ ಪರೀಕ್ಷೆ ನಡೆಯುವ ಎಲ್ಲ ಕೇಂದ್ರಗಳ ಸುತ್ತಮುತ್ತ 144 ಸೆಕ್ಷನ್ ಜಾರಿ ಮೂಲಕ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಕೇಂದ್ರಗಳ ಸುತ್ತಮುತ್ತ ಇಂಟರ್‌ನೆಟ್ ಸೆಂಟರ್, ಜೆರಾಕ್ಸ್ ಕೇಂದ್ರಗಳನ್ನು ಪರೀಕ್ಷೆ ನಡೆಯುವ ದಿನದಂದು ಮುಚ್ಚಲು ಆದೇಶಿಸಲಾಗಿದೆ ಎಂದರು.

ಸಭೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಉಪನಿರ್ದೇಶಕ ಕರಿಸಿದ್ದಪ್ಪ ಹಾಗೂ ವಿವಿಧ ಕಾಲೇಜಿನ ಪ್ರಾಂಶುಪಾಲರು ಉಪಸ್ಥಿತರಿದ್ದರು. - - - -16ಕೆಡಿವಿಜಿ38ಃ:

ದಾವಣಗೆರೆಯಲ್ಲಿ ಅಪರ ಜಿಲ್ಲಾಧಿಕಾರಿ ಸೈಯ್ಯದ್ ಆಫ್ರೀನ್ ಭಾನು ಎಸ್.ಬಳ್ಳಾರಿ ಅಧ್ಯಕ್ಷತೆಯಲ್ಲಿ ಪರೀಕ್ಷಾ ಪೂರ್ವಭಾವಿ ಸಿದ್ದತಾ ಸಭೆ ನಡೆಯಿತು.