ಸಾರಾಂಶ
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ರಾಜ್ಯ ಸರ್ಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸೆ.22 ರಿಂದ ಆರಂಭವಾಗಿದ್ದು, ರಾಜ್ಯದೆಲ್ಲೆಡೆ ಶಿಕ್ಷಕರೇ ಗಣತಿದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದು ಸಾಕಷ್ಟು ಪ್ರದೇಶದಲ್ಲಿ ಸರ್ವರ್ ತೊಂದರೆಯಿಂದ ಶಿಕ್ಷಕರು ಹಲವು ರೀತಿಯ ಸಮಸ್ಯೆಗೆ ಸಿಲುಕಿ ಗಣತಿ ಕಾರ್ಯದಲ್ಲಿ ನಿರೀಕ್ಷಿತ ಪ್ರಗತಿಯಲ್ಲಿ ಸಾಧಿಸಲಾರದೆ ತೊಳಲಾಡುವ ಸಂದರ್ಭದಲ್ಲಿ, ಚಳ್ಳಕೆರೆ ತಾಲೂಕಿನ ಶಿಕ್ಷಕಿಯೊಬ್ಬರು ತಮಗೆ ನಿಗದಿ ಪಡಿಸಿದ ಗಣತಿ ಕಾರ್ಯವನ್ನು ಕೇವಲ 5 ದಿನಗಳಲ್ಲಿ ಪೂರೈಸುವ ಮೂಲಕ ವಿನೂತನ ಪ್ರಗತಿ ಸಾಧಿಸಿದ್ದಲ್ಲದೆ, ಎಲ್ಲಾ ಗಣತಿದಾರರಿಗೆ ಮಾರ್ಗದರ್ಶಿಯಾಗಿದ್ದಾರೆಂದರೆ ಅತಿಶೋಕ್ತಿಯಲ್ಲ. ಚಳ್ಳಕೆರೆ ತಾಲೂಕಿನ ತಳಕು ಹೋಬಳಿಯ ಓಬಳಾಪುರ (ಸಿರಿವಾಳ) ಗ್ರಾಪಂ ವ್ಯಾಪ್ತಿಯ ದಾರ‍್ಲಹಳ್ಳಿಯ ಶಿಕ್ಷಕಿ ಎಂ.ರಾಧ ಕೇವಲ ಐದು ದಿನಗಳಲ್ಲಿ ಸರ್ಕಾರ ತಮಗೆ ನಿಗದಿಪಡಿಸಿದ ಗಣತಿ ಕಾರ್ಯವನ್ನು ಹಗಲು, ರಾತ್ರಿ ಎನ್ನದೆ ಮನೆ, ಮನೆಗೂ ತೆರಳಿ ಜನರನ್ನು ಓಲೈಸಿ ಅವರಿಗೂ ಸಾಮಾಜಿಕ ಮತ್ತು ಶೈಕ್ಷಣಿಕ ಪ್ರಗತಿ ಮತ್ತು ಅದರಿಂದ ಆಗುವ ಅನುಕೂಲಗಳ ಬಗ್ಗೆ ಮನವರಿಕೆ ಮಾಡಿ ಗಣತಿ ಕಾರ್ಯವನ್ನು ಪೂರೈಸಿದ್ದಾರೆ.ಅವರಿಗೆ ತಾಲೂಕು ಆಡಳಿತದಿಂದ 116 ಮನೆಗಳನ್ನು ನಿಗದಿಪಡಿಸಿ ಸೆ.22ರಂದು ಸೂಚನೆ ನೀಡಲಾಗಿತ್ತು.
ಸಮೀಕ್ಷೆಯ ಬಗ್ಗೆ ಹಿರಿಯ ಅಧಿಕಾರಿಗಳು, ತಹಸೀಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಮೇಲ್ವಿಚಾರಕರೊಂದಿಗೆ ಚರ್ಚೆ ನಡೆಸಿದ್ದಲ್ಲದೆ, ಮಾಹಿತಿಯನ್ನು ಪೂರ್ಣ ಪ್ರಮಾಣದಲ್ಲಿ ಓದಿ ಅರ್ಥೈಸಿಕೊಂಡು ಅಂದಿನಿಂದಲೇ ಗಣತಿ ಕಾರ್ಯವನ್ನು ಆರಂಭಿಸಿದ್ದಾರೆ. ಅವರೇ ತಿಳಿಸುವಂತೆ ಹಗಲು ವೇಳೆ ಗ್ರಾಮೀಣ ಪ್ರದೇಶದಲ್ಲಿ ಸರ್ವರ್ ಸಮಸ್ಯೆಯ ಜೊತೆಗೆ ಗ್ರಾಮೀಣ ಭಾಗದ ಜನರು ಮಾಹಿತಿ ನೀಡಲು ಗ್ರಾಮದಲ್ಲಿ ಇರದ ಕಾರಣ ಸಮೀಕ್ಷೆ ಕಾರ್ಯವನ್ನು ಪೂರೈಸಲು ಶಿಕ್ಷಕಿ ಎಂ.ರಾಧ ಸಂಜೆ ವೇಳೆಯಲ್ಲಿ ಮನೆಗಳಿಗೆ ತೆರಳಿ ಮಾಹಿತಿ ಪಡೆಯುತ್ತಿದ್ದರು. ಅವರೇ ತಿಳಿಸುವಂತೆ ಅವರಿಗೆ ಯಾವುದೇ ಸರ್ವರ್ ಸಮಸ್ಯೆ ಎದುರಾಗಲಿಲ್ಲ. ಅತ್ಯಂತ ಆತ್ಮವಿಶ್ವಾಸದಿಂದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಿದ್ದೇನೆ ಎಂದು ತಿಳಿಸಿದ್ದಾರೆ.ವಿಶೇಷವೆಂದರೆ ದಾರ‍್ಲಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಅವರು ಕಾರ್ಯನಿರ್ವಹಿಸುತ್ತಿದ್ದು ಇದು ಅವರಿಗೆ ಹೆಚ್ಚಿನ ಬಲ ನೀಡಿದೆ. ಗಣತಿ ಕಾರ್ಯಕ್ಕೆ ಮನೆ, ಮನೆಗೂ ತೆರಳಿದಾಗ ಸಾರ್ವಜನಿಕರು ಹಿಂದೇಟು ಹಾಕದೆ ಅವರು ಕೇಳಿದ ಮಾಹಿತಿ ನೀಡಿದ್ದಾರೆ. ಗ್ರಾಮೀಣ ಜನರಿಗೂ ನಮ್ಮ ಗ್ರಾಮದ ಶಿಕ್ಷಕಿ ಎಂಬ ಅಭಿಮಾನವೂ ಸಹ ಇವರ ಗಣತಿ ಕಾರ್ಯಕ್ಕೆ ಹೆಚ್ಚು ಸಹಕಾರ ನೀಡಿದೆ. ಗಣತಿ ಕಾರ್ಯವನ್ನು ಪೂರೈಸಿದ ಶಿಕ್ಷಕಿ ಎಂ.ರಾಧಅವರ ಕಾರ್ಯವನ್ನು ಮೆಚ್ಚಲೇಬೇಕಾಗಿದೆ.
ಸಾಮಾಜಿಕ ಮತ್ತು ಶೈಕ್ಷಣಿಕ ಪ್ರಗತಿಯಲ್ಲಿ ಐದು ದಿನದ ಅವಧಿಯಲ್ಲಿ ಸಮೀಕ್ಷೆ ಪೂರೈಸುವ ಮೂಲಕ ಎಂ.ರಾಧ ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಗಣತಿ ಕಾರ್ಯ ಪೂರೈಸಿದ ಮೊಟ್ಟಮೊದಲ ಮಹಿಳಾ ಶಿಕ್ಷಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಸ್ತುತ ತಾಲೂಕಿನಾದ್ಯಂತ 661ಕ್ಕೂ ಹೆಚ್ಚು ಶಿಕ್ಷಕರು 75 ಮೇಲ್ವಿಚಾರಕರು, ಗಣತಿ ಕಾರ್ಯದ ಮೇಲುಸ್ತುವಾರಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಮಾರ್ಗದರ್ಶನದಲ್ಲಿ ನಡೆಸುತ್ತಿದ್ದಾರೆ.ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ನಿಗದಿತ ಅವಧಿಗೆ ಮುನ್ನವೇ ಸಮೀಕ್ಷೆ ಪೂರೈಸುವ ಮೂಲಕ ಹೆಗ್ಗಳಿಕೆಗೆ ಪಾತ್ರರಾದ ಶಿಕ್ಷಕಿ ಎಂ.ರಾಧ ಅವರನ್ನು ಅಭಿನಂದಿಸುವುದಾಗಿ ತಹಸೀಲ್ದಾರ್ ರೇಹಾನ್ ಪಾಷ ತಿಳಿಸಿದ್ದಾರೆ. ದಾರ‍್ಲಹಳ್ಳಿಯ ಶಿಕ್ಷಕಿ ಎಂ.ರಾಧ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಉತ್ತಮ ಕಾರ್ಯ ನೆರವೇರಿಸಿ ತನ್ನ ಜವಾಬ್ದಾರಿಯನ್ನು ಸಂಪೂರ್ಣವಾಗಿ ಪೂರೈಸುವ ಮೂಲಕ ರಾಜ್ಯ, ಜಿಲ್ಲೆ, ತಾಲೂಕು ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಕೀರ್ತಿ ತಂದಿದ್ದಾರೆ ಎಮದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ತಿಳಿಸಿ ಶಿಕ್ಷಕಿಯನ್ನು ಅಭಿನಂದಿಸಿದ್ದಾರೆ.