ಮ್ಯಾನ್ಯುವೆಲ್ ಟೆಂಡರ್ ಗೆ ಅಧ್ಯಕ್ಷರು ಮತ್ತು ಸದಸ್ಯರು ಆಕ್ಷೇಪ

| Published : Mar 20 2025, 01:20 AM IST

ಸಾರಾಂಶ

ರಾಮನಗರ: ಕಾನೂನಿನಲ್ಲಿ ಅವಕಾಶ ಇಲ್ಲದಿದ್ದರೂ ಮ್ಯಾನ್ಯುವೆಲ್ ಟೆಂಡರ್ ಕರೆದು ಸಿಸಿ ಚರಂಡಿ ಹಾಗೂ ಕವರಿಂಗ್ ಸ್ಲ್ಯಾಬ್ ಕಾಮಗಾರಿ ಹೇಗೆ ಕೈಗೆತ್ತಿಕೊಂಡಿದ್ದೀರಾ ಎಂದು ಬಿಡದಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಪ್ರಶ್ನಿಸಿ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ರಾಮನಗರ: ಕಾನೂನಿನಲ್ಲಿ ಅವಕಾಶ ಇಲ್ಲದಿದ್ದರೂ ಮ್ಯಾನ್ಯುವೆಲ್ ಟೆಂಡರ್ ಕರೆದು ಸಿಸಿ ಚರಂಡಿ ಹಾಗೂ ಕವರಿಂಗ್ ಸ್ಲ್ಯಾಬ್ ಕಾಮಗಾರಿ ಹೇಗೆ ಕೈಗೆತ್ತಿಕೊಂಡಿದ್ದೀರಾ ಎಂದು ಬಿಡದಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಪ್ರಶ್ನಿಸಿ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ಬಿಡದಿ ಪುರಸಭೆ ಸಭಾಂಗಣದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಎಸ್.ಲೋಹಿತ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮ್ಯಾನ್ಯುವೆಲ್ ಟೆಂಡರ್‌ನಲ್ಲಿ ಸಿಸಿ ಚರಂಡಿ ಮತ್ತು ಕವರಿಂಗ್ ಸ್ಲ್ಯಾಬ್ ಕಾಮಗಾರಿ ವಿಚಾರ ಪ್ರಸ್ತಾಪವಾದಾಗ ಸದಸ್ಯ ಸಿ.ಉಮೇಶ್ ಮ್ಯಾನ್ಯುವೆಲ್ ಟೆಂಡರ್ ಕರೆಯಲು ಕಾನೂನಿನಲ್ಲಿ ಅವಕಾಶ ಇಲ್ಲ. ನೀವು ಕಾಮಗಾರಿ ಕೈಗೆತ್ತಿಕೊಳ್ಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿ ಚರ್ಚೆಗೆ ಅವಕಾಶ ಮಾಡಿಕೊಟ್ಟರು.

ಇದಕ್ಕೆ ಧ್ವನಿಗೂಡಿಸಿದ ಸದಸ್ಯರಾದ ದೇವರಾಜು, ಬಿಂದ್ಯಾ ಹಾಗೂ ನವೀನ್, ಸಿಸಿ ಚರಂಡಿ ಮತ್ತು ಕವಿರಂಗ್ ಸ್ಲ್ಯಾಬ್ ಕಾಮಗಾರಿ ನಡೆದಿರುವುದು ಅಧಿಕಾರಿಗಳ ಗಮನಕ್ಕೆ ಬಂದಿಲ್ಲ. ಗುತ್ತಿಗೆದಾರನ ಮೂಲಕ ಕಾಮಗಾರಿ ನಡೆಸಿದ್ದು, ಈಗ ಹಣ ಬಿಡುಗಡೆ ಮಾಡಬೇಕಾದ ಕಾರಣ ವಿಚಾರ ಸಭೆಗೆ ಬಂದಿದೆ ಎಂದು ಕಿಡಿಕಾರಿದರು.

ಆಡಳಿತಾರೂಢ ಸದಸ್ಯರ ವಾರ್ಡುಗಳಲ್ಲಿ ಟೆಂಡರ್ ಕರೆಯದೆ 5 ಲಕ್ಷ ರು.ವರೆಗೆ ಕೆಲಸ ಮಾಡಲು ಅವಕಾಶ ಇದ್ದರೆ, ಉಳಿದ ಸದಸ್ಯರ ವಾರ್ಡುಗಳಲ್ಲಿ ಕೆಲಸ ಮಾಡಿ, ಬೇಡ ಎಂದವರು ಯಾರು, ಆಡಳಿತ ಪಕ್ಷದ ಸದಸ್ಯರಾಗಿ ಅಥವಾ ಅಧಿಕಾರಿಗಳಾಗಲಿ ಯಾರು ಇಂತಹ ಗೋಲ್ ಮಾಲ್ ಕೆಲಸ ಮಾಡಬೇಡಿ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಂಕಷ್ಟ ಎದುರಾಗಲಿದೆ ಎಂದು ಸಿ.ಉಮೇಶ್ ಎಚ್ಚರಿಕೆ ನೀಡಿದರು.

ಬಿಡದಿ ಪುರಸಭೆಗೆ ಹೊಂದಿಕೊಂಡಿರುವ ಮುದ್ದಾಪುರ ಕರೇನಹಳ್ಳಿ ಗ್ರಾಮದ ಹೌಸಿಂಗ್ ಬೋರ್ಡ್ ಬಡಾವಣೆಯ 720 ನಿವೇಶನಗಳನ್ನು ನಿಯಮಾನುಸಾರ ಸುಪರ್ದಿಗೆ ತೆಗೆದುಕೊಳ್ಳುವಂತೆ ಪತ್ರ ಕೊಟ್ಟಿರುವುದಾಗಿ ಅಧಿಕಾರಿಗಳು ಸಭೆಗೆ ತಿಳಿಸಿದರು. ಸದಸ್ಯರು ಬಡಾವಣೆಯಲ್ಲಿ ಯುಜಿಡಿ, ಚರಂಡಿ, ರಸ್ತೆ, ಕುಡಿಯುವ ನೀರು, ವಿದ್ಯುತ್ ಅಳವಡಿಸಿರುವ ಬಗ್ಗೆ ಸ್ಥಳ ಪರಿಶೀಲಿಸಿ ದೃಢೀಕರಿಸಿದ ನಂತರವಷ್ಟೆ ಸುಪರ್ದಿಗೆ ಪಡೆಯುವ ಬಗ್ಗೆ ಸಭೆ ತೀರ್ಮಾನಿಸಿತು.

ಸಭೆಯಲ್ಲಿ ಅವರಗೆರೆ ಒಣ‌ಕಸ ತ್ಯಾಜ್ಯ ಸಂಗ್ರಹಣಾ ಘಟಕದಿಂದ ಕೆಪಿಟಿಸಿಎಲ್‌ಗೆ ಒಣಕಸ ಸಾಗಿಸಲು ಲಾರಿ ಬಾಡಿಗೆ ಪಡೆಯುವ ವಿಷಯವಾಗಿ ಚರ್ಚಿಸಿ ಸ್ಥಾಯಿ‌ ಸಮಿತಿ‌ ಸಭೆಗೆ ತರದೆ ಅಧ್ಯಕ್ಷರ ಘಟನೋತ್ತರ ಮಂಜೂರಾತಿ ಪಡೆದಿರುವ ಬಗ್ಗೆಯೂ ಸಮಿತಿ ಸದಸ್ಯರು ಕಿಡಿಕಾರಿದರು.

ಸದಸ್ಯರಾದ ರಮೇಶ್ ಮತ್ತು ದೇವರಾಜು, ನವೀನ್ ಕುಮಾರ್ ಮಾತನಾಡಿ, ದಿನನಿತ್ಯ ಬಾಡಿಗೆ ಪಾವತಿ ಮೊತ್ತ ದುಬಾರಿಯಾಗಲಿದೆ. ಸಾರ್ವ ಜನಿಕರ ಹಣ ಪೋಲಾಗಲು ಬಿಡುವುದಿಲ್ಲ.ಕಸ ವಿಂಗಡಣೆ ಮಾಡಿಕೊಂಡು ವಾಹನ ಪಡೆಯಬೇಕು, ಅದನ್ನು ಬಿಟ್ಟು ಲೋಡ್ ಲೆಕ್ಕದಲ್ಲಿ ವಾಹನ‌ ಪಡೆದರೆ ಪುರಸಭೆಗೆ ಹೊರೆಯಾಗುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಆಸ್ತಿ ತೆರಿಗೆ ಸಂಗ್ರಹ ಮಾಹಿತಿ, ಸ್ವಚ್ಚ ಭಾರತ್ ಯೋಜನೆ 2.0 ಯಡಿ ಚಟುವಟಿಕೆ, ಕನಿಷ್ಟ ವೇತನದ ಬಾಕಿ ಪಾವತಿ, ಬೋರ್ ವೆಲ್ ಗಳ ಅಂಕಿಅಂಶ, ಡಿಜಿಟಲ್ ಫ್ಲೆಕ್ಸ್ ಬೋರ್ಡ್ ಬಿಲ್ ಪಾವತಿ, ಹೆಗ್ಗಡಗೆರೆ ಕೆರೆ ದಿಬ್ಬದ ಮೇಲೆ ಸಿಮೆಂಟ್ ಬೆಂಚ್ ಅಳವಡಿಕೆ ಹಾಗೂ ತುರ್ತು ಅಭಿವೃದ್ಧಿ ಕೆಲಸ ಕೈಗೊಳ್ಳುವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ಸ್ಥಾಯಿ ಸಮಿತಿ ಸದಸ್ಯರು ಸುದೀರ್ಘ ಚರ್ಚೆ ನಡೆಸಿದರು.

ಸಭೆಯಲ್ಲಿ‌ ಸ್ಥಾಯಿ‌ ಸಮಿತಿ ಸದಸ್ಯರಾದ ಸೋಮಶೇಖರ್, ರಮೇಶ್, ನವೀನ್‌ಕುಮಾರ್, ಲಲಿತಾನರಸಿಂಹಯ್ಯ, ಅಧಿಕಾರಿಗಳಾದ ರೂಪಾ, ಶಿಲ್ಪಾ, ಶ್ಯಾಮ್, ಶೃತಿ, ಸುಮಾ, ನಟರಾಜು ಭಾಗವಹಿಸಿದ್ದರು.

-------------------------------

ಬಾಕ್ಸ್ .................

ಸ್ಥಳೀಯ ಸಂಪನ್ಮೂಲ ತರಲು ಆಸಕ್ತಿ ವಹಿಸಿ

ಪುರಸಭೆಗೆ ಸ್ಥಳೀಯ ಸಂಪನ್ಮೂಲ ತರುವಲ್ಲಿ ಮುಖ್ಯಾಧಿಕಾರಿಗಳು, ಅಧಿಕಾರಿಗಳು ಹೆಚ್ಚಿನ ಆಸಕ್ತಿ ತೋರಿಸಬೇಕು. ಹೌಸಿಂಗ್ ಬೋರ್ಡ್, ಬಿಎಂಆರ್ ಡಿಎ ನೊಂದಾಯಿತ ಬಡಾವಣೆಗಳಲ್ಲಿ ವಸತಿ ನಿರ್ಮಾಣ ಆಗುತ್ತಿರುವ ಸ್ಥಳಗಳಿಗೆ ಭೇಟಿ ನೀಡಿ ತೆರಿಗೆ ಪಡೆಯದೆ ನಿರ್ಲಕ್ಷ್ಯ ವಹಿಸುತ್ತಿರುವುದಾದರು ಏಕೆಂದು ಪ್ರಶ್ನಿಸಿ ಸದಸ್ಯರು ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಅಸಮಾಧಾನ ಹೊರಹಾಕಿದರು.

19ಕೆಆರ್ ಎಂಎನ್ 3.ಜೆಪಿಜಿ

ಬಿಡದಿ ಪುರಸಭೆ ಸಭಾಂಗಣದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಎಸ್.ಲೋಹಿತ್ ಕುಮಾರ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.