ಧಾರವಾಡ:
ದೇಶದಲ್ಲಿಯೇ ಕರ್ನಾಟಕವು ತಲಾ ಆದಾಯದಲ್ಲಿ ಮುಂಚೂಣಿಯಲ್ಲಿದೆ. ಆದರೆ, ಶ್ರೀಮಂತರು ಹೆಚ್ಚು ಶ್ರೀಮಂತರಾಗುತ್ತಿದ್ದಾರೆ, ಬಡ ಮತ್ತು ಕೆಳಮಧ್ಯಮ ವರ್ಗದವರ ಸ್ಥಿತಿ ಸವಾಲಿನಿಂದ ಕೂಡಿದೆ ಎಂದು ಕಾರ್ಮಿಕ ಇಲಾಖೆ ಸಚಿವ ಸಂತೋಷ ಲಾಡ್ ಹೇಳಿದರು.80ನೇ ಸ್ವಾತಂತ್ರ್ಯೋತ್ಸವ ನೆರವೇರಿಸಿದ ಆನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಶೇ. 1ರಷ್ಟು ಜನರಲ್ಲಿ ಶೇ. 40ರಷ್ಟು ಸಂಪತ್ತು ಸಂಗ್ರಹವಾಗಿದೆ. ಇಂತಹ ವಾಸ್ತವ ಸ್ಥಿತಿಯಲ್ಲಿ, ನಮ್ಮ ಸರ್ಕಾರದ ಗ್ಯಾರಂಟಿ ಹಾಗೂ ಕಲ್ಯಾಣ ಯೋಜನೆಗಳು ಬಡವರ ಹಾಗೂ ಶೋಷಿತರ ಕೈಗೆ ನೇರವಾಗಿ ತಲುಪಿ ಅವರಿಗೆ ಆರ್ಥಿಕ ಭದ್ರತೆ ನೀಡುತ್ತಿವೆ ಎಂದರು.
ಕಲಘಟಗಿ ಸೇರಿದಂತೆ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳೆ ವಿಮೆ ಹಣ ಸಕಾಲಕ್ಕೆ ತಲುಪದಿರುವ ಹಾಗೂ ಖಾಸಗಿ ಕಂಪನಿಗಳ ಲೋಪ-ದೋಷಗಳ ಕುರಿತು ಮಾಧ್ಯಮದವರು ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಸಚಿವರು, ಈ ಬಗ್ಗೆ ಈಗಾಗಲೇ ಕೃಷಿ ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಲಾಗಿದೆ. ಎನ್‌ಡಿಆರ್‌ಎಫ್ ನಿಯಮಾವಳಿ, ಕ್ರಾಪ್ ಕಟಿಂಗ್ ಮಾದರಿ ಮತ್ತು ತಾಂತ್ರಿಕ ಸಾಫ್ಟ್‌ವೇರ್ ಆಧಾರಿತ ಆಯ್ಕೆ ಪ್ರಕ್ರಿಯೆಯಿಂದ ಕೆಲವು ಸಮಸ್ಯೆಗಳು ಉದ್ಭವಿಸುತ್ತಿವೆ. ವ್ಯವಸ್ಥೆಯಲ್ಲಿ ಸೂಕ್ತ ಬದಲಾವಣೆ ತರಲು ಸರ್ಕಾರ ನಿರಂತರ ಪ್ರಯತ್ನ ನಡೆಸುತ್ತಿದೆ ಎಂದು ಹೇಳಿದರು.ಜಿಲ್ಲೆಯಲ್ಲಿ ಮಳೆ ಕೊರತೆ ಕಾರಣಕ್ಕೆ ಬೆಳೆ ಹಾನಿಯಾಗಿದ್ದು, ಈಗಾಗಲೇ ಸರ್ವೇ ಕಾರ್ಯ ನಡೆದಿದೆ. ಸೆಪ್ಟೆಂಬರ್ ಒಳಗಾಗಿ ವರದಿ ಸಿದ್ಧಪಡಿಸಿ, ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ನಿಯಮಾನುಸಾರ ವರದಿ ಸಲ್ಲಿಸುವ ಪ್ರಕ್ರಿಯೆ ಮುಕ್ತಾಯ ಹಂತದಲ್ಲಿದೆ. ರೈತರಿಗೆ ನ್ಯಾಯಯುತ ಪರಿಹಾರ ಒದಗಿಸಲು ಸರ್ಕಾರ ಬದ್ಧ ಎಂದರು.
ತಾಲೂಕಿನ ಯಾದವಾಡ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರರಿಗೆ ಪಿಂಚಣಿ ನಿಂತಿರುವ ಹಾಗೂ ನಿವೇಶನ ಸಿಗದಿರುವ ಕುರಿತು ವರದಿಯಾದ ತಕ್ಷಣ ಸ್ಪಂದಿಸಿದ ಸಚಿವರು, ಸಂಬಂಧಪಟ್ಟ ದಾಖಲೆಗಳು ಹಾಗೂ ಪಟ್ಟಿ ನೀಡಿದರೆ, ಖುದ್ದಾಗಿ ಅಧಿಕಾರಿಗಳೊಂದಿಗೆ ಮಾತನಾಡಿ ಈ ಸಮಸ್ಯೆಯನ್ನು ತಕ್ಷಣ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು.
75 ವರ್ಷಗಳ ಇತಿಹಾಸದಲ್ಲಿ ಖಾದಿ ಕೇಂದ್ರಕ್ಕೆ ಪ್ರಸ್ತುತ ಎದುರಾಗಿರುವ ಆರ್ಥಿಕ ಸಂಕಷ್ಟದ ಕುರಿತು ಮಾತನಾಡಿದ ಅವರು, ಕೇಂದ್ರ ಸರ್ಕಾರದ ನೀತಿ ಬದಲಾವಣೆಗಳಿಂದ ಖಾದಿ ಉದ್ಯಮಕ್ಕೆ ಹೊಡೆತ ಬಿದ್ದಿದೆ. ರಾಜ್ಯ ಸರ್ಕಾರದಿಂದ ಖಾದಿ ಸಂಸ್ಥೆಗಳಿಗೆ ಪ್ರೋತ್ಸಾಹ ಹಾಗೂ ಸಹಾಯಧನ ನೀಡುವ ಬಗ್ಗೆ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದರು.
ಹು-ಧಾ ಬಿಆರ್‌ಟಿಎಸ್ ಸಮಸ್ಯೆ ಮತ್ತು ಸವಾಲು ಬಗೆಹರಿಸಲು ನೂತನವಾಗಿ 5,000 ಹೊಸ ಬಸ್‌ಗಳು ಖರೀದಿಸುವ ಪ್ರಸ್ತಾವನೆ ಕೂಡ ಸರ್ಕಾರದ ಮುಂದಿದೆ. ಶೀಘ್ರದಲ್ಲೇ ಸಂಸದರು ಹಾಗೂ ಸಾರಿಗೆ ಸಚಿವರೊಂದಿಗೆ ಬಿಆರ್‌ಟಿಎಸ್ ಕುರಿತು ವಿಶೇಷ ಸಭೆ ನಡೆಸಿ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಲು ಕ್ರಮ ವಹಿಸುವುದಾಗಿ ಹೇಳಿದರು. ಸಿದ್ದು ಮುನಿಸಿಕೊಂಡಿಲ್ಲ:ನೂತನ ಮುಖ್ಯಮಂತ್ರಿಗಳ ನಾಯಕತ್ವದಲ್ಲಿ ಸರ್ಕಾರವು ಹಲವು ಹೊಸ ಕಾರ್ಯಕ್ರಮ ರೂಪಿಸುತ್ತಿದೆ. ಅವುಗಳನ್ನು ಯಶಸ್ವಿಯಾಗಿ ಸಾರ್ವಜನಿಕರಿಗೆ ತಲುಪಿಸಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯ ಜನಪ್ರಿಯ ಯೋಜನೆಗಳನ್ನೂ ಮುಂದುವರಿಸಿಕೊಂಡು ಹೋಗಲಾಗುತ್ತಿದೆಯೇ ಹೊರತು ಅವರು ಮುನಿಸಿಕೊಂಡಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಚಿವ ಜಮೀರ್ ಅಹಮದ್ ಬರೆದ ಪತ್ರ ಹಾಗೂ ಇತರ ವಿಷಯಗಳ ಬಗ್ಗೆ ಮಾಧ್ಯಮಗಳು ಪ್ರಶ್ನಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿ ಎಂದರು.