ರೇವಣ್ಣ ಸೆರೆಗೆ ಷಡ್ಯಂತ್ರ ಇಲ್ಲ: ಚೆಲುವ

| Published : May 07 2024, 01:05 AM IST

ಸಾರಾಂಶ

ಸಂತ್ರಸ್ತೆಯೇ ದೂರು ನೀಡಿರುವಾಗ ರಾಜಕೀಯ ಎಲ್ಲಿ ಬಂತು ಎಂಬುದಾಗಿ ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ಬೆಂಗಳೂರು

‘ಎಚ್.ಡಿ.ರೇವಣ್ಣ ಬಂಧನದ ವಿಚಾರದಲ್ಲಿ ಯಾವುದೇ ರಾಜಕೀಯ ಷಡ್ಯಂತ್ರ ಇಲ್ಲ. ಅದರ ಅವಶ್ಯಕತೆಯೂ ನಮಗೆ ಇಲ್ಲ. ರಾಜಕಾರಣ ಬೆರಸದೇ ಕಾನೂನುಬದ್ಧವಾಗಿ ತನಿಖೆ ನಡೆಯುತ್ತಿದೆ. ಸಂತ್ರಸ್ತೆಯೇ ದೂರು ನೀಡಿದ್ದಾರೆ. ಹೀಗಿದ್ದಾಗ ಅವರ ಮನೆಯವರೇ ಮುಖ್ಯಮಂತ್ರಿ ಆಗಿದ್ದರೂ ಇದನ್ನು ಎದುರಿಸಲೇಬೇಕಿತ್ತು’ ಎಂದು ಕೃಷಿ ಸಚಿವ ಎನ್‌. ಚೆಲುವರಾಯಸ್ವಾಮಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಆಗಲಿ, ಉಪಮುಖ್ಯಮಂತ್ರಿಯಾಗಲಿ ಅಥವಾ ನಾವಾಗಲಿ ಯಾರೂ ಈ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಿಲ್ಲ. ನ್ಯಾಯಾಲಯ ಹಾಗೂ ತನಿಖಾ ಸಂಸ್ಥೆಗಳ ನಡುವೆ ತನಿಖಾ ವಿಚಾರಗಳ ನಿರ್ಧಾರಗಳು ನಡೆಯುತ್ತಿವೆ. ಇಷ್ಟರ ಮಟ್ಟಿಗೆ ರಾಜಕೀಯ ಬೆರಸದೆ ತನಿಖೆ ನಡೆಯುತ್ತಿರುವುದು ನಾನು ಎಂದೂ ನೋಡಿಲ್ಲ ಎಂದರು.ಕೆ.ಆರ್‌. ನಗರ ಶಾಸಕರೇ ದೂರು ನೀಡಲು ಕುಮ್ಮಕ್ಕು ನೀಡಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಸಂತ್ರಸ್ತೆಯೇ ದೂರು ನೀಡಿರುವಾಗ ಬೇರೆಯವರ ಮೇಲೆ ಆರೋಪ ಮಾಡುವುದು ಏನಿದೆ? ಇದರಲ್ಲಿ ರಾಜಕೀಯ ಖಂಡಿತ ಇಲ್ಲ. ಅದರ ಅಗತ್ಯವೂ ನಮಗೆ ಇಲ್ಲ. ಅವರು ಮಾಜಿ ಪ್ರಧಾನಮಂತ್ರಿಗಳ ಮಗ ಹೀಗಾಗಿ ಬಂಧಿಸಿದಾಗ ಸಹಜವಾಗಿಯೇ ನೋವಾಗಿರುತ್ತದೆ. ಆದರೆ ಯಾರೇ ತಪ್ಪು ಮಾಡಿದರೂ ಕಾನೂನು ಎದುರಿಸಲೇಬೇಕು’ ಎಂದು ಹೇಳಿದರು.ಎಸ್‌ಐಟಿ ರಚನೆಯನ್ನು ಬಿಜೆಪಿಯವರೇ ಸ್ವಾಗತ ಮಾಡಿದ್ದಾರೆ. ಮಹಿಳಾ ಆಯೋಗ ನೀಡಿರುವ ದೂರಿನ ಆಧಾರದ ಮೇಲೆ ಎಸ್‌ಐಟಿ ರಚನೆಯಾಗಿದೆ. ಇದರಲ್ಲಿ ಹೆಚ್ಚು ಮಾತನಾಡದೆ ಕಾನೂನನ್ನು ಗೌರವಿಸೋಣ ಎಂದರು.