ಸಾರಾಂಶ
ಹಾವೇರಿ: ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪಡೆಯಲು ನಡೆಸುವ ಸಿಇಟಿ ಮತ್ತು ನೀಟ್ ಪರೀಕ್ಷೆಗಳನ್ನ ಎದುರಿಸಿ ಯಶಸ್ಸು ಪಡೆಯಲು ಜಿಲ್ಲೆಯ ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತಿದೆ. ಸಿಇಟಿ ಪರೀಕ್ಷೆಗಳ ಬಗ್ಗೆ ಅವರಿಗಿರುವ ಭಯ ಹೋಗಲಾಡಿಸಿ ಆತ್ಮವಿಶ್ವಾಸವನ್ನ ತುಂಬುವುದಕ್ಕಾಗಿ ಜಿಲ್ಲೆಯ ವಿಜ್ಞಾನ ವಿದ್ಯಾರ್ಥಿಗಳಿಗೆ ಅಣಕು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ ಹೇಳಿದರು.ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಪಂಚಾಯತಿ ಹಾವೇರಿ, ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆ, ಹಾವೇರಿ ಮತ್ತು ಬಾಲಕಿಯರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಹಾವೇರಿ ಜಿಲ್ಲೆಯ ಸರ್ಕಾರಿ ಮತ್ತು ಅನುದಾನಿತ ಪದವಿ ಪೂರ್ವ ಕಾಲೇಜುಗಳ ವಿಜ್ಞಾನ ವಿದ್ಯಾರ್ಥಿಗಳಿಗೆ ನಡೆದ ಅಣಕು ಸಿಇಟಿ ಪರೀಕ್ಷೆಯ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ಯಾವುದೇ ಕಾರ್ಯಕ್ಕೂ ಉತ್ತಮ ಆರಂಭವಾದರೆ ಅರ್ಧ ಕೆಲಸ ಮುಗಿದಂತೆ. ಅದರಿಂದ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ತೆಗೆದುಕೊಳ್ಳುವಂತೆ ಉತ್ತೇಜಿಸಲು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಈಗಾಗಲೇ ಒಂದು ಅಣಕು ಸಿಇಟಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ್ದೇವೆ. ಮುಂದಿನ ದಿನಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಈ ಪರೀಕ್ಷೆಗಳಲ್ಲಿ ಮತ್ತಷ್ಟು ಸುಧಾರಣೆಯನ್ನು ತರಲಾಗುವುದು ಎಂದರು.ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ. ಉಮೇಶಪ್ಪ ಎಚ್., ಮಾತನಾಡಿ, ಸಿಇಓ ರವರ ನಿರ್ದೇಶನದಂತೆ ಅಣಕು ಸಿಇಟಿ ಪರೀಕ್ಷೆಗಳನ್ನ ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಸಲಾಗುತ್ತಿದೆ. ಇದರಿಂದ ಈ ಪರೀಕ್ಷೆಗಳನ್ನು ಧೈರ್ಯದಿಂದ ಎದುರಿಸಲು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದಂತಾಗುತ್ತಿದೆ. ವಿಶೇಷವಾಗಿ ಆರ್ಥಿಕವಾಗಿ ದುರ್ಬಲಗೊಂಡಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳು ಇದರ ಸಂಪೂರ್ಣ ಲಾಭ ಪಡೆಯಬೇಕು. ಆ ಮೂಲಕ ಮುಂಬರುವ ಸಿಇಟಿ ಪರೀಕ್ಷೆಗಳಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉತ್ತಮ ಶ್ರೇಣಿ ಪಡೆಯಬೇಕು ಎಂದು ಕಿವಿಮಾತು ಹೇಳಿದರು.ಸಾಂಸ್ಕೃತಿಕ ಕಾರ್ಯದರ್ಶಿ ಶೇಖರ ಭಜಂತ್ರಿ ಪ್ರಾಸ್ತಾವಿಕ ಮಾತನಾಡಿ, ಅಕ್ಷಯ ಶ್ರೀಧರ ಮತ್ತು ಉಮೇಶಪ್ಪ ರವರಂತಹ ಹಿರಿಯ ಅಧಿಕಾರಿಗಳ ಇಚ್ಛಾಶಕ್ತಿ ಮತ್ತು ವಿದ್ಯಾರ್ಥಿಗಳ ಮೇಲಿನ ಪ್ರೀತಿಯ ಫಲವಾಗಿ ಅಣಕು ಸಿಇಟಿ ಪರೀಕ್ಷೆಗಳನ್ನು ನಡೆಸುವ ಮೂಲಕ ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ತುಂಬಿ ಪರೀಕ್ಷೆಗಳಿಗೆ ಸಜ್ಜುಗೊಳಿಸುತ್ತಿರುವುದು ಒಂದು ಕ್ರಾಂತಿಕಾರಕ ಹೆಜ್ಜೆಯಾಗಿದೆ. ಈ ಪ್ರಯತ್ನದ ಉದ್ದೇಶವೂ ಕೂಡ ಸಿಇಟಿ ಕುರಿತು ಪೂರ್ಣ ಮಾಹಿತಿಯನ್ನು ಮಕ್ಕಳಿಗೆ ನೀಡಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಭಾಗವಹಿಸಲು ಆತ್ಮವಿಶ್ವಾಸ ತುಂಬಿ ಯಶಸ್ಸು ಗಳಿಸಲು ನೆರವಾಗಲಿದೆ ಎಂದರು.ಕಾರ್ಯಕ್ರಮವನ್ನು ಆನ್‌ಲೈನ್ ಮೂಲಕ ಜಿಲ್ಲೆಯ ವಿಜ್ಞಾನ ಕಾಲೇಜುಗಳಿಗೆ ನೇರ ಪ್ರಸಾರ ಮಾಡಿ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಲಾಯಿತು. ನಂತರ ಅತಿಥಿಗಳನ್ನು ಕಾಲೇಜು ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ನಾಗರಾಜ ಹಕ್ಕೇರ ವಹಿಸಿದ್ದರು. ಅತಿಥಿಗಳಾದ ಪ್ರಾಚಾರ್ಯ ಜಿ. ಪಿ.ಪೂಜಾರ, ಉಪನ್ಯಾಸಕರಾದ ಎಸ್. ಎಸ್.ನಿಸ್ಸೀಮಗೌಡರ ವೇದಿಕೆಯಲ್ಲಿದ್ದರು. ಉಪನ್ಯಾಸಕರಾದ ರಮೇಶ ಲಮಾಣಿ, ವಿ.ಟಿ. ಹೊನ್ನಪ್ಪನವರ, ವಿ.ಎಸ್. ಪಾಟೀಲ, ಪುಷ್ಪಲತಾ ಡಿ.ಎಲ್., ಮಂಜುನಾಥ ಹತ್ತಿಯವರ, ಪ್ರಮೋದ ನಲವಾಗಲ, ಸುನಂದ ಶೀಲಿ, ಉಸ್ಮಾನ, ಸುಮಾ, ವಂದನ, ಅಶ್ವಿನಿ, ನಂದ, ಹೊಳಲಮ್ಮ, ಡಂಬಳ, ಕೋರಿ ಶೆಟ್ಟರ, ವಿನಯಕುಮಾರ ಮತ್ತು ಇತರರು ಇದ್ದರು.ಉಪನ್ಯಾಸಕಿ ಪುಷ್ಪಲತಾ ಡಿ.ಎಲ್. ಸ್ವಾಗತಿಸಿದರು. ಸುಹಾನ ನಿರೂಪಿಸಿ ವಿ.ಎಸ್.ಪಾಟೀಲ ವಂದಿಸಿದರು.