ಸಾರ್ವಜನಿಕ ಬದುಕಿನಲ್ಲಿ ಸವಾಲುಗಳೇ ಸಾಧನೆಯ ಮೂಲ: ಸೌಮ್ಯನಾಥ ಸ್ವಾಮೀಜಿ

| Published : Jul 01 2025, 12:47 AM IST

ಸಾರ್ವಜನಿಕ ಬದುಕಿನಲ್ಲಿ ಸವಾಲುಗಳೇ ಸಾಧನೆಯ ಮೂಲ: ಸೌಮ್ಯನಾಥ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಇದೊಂದು ಅವಿಸ್ಮರಣೀಯ ಕಾರ್ಯಕ್ರಮವಾಗಿದೆ. ಕಳೆದ 40 ವರ್ಷಗಳ ಹಿಂದೆ ಸಾಮಾನ್ಯ ಮಗ್ಗದ ಕೂಲಿ ಕೆಲಸಕ್ಕೆ ಬಂದ ನಾನು, ಕೆಲಸದ ಮೂಲಕ ಬೆಳೆಸಿದ್ದೇನೆ. ಸಾಧನೆಯ ಹಂಬಲ ನನ್ನ ಬದುಕನ್ನು ಬದಲಿಸಿದೆ.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ಅಧಿಕಾರ ದೊರೆತ ಸಮಯದಲ್ಲಿ ಒಳ್ಳೆಯ ಕೆಲಸ ಮಾಡಿದಾಗ ಮಾತ್ರ ಸಾರ್ಥಕತೆಯ ಬದುಕು ಲಭಿಸುತ್ತದೆ. ಸಾರ್ವಜನಿಕ ಬದುಕಿನಲ್ಲಿ ಸವಾಲುಗಳನ್ನು ಧನಾತ್ಮಕವಾಗಿ ಎದುರಿಸುವುದು ಅಗತ್ಯ ಎಂದು ಆದಿಚುಂಚನಗಿರಿ ವಿಜಯನಗರ ಶಾಖಾ ಮಠದ ಸೌಮ್ಯನಾಥ ಸ್ವಾಮೀಜಿ ಹೇಳಿದರು.

ಇಲ್ಲಿನ ಕೆ.ಎಂ.ಎಚ್ ಕನ್ವೆಂಷನ್‌ ಸೆಂಟರ್‌ನಲ್ಲಿ ನಡೆದ ನಡೆದದ್ದೇ ದಾರಿ-ಹಿರಿಯ ರಾಜಕೀಯ ಮುತ್ಸದ್ದಿ ಕೆ.ಎಂ.ಹನುಮಂತರಾಯಪ್ಪ ಅವರ ಜೀವನ ಕಥಾನಕ ಬಿಡುಗಡೆ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿರಂತರವಾಗಿ ಸಾಧನೆ ಮಾಡಿದ ನಂತರ ಹಿಂದಿನ‌ ಬದುಕನ್ನು ಅವಲೋಕಿಸಿದಾಗ ಆ ಹಾದಿನ ಕಠಿಣತೆ ಅರ್ಥವಾಗುತ್ತದೆ. ಹನುಮಂತರಾಯಪ್ಪ 4ನೇ ತರಗತಿ ಓದಿ, ಕೂಲಿಗಾಗಿ ನೇಕಾರಿಕೆ ಆರಂಭಿಸಿ ನಿರಂತರ ಪರಿಶ್ರಮಿಯಾಗಿ ದುಡಿದು ಹಂತಹಂತವಾಗಿ ಬದುಕಿನ ವಿವಿಧ ವಲಯಗಳಲ್ಲಿ ತಮ್ಮ ವ್ಯಕ್ತಿತ್ವವನ್ನು ಕಟ್ಟಿಕೊಂಡರು. ಹಳ್ಳಿಯಿಂದ ದಿಲ್ಲಿವರೆಗೆ ಬೆಳೆದು ಬಂದ ಅವರ ಸಾಧನೆಯ ಹಾದಿಯೇ ರೋಚಕ. ಯುವಜನತೆಗೆ ಅದೊಂದು ದೊಡ್ಡ ಮಾದರಿ ಎಂದರು.

ಶಾಸಕ ಧೀರಜ್ ಮುನಿರಾಜ್ ಮಾತನಾಡಿ, ಬಿಜೆಪಿಯ ನಿಷ್ಠ ಕಾರ್ಯಕರ್ತರಾಗಿ ಸಹಸ್ರಾರು ಯುವ ಕಾರ್ಯಕರ್ತರ ಸ್ಪೂರ್ತಿಯಾಗಿ ಹನುಮಂತರಾಯಪ್ಪ ಅವರು, ಕುಗ್ರಾಮದಲ್ಲಿ ಹುಟ್ಟಿ ಕೇಂದ್ರ ರೇಷ್ಮೆ ಮಂಡಲಿಯಂತಹ ಪ್ರತಿಷ್ಠಿತ ಸಂಸ್ಥೆಯ ಅಧ್ಯಕ್ಷರಾಗಿ ಬೆಳೆದವರು. ಪಕ್ಷನಿಷ್ಠೆ, ಸಂಘಟನಾತ್ಮಕ ಚಟುವಟಿಕೆಗಳು ಹಾಗೂ ಸೈದ್ಧಾಂತಿಕ ಬದ್ದತೆ ಅವರನ್ನು ದೊಡ್ಡ ವ್ಯಕ್ತಿಯಾಗಿಸಿವೆ. ಕಾಂಗ್ರೆಸ್‌ ಪ್ರಬಲವಾಗಿದ್ದ ವೇಳೆಯೇ ಎರಡು ಬಾರಿ ದೊಡ್ಡಬಳ್ಳಾಪುರದಲ್ಲಿ ಬಿಜೆಪಿಯನ್ನು ನಗರಸಭೆಯಲ್ಲಿ ಅಧಿಕಾರಕ್ಕೆ ತಂದು, ಅಧ್ಯಕ್ಷರಾದ ಕೀರ್ತಿ ಅವರಿಗೆ ಸಲ್ಲುತ್ತದೆ. ಅಟಲ್‌ ಬಿಹಾರಿ ವಾಜಪೇಯಿ, ಎಲ್.ಕೆ.ಆಡ್ವಾಣಿ ಸೇರಿದಂತೆ ಉನ್ನತ ನಾಯಕರ ಸಂಪರ್ಕದಲ್ಲಿದ್ದವರು ಹನುಮಂತರಾಯಪ್ಪ ಎಂದು ಬಣ್ಣಿಸಿದರು.

ಅಭಿನಂದನೆ ಸ್ವೀಕರಿಸಿದ ಹನುಮಂತರಾಯಪ್ಪ ಮಾತನಾಡಿ, ಇದೊಂದು ಅವಿಸ್ಮರಣೀಯ ಕಾರ್ಯಕ್ರಮವಾಗಿದೆ. ಕಳೆದ 40 ವರ್ಷಗಳ ಹಿಂದೆ ಸಾಮಾನ್ಯ ಮಗ್ಗದ ಕೂಲಿ ಕೆಲಸಕ್ಕೆ ಬಂದ ನಾನು, ಕೆಲಸದ ಮೂಲಕ ಬೆಳೆಸಿದ್ದೇನೆ. ಸಾಧನೆಯ ಹಂಬಲ ನನ್ನ ಬದುಕನ್ನು ಬದಲಿಸಿದೆ. ಹಲವು ರಂಗಗಳಲ್ಲಿ ಹಲವು ಹುದ್ದೆಗಳನ್ನು ಪ್ರಾಮಾಣಿಕವಾಗಿ ನಿಭಾಯಿಸಿದ್ದೇನೆ. ದೊಡ್ಡಬಳ್ಳಾಪುರದ ನಾಡಿಮಿಡಿತವನ್ನು ಅರಿತು ನಿರಂತರ ಪರಿಶ್ರಮದಿಂದ ಬೆಳೆದ ಜೀವನಗಾಥೆ ಸ್ಮರಣೀಯ ಎಂದರು.

ರಾಜ್ಯ ವಿಜ್ಞಾನ ತಂತ್ರಜ್ಞಾನ ಅಕಾಡೆಮಿಯ ನಿರ್ದೇಶಕ ಹುಲಿಕಲ್ ನಟರಾಜ್ ಮಾತನಾಡಿ, ರಾಷ್ಟ್ರ ಮಟ್ಟದಲ್ಲಿ ದೊಡ್ಡಬಳ್ಳಾಪುರದ ಹೆಸರನ್ನು ಪ್ರಜ್ವಲಿಸಿದ ಹನುಮಂತರಾಯಪ್ಪ ಅನೇಕ ಪುರಸ್ಕಾರಗಳಿಗೂ ಪಾತ್ರರಾದವರು ಎಂದರು.

ಇದೇ ವೇಳೆ ಮ.ಚಿ.ಕೃಷ್ಣ ಅವರು ಬರೆದ ವನಸುಮದೊಳೆನ್ನ ಮನ ಕುಣಿನಲಿದಾಡುತಿರೆ.. ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ತಪಸೀಹಳ್ಳಿಯ ದಿವ್ಯಜ್ಞಾನಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ವಿದ್ಯಾವಾಚಸ್ಪತಿ ಅರಳುಮಲ್ಲಿಗೆ ಪಾರ್ಥಸಾರಥಿ, ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್, ಮಾಜಿ ಶಾಸಕರಾದ ಗಂಟಿಗಾನಹಳ್ಖಿ ವಿ.ಕೃಷ್ಣಪ್ಪ, ಟಿ.ವೆಂಕಟರಮಣಯ್ಯ, ಪುರಸಭೆ ಮಾಜಿ ಉಪಾಧ್ಯಕ್ಷ ಡಿ.ವಿ.ನಾರಾಯಣಶರ್ಮ, ವಿಎಚ್‌ಪಿ ಮುಖಂಡ ಮಂಜುನಾಥ್, ನಯನ ದೀಕ್ಷಾ ರತ್ನ ಪುರಸ್ಕೃತ ಡಾ ವಿಠ್ಠಲ್‌ ನಾಯಕ್, ಡಾ ಟಿ ಹೆಚ್ ಆಂಜಿನಪ್ಪ, ನಗರಸಭೆ ಮಾಜಿ ಅಧ್ಯಕ್ಷ ತ.ನ.ಪ್ರಭುದೇವ್, ದಿವ್ಯ ಜ್ಞಾನ ಜ್ಯೋತಿ ರತ್ನ ಪರಶುರಾಮ್‌ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.