ನಾಳೆ ಭದ್ರೆಗಾಗಿ ಚಳ್ಳಕೆರೆ ಸ್ವಯಂ ಪ್ರೇರಿತ ಬಂದ್

| Published : Feb 08 2024, 01:39 AM IST

ನಾಳೆ ಭದ್ರೆಗಾಗಿ ಚಳ್ಳಕೆರೆ ಸ್ವಯಂ ಪ್ರೇರಿತ ಬಂದ್
Share this Article
  • FB
  • TW
  • Linkdin
  • Email

ಸಾರಾಂಶ

ಚಳ್ಳಕೆರೆ ಬಂದ್ ಹಿನ್ನಲೆ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಭದ್ರಾ ಮೇಲ್ದಂಡೆ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಆಗ್ರಹಿಸಿ ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಫೆ.9ರ ಶುಕ್ರವಾರ ಚಳ್ಳಕೆರೆ ಸ್ವಯಂ ಪ್ರೇರಿತ ಬಂದ್‌ಗೆ ಕರೆ ನೀಡಿದೆ. ಬಂದ್ ಹಿನ್ನೆಲೆ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಅಧ್ಯಕ್ಷತೆಯಲ್ಲಿ ಪೂರ್ವ ಸಿದ್ಧತಾ ಸಭೆ ನಡೆಸಲಾಯಿತು.

ಸಭೆಯಲ್ಲಿ ಮಾತನಾಡಿದ ಲಿಂಗಾರೆಡ್ಡಿ, ಭದ್ರಾ ಕಾಮಗಾರಿ ಪೂರ್ಣಗೊಳಿಸಲು ಚಳ್ಳಕೆರೆ ಜನತೆ ಸ್ವಯಂ ಪ್ರೇರಿತವಾಗಿ ಬಂದ್ ಆಚರಿಸಲಿದ್ದಾರೆ. ಇದು ಪಕ್ಷಾತೀತ, ಜಾತ್ಯತೀತ ಹೋರಾಟವಾಗಿದ್ದು ಎಲ್ಲರ ಬೆಂಬಲ ಕೋರಲಾಗಿದೆ. ಈಗಾಗಲೇ ಎರಡು ಬಾರಿ ಪೂರ್ವ ಸಿದ್ಧತಾ ಸಭೆ ನಡೆಸಿ ಎಲ್ಲ ಸಂಘ ಸಂಸ್ಥೆಗಳ ಆಹ್ವಾನಿಸಿ ತೀರ್ಮಾನಿಸಲಾಗಿದೆ. ಶಾಂತಿಯುತ ಬಂದ್ ಗೆ ಎಲ್ಲರು ಸಹಕಾರ ನೀಡಲಿದ್ದಾರೆ ಎಂದರು.

ಬಂದ್ ಅಂಗವಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಖಾಸಗಿ ಬಸ್ಸುಗಳ ಓಡಾಟ ಇರುವುದಿಲ್ಲ. ಚಳ್ಳಕೆರೆ ಪಟ್ಟಣ ಪ್ರವೇಶಿಸಿಲು ಅವಕಾಶವಿಲ್ಲ. ಆಸ್ಪತ್ರೆ ಸೇರಿದಂತೆ ತುರ್ತು ಕ್ರಮಗಳಿಗೆ ಬಂದ್ ನಿಂದ ವಿನಾಯಿತಿ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಶಾಲಾ, ಕಾಲೇಜುಗಳಿಗೆ ವಿನಂತಿಸಲಾಗಿದೆ. ಎಪಿಎಂಸಿ ದಲಾಲರು, ಕಾರ್ಮಿಕ ಸಂಘಟನೆಗಳು ಬಂದ್‌ನಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲಿವೆ ಎಂದರು.

ಅಖಂಡ ಕರ್ನಾಟಕ ರೈತ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷ ಸೋಮಗುದ್ದುರಂಗಸ್ವಾಮಿ ಮಾತನಾಡಿ, ಕಳೆದ 40 ವರ್ಷಗಳಿಂದ ಹೋರಾಟ ನಡೆಯುತ್ತಲೇ ಬಂದಿದೆ. ಸಂಘಟನೆ ದುರ್ಬಲವಾದಲ್ಲಿ ಹೋರಾಟವೂ ಸಹ ಫಲನೀಡುವುದಿಲ್ಲ. ಜಿಲ್ಲಾ ನೀರಾವರಿ ಹೋರಾಟ ಸಮಿತಿ ಫೆ.9ರಂದು ನಡೆಸುವ ಬಂದ್‌ಗೆ ಎಲ್ಲರೂ ಸಂಪೂರ್ಣ ಸಹಕಾರ ನೀಡಬೇಕು ಎಂದರು. ರೈತ ಸಂಘ ಉಪಾಧ್ಯಕ್ಷರಾದ ರೆಡ್ಡಿಹಳ್ಳಿವೀರಣ್ಣ, ಕೆ.ಪಿ.ಭೂತಯ್ಯ, ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ರೂಪಿಸಲಾದ ಕಾರ್ಯಕ್ರಮಗಳ ಬಗ್ಗೆ ವಿವರಣೆ ನೀಡಿದರು.

ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಸಂಚಾಲಕ ಚಿಕ್ಕಪ್ಪನಹಳ್ಳಿಷಣ್ಮುಖ ಮಾತನಾಡಿ, ಫೆ.9ರ ಬಂದ್ ಶಾಂತಿಯುತವಾಗಿ ನಡೆಯಬೇಕು. ಯಾವುದೇ ರೀತಿಯ ಸಣ್ಣಪುಟ್ಟ ಗಲಾಟೆಯಾಗದಂತೆ ಎಲ್ಲಾ ಹೋರಾಟಗಾರರು ಎಚ್ಚರಿಕೆ ವಹಿಸಬೇಕು. ಆಹಿತಕರ ಘಟನೆಗೆ ಅವಕಾಶ ಮಾಡಿಕೊಡಬಾರದು. ಸ್ವಯಂ ಪ್ರೇರಿತ ಬಂದ್‌ಗೆ ಕನ್ನಡಪರ ಸಂಘಟನೆಗೂ ಸೇರಿದಂತೆ ಒಟ್ಟು 56 ಸಂಘಟನೆಗಳು ಬೆಂಬಲ ಘೋಷಿಸಿವೆ. ಪೂರ್ವಭಾವಿ ಸಭೆಯಲ್ಲಿ 30 ಕ್ಕೂ ಹೆಚ್ಚು ಸಂಘಟನೆ ಪಾಲ್ಗೊಂಡಿವೆ. ಎರಡು ಸಾವಿರಕ್ಕೂ ಹೆಚ್ಚು ಜನರು ಪ್ರತಿಭಟನೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಡಿವೈಎಸ್ಪಿ ರಾಜಣ್ಣ, ಠಾಣಾ ಇನ್ಸ್‌ಪೆಕ್ಟರ್ ರಾಜಫಕೃದ್ದೀನ್‌ ದೇಸಾಯಿ, ಎಐಟಿಯುಸಿ ಮುಖ್ಯಸ್ಥ ಸಿ.ವೈ.ಶಿವರುದ್ರಪ್ಪ, ಕಿಸಾನ್ ಜಿಲ್ಲಾಧ್ಯಕ್ಷ ದೊಡ್ಡ ಉಳ್ಳಾರ್ತಿಕರಿಯಣ್ಣ, ಸಿಐಟಿಯು ಮುಖ್ಯಸ್ಥ ಟಿ.ತಿಪ್ಫೇಸ್ವಾಮಿ, ರೈತ ಮುಖಂಡರಾದ ಶ್ರೀಕಂಠಮೂರ್ತಿ, ಚನ್ನಕೇಶವ, ಆರ್.ಪ್ರಸನ್ನಕುಮಾರ್, ಬಿ.ಫರೀದ್‌ಖಾನ್, ಎಸ್.ಎಚ್.ಸೈಯದ್, ಅನ್ವರ್‌ಮಾಸ್ಟರ್, ಎಂ.ಚೇತನ್‌ಕುಮಾರ್, ಮುಜೀಬುಲ್ಲಾ, ವಕೀಲರ ಸಂಘದ ಅಧ್ಯಕ್ಷ ಕೆ.ಎಂ.ನಾಗರಾಜು ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.