ಸಾರಾಂಶ
ವಾರ್ಡ್‌ಗಳಲ್ಲಿ ಸ್ವಚ್ಛತೆ ಮರಿಚಿಕೆ । ಅಭಿವೃದ್ಧಿ ಬಗ್ಗೆ ಗಮನಹರಿಸದ ಆಡಳಿತ ಮಂಡಳಿ ಕನ್ನಡಪ್ರಭ ವಾರ್ತೆ ಚಳ್ಳಕೆರೆ ಚಳ್ಳಕೆರೆ ನಗರಸಭೆ ಆಡಳಿತವನ್ನು ಸುಲಿತವಾಗಿ ನಡೆಸಲು ಸುಸಜ್ಜಿತವಾದ ಕಟ್ಟಡವಿಲ್ಲದ ಕಾರಣ ತಾತ್ಕಾಲಿಕವಾಗಿ ರಂಗಮಂದಿರದಲ್ಲಿ ಆಡಳಿತ ನಡೆಸುತ್ತಿದ್ದು, ನಗರಸಭೆಯ ಹಳೇ ಕಚೇರಿಯನ್ನು ತುರ್ತಾಗಿ ಸಿದ್ಧಪಡಿಸಿ ಸಾರ್ವಜನಿಕರ ಸೇವೆ ನಮ್ಮ ಅವಧಿಯಲ್ಲೇ ಸಮರ್ಪಿಸಬೇಕು ಎಂದು ನಗರಸಭೆ ಎಲ್ಲಾ ಸದಸ್ಯರು ಒತ್ತಾಯಿಸಿದ ಪ್ರಸಂಗ ನಡೆಯಿತು.
ನಗರಸಭೆ ಸಾಮಾನ್ಯಸಭೆಯು ಅಧ್ಯಕ್ಷೆ ಜೈತುಂಬಿ, ಉಪಾಧ್ಯಕ್ಷೆ ಸುಮಾ ಭರಮಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಮಲ್ಲಿಕಾರ್ಜುನ್ ನೇತೃತ್ವದಲ್ಲಿ ನಡೆಯುತ್ತಿದ್ದು, ಪ್ರಾರಂಭದಲ್ಲಿ ಸ್ವಾಗತ ಕೋರಿದ ಪೌರಾಯುಕ್ತ ಜಗರೆಡ್ಡಿ ವಿಷಯಗಳ ಬಗ್ಗೆ ಸದಸ್ಯರು ಚರ್ಚೆ ನಡೆಸಿ ಮಾರ್ಗದರ್ಶನ ನೀಡುವಂತೆ ಮನವಿ ಮಾಡಿದರು.ನಗರದ ಖಾಸಗಿ ಬಸ್ ನಿಲ್ದಾಣದ ತುರ್ತು ರಿಪೇರಿಗಾಗಿ ನಗರಸಭಾ ನಿಧಿಯಡಿ 4.20ಕೋಟಿ ರು. ಇದ್ದು ಈ ಹಣದಲ್ಲಿ ಖಾಸಗಿ ಬಸ್ ನಿಲ್ದಾಣದ ನಿರ್ಮಾಣ ಕಾರ್ಯ ಕೈಗೊಳ್ಳಲು ಸದಸ್ಯರು ಅನುಮೋದನೆ ನೀಡಬೇಕೆಂದು ವಿನಂತಿಸಿದಾಗ ನಮಗೆ ಕುಳಿತುಕೊಳ್ಳಲು ಜಾಗವಿಲ್ಲ, ಕಳೆದ 4 ವರ್ಷಗಳಿಂದ ನಗರಸಭೆ ಹಳೇ ಕಚೇರಿ ರಿಪೇರಿ ಹಂತದಲ್ಲೇ ಇದೆ. ಇತ್ತೀಚಿಗಂತು ಯಾವುದೇ ಅಭಿವೃದ್ಧಿ ಕಾಮಗಾರಿಗಳಾಗುತ್ತಿಲ್ಲ. ಇರುವ ಹಣವನ್ನು ಕೂಡಲೇ ನಗರಸಭೆಯ ತುರ್ತು ರಿಫೇರಿಗೆ ಉಪಯೋಗಿಸಿ ನಂತರ ಬೇರೆ ಕಾಮಗಾರಿಗೆ ನೀಡಿ ಎಂದು ಸಿ.ಶ್ರೀನಿವಾಸ್, ವಿ.ವೈ.ಪ್ರಮೋದ್, ಎಸ್.ಜಯಣ್ಣ, ವಿಶುಕುಮಾರ್, ವೆಂಕಟೇಶ್, ನಾಗಮಣಿ, ಪಾಲಮ್ಮ, ನಿರ್ಮಲ, ತಿಪ್ಪಕ್ಕ, ಸಾಕಮ್ಮ, ಕವಿತಾನಾಯಕಿ ಮುಂತಾದವರು ಒತ್ತಾಯಿಸಿದರು.
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮುಂಭಾಗದಲ್ಲಿ ನಿರ್ಮಿಸಿರುವ ನೂತನ ಮಳಿಗೆಗಳ ಹರಾಜಿಗೆ ಅನುಮತಿ ಕೇಳಿದ್ದೀರ, ಇನ್ನೂ ಆ ಭಾಗದಲ್ಲಿ ಜಾಗ ಲಭ್ಯವಿದ್ದು ಅಲ್ಲಿ ಮಳಿಗೆಗಳನ್ನು ನಿರ್ಮಿಸಿ ಒಂದೇ ಹಂತದಲ್ಲಿ ಹರಾಜು ಪ್ರಕ್ರಿಯೆ ಮಾಡಿ ಎಂದಾಗ ಕಾಂಗ್ರೆಸ್ ಸದಸ್ಯ ಆಕ್ಷೇಪಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತರ ಜಗರೆಡ್ಡಿ, ಸದಸ್ಯರ ಅಭಿಪ್ರಾಯದಂತೆ ಹೆಚ್ಚುವರಿ ಮಳಿಗೆಗಳನ್ನು ನಿರ್ಮಿಸುವ ಭರವಸೆ ನೀಡಿದರು. ನಾಯಕನಹಟ್ಟಿ ರಸ್ತೆಯ ಕರೇಕಲ್ ಕೆರೆ ಕೋಡಿ ನೀರು ಹರಿದು ರಸ್ತೆಯಲ್ಲಿ ಕಂದಕ ಉಂಟಾಗಿದ್ದು, ಅದನ್ನು ಕೂಡಲೇ ತುರ್ತಾಗಿ ರಿಪೇರಿಗೊಳಿಸುವುದಾಗಿ ಸಹಾಯಕ ಕಾರ್ಯಪಾಲಕ ಅಭಿಯಂತರ ವಿನಯ್, ಜೆಇ ಲೋಕೇಶ್ ತಿಳಿಸಿದರು.
ನಗರದ ಜಿಲ್ಲಾ ಮಾದಿಗ ನೌಕರರ ಸಾಂಸ್ಕೃತಿಕ ಸಂಘ, ಛಲವಾದಿ ಕ್ಷೇಮಾಭಿವೃದ್ಧಿ ಸಂಘ, ಸರ್ಕಾರಿ ನಿವೃತ್ತ ನೌಕರರ ಸಂಘ, ವೀರಶೈವ ಪಂಚಮಸಾಲಿ ಸಮಾಜ ಸಂಘ, ಹಿಂದುಳಿದ ವರ್ಗ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ನಿವೃತ್ತ ನೌಕರರ ಬಂಜಾರ ಕ್ಷೇಮಾಭಿವೃದ್ದಿ ಸಂಘ, ಗೌತಮಬುದ್ಧ ಪ್ರತಿಷ್ಠಾನ ಮುಂತಾದವರು ನಿವೇಶನ ನೀಡುವಂತೆ ಅರ್ಜಿ ಸಲ್ಲಿಸಿದ್ದು, ಇವುಗಳನ್ನು ಪರಿಶೀಲಿಸಿ ಕಾನೂನುವಾಗಿದ್ದಲ್ಲಿ ವಿತರಣೆ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಪೌರಾಯುಕ್ತರು ತಿಳಿಸಿದರು.ಜೆಡಿಎಸ್ ಸದಸ್ಯರಾದ ಸಿ.ಎಂ.ವಿಶುಕುಮಾರ್, ಸಿ.ಶ್ರೀನಿವಾಸ್, ವಿ.ವೈ.ಪ್ರಮೋದ್, ಕವಿತಾ ನಾಯಕಿ, ನಾಗಮಣಿ, ತಿಪ್ಪಮ್ಮ, ನಿರ್ಮಲ, ಸಾಕಮ್ಮ, ಎಸ್.ಜಯಣ್ಣ, ಶಿವಕುಮಾರ್, ಪಾಲಮ್ಮ, ಕಾಂಗ್ರೆಸ್ ಸದಸ್ಯ ಎಚ್.ಪ್ರಶಾಂತ್‌ಕುಮಾರ್ ಮುಂತಾದವರು ನಗರಸಭೆ ವ್ಯಾಪ್ತಿಯ 21 ವಾರ್ಡ್‌ಗಳಲ್ಲಿ ಸ್ವಚ್ಛತೆ ಮಾಯವಾಗಿದೆ. ಪ್ರತಿನಿತ್ಯ ಸಾರ್ವಜನಿಕರು ವಿವಿಧ ವಾರ್ಡ್‌ಗಳಲ್ಲಿ ಕಸದಲಾರಿ, ಸಿಬ್ಬಂದಿ ಬರುತ್ತಿಲ್ಲವೆಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಎಲ್ಲಾ ವಾರ್ಡ್‌ಗಳ ಸ್ವಚ್ಛತೆಗೆ ನಗರಸಭೆ ಆಯುಕ್ತರು ಕ್ರಮಕೈಗೊಳ್ಳಬೇಕು ಎಂದರು. ಆರೋಗ್ಯ ನಿರೀಕ್ಷಕರ ಸಭೆ ಕರೆದು ಸೂಚನೆ ನೀಡುವುದಾಗಿ ಪೌರಾಯುಕ್ತರು ಭರವಸೆ ನೀಡಿದರು.
ಸಭೆಯಲ್ಲಿ ಆರ್.ರುದ್ರನಾಯಕ, ಎಂ.ಜೆ.ರಾಘವೇಂದ್ರ, ಶಿಲ್ಪ, ಸುಮಕ್ಕ, ಕವಿತಾ, ಜಯಲಕ್ಷ್ಮೀ, ಆರ್.ಮಂಜುಳಾ, ಕವಿತಾವೀರೇಶ್, ವೈ.ಪ್ರಕಾಶ್, ಹೊಯ್ಸಳಗೋವಿಂದ, ಚಳ್ಳಕೆರೆಯಪ್ಪ, ವಿರೂಪಾಕ್ಷಿ, ವ್ಯವಸ್ಥಾಪಕ ಲಿಂಗರಾಜು, ಕಂದಾಯಾಧಿಕಾರಿ ಸತೀಶ್, ಆರೋಗ್ಯ ನಿರೀಕ್ಷಕರಾದ ಗಣೇಶ, ಗೀತಾಕುಮಾರಿ, ಸುನೀಲ್, ರುದ್ರಮುನಿ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.