ಸಾರಾಂಶ
ಚಾಮರಾಜನಗರ ಸಾರಿಗೆ ನಿಗಮದಲ್ಲಿ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಸಮಿತಿಯ ಅಧ್ಯಕ್ಷ ಹೊಂಗನೂರು ಚಂದ್ರು ಅವರನ್ನು ನಿಗಮದ ಅಧಿಕಾರಿಗಳು ಹಾಗೂ ನೌಕರರು ಸನ್ಮಾನಿಸಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಐದು ಗ್ಯಾರಂಟಿ ಯೋಜನೆಗಳ ಸದ್ಬಳಕೆಯಲ್ಲಿ ಸಾರಿಗೆ ನಿಗಮಕ್ಕೆ ಸೇರಿದ ಶಕ್ತಿ ಯೋಜನೆಯನ್ನು ನಮ್ಮ ಜಿಲ್ಲೆಯ ಮಹಿಳೆಯರು ಸದ್ಬಳಕೆ ಮಾಡಿಕೊಂಡಿದ್ದು, ಪ್ರಥಮ ಸ್ಥಾನದಲ್ಲಿದ್ದಾರೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಸಮಿತಿಯ ಅಧ್ಯಕ್ಷ ಹೊಂಗನೂರು ಚಂದ್ರು ತಿಳಿಸಿದರು. ನಗರದ ಸಾರಿಗೆ ಡಿಪೋನಲ್ಲಿ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ನಿಗಮದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಜಾತ್ಯಾತೀತ ಹಾಗೂ ಧರ್ಮಾತೀತವಾಗಿ ಬಡವ ಬಲ್ಲಿದ ಎಂಬ ಬೇಧವಿಲ್ಲದೇ ಎಲ್ಲಾ ವರ್ಗದ ಮಹಿಳೆಯರಿಗೆ ಶಕ್ತಿ ಯೋಜನೆ ಅನುಷ್ಠಾನವಾಗಿದೆ. ಕುಟುಂಬದ ಮಹಿಳೆಯರು ಸಹ ಇದನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಕಳೆದ ವರ್ಷ ನಮ್ಮ ಜಿಲ್ಲೆ ನಿಗಮ ೫೦ ಕೋಟಿ ರು.ಗಳ ಲಾಭ ಗಳಿಸಿತ್ತು. ಈಗ ಕಳೆದ ೮ ತಿಂಗಳ ಅವಧಿಯಲ್ಲಿಯೇ ೨೩ ಕೋಟಿ ರು.ಗಳನ್ನುಗಳಿಸಿದೆ. ಸರ್ಕಾರ ಜಾರಿ ಮಾಡಿರುವ ಶಕ್ತಿ ಯೋಜನೆ ಅನುಷ್ಠಾನ ಮಾಡುವಲ್ಲಿ ಚಾಲಕರು, ನಿರ್ವಾಹಕರು ಹಾಗೂ ನಿಗಮದ ಅಧಿಕಾರಿಗಳ ಪರಿಶ್ರಮ ಬಹಳಷ್ಟಿದೆ. ಗ್ಯಾರಂಟಿ ಯೋಜನೆಯ ಸಮಿತಿಯ ಅಧ್ಯಕ್ಷನಾಗಿ ಅವರೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ನಮ್ಮ ಸರ್ಕಾರದ ಯೋಜನೆಯನ್ನು ಪ್ರತಿ ಮಹಿಳೆಯರಿಗೆ ತಲುಪಿಸುವಲ್ಲಿ ನಿಮ್ಮ ಶ್ರಮ, ಸಹನೆ ತಾಳ್ಮೆ ಬಹಳ ಮುಖ್ಯವಾಗಿದೆ ಎಂದರು. ಶಕ್ತಿ ಯೋಜನೆ ಜಾರಿಯಾದ ಬಳಿಕ ಸಾರಿಗೆ ನಿಗಮದ ನೌಕರರಿಗೆ ಒತ್ತಡ ಜಾಸ್ತಿಯಾಗಿದೆ. ಅದಾಗ್ಯೂ ಸಹ ನೌಕರರು ಒತ್ತಡದ ನಡುವೆಯು ಕೆಲಸ ನಿರ್ವಹಿಸಿ, ಮಹಿಳೆಯರನ್ನು ಸುರಕ್ಷಿತವಾಗಿ ಅವರು ಕೇಳಿದ ಸ್ಥಳಗಳಿಗೆ ತಲುಪಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಿಗಮದ ನೌಕರರಿಗೂ ಒಳ್ಳೆಯ ದಿನಗಳು ಬರಲಿವೆ ಎಂದು ಹೊಂಗನೂರು ಚಂದ್ರು ವಿಶ್ವಾಸದ ಮಾತುಗಳನ್ನಾಡಿದರು. ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಅಶೋಕ್ ಕುಮಾರ್ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಗೂ ಆದರ್ಶವಾಗಿ ಬದುಕುವ ರೀತಿಯನ್ನು ಎಳೆ ಎಳೆಯಾಗಿ ವಿವರಿಸಿರುವ ಮಹಾನ್ ಗ್ರಂಥ ಆದಿಕವಿ ವಾಲ್ಮೀಕಿ ಅವರು ಬರೆದಿರುವ ರಾಮಾಯಣ, ಸಂವಿಧಾನ ಆಶಯಗಳನ್ನು ಅಂದಿನ ರಾಮಾಯಣ ಗ್ರಂಥದಲ್ಲೂ ಕಾಣಬಹುದು. ಅಂತಹ ರಾಮಾಯಣವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಬಂಗಾರನಾಯಕ, ಘಟಕ ವ್ಯವಸ್ಥಾಪಕ ಕುಮಾರ್ ನಾಯಕ್, ಸಾರಿಗೆ ನೌಕರರ ಸಂಘದ ಅಧ್ಯಕ್ಷ ಕೆಲ್ಲಂಬಳ್ಳಿ ನಾಗರಾಜು, ಮಹದೇವು, ಹೊಂಗನೂರು ಸಿದ್ದಲಿಂಗಸ್ವಾಮಿ, ಜಗದೀಶ್, ಕಿರಣ್, ಎಂ.ಸಿ.ಸಿದ್ದರಾಜು, ನಟರಾಜು, ಜಗದೀಶ್, ಕುಮಾರಸ್ವಾಮಿ, ಸೋಮಣ್ಣ, ರಂಗಸ್ವಾಮಿ, ಅರಸ್, ಇಲಾಖೆಯ ಅಧಿಕಾರಿಗಳ ನೌಕರರು ಇತರರು ಇದ್ದರು.