ಚಾಮರಾಜನಗರ ದಸರಾ ಆಚರಣೆ ಶ್ಲಾಘನೀಯ

| Published : Sep 24 2025, 01:00 AM IST

ಸಾರಾಂಶ

ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾವು ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ 9 ದಿನಗಳವರಗೆ ಹಮ್ಮಿಕೊಂಡಿರುವ ಚಾಮರಾಜನಗರ ದಸರಾ ಮಹೋತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ ದೊರೆಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾವು ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ 9 ದಿನಗಳವರಗೆ ಹಮ್ಮಿಕೊಂಡಿರುವ ಚಾಮರಾಜನಗರ ದಸರಾ ಮಹೋತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ ದೊರೆಯಿತು.

ಜಾನಪದ ವಿದ್ವಾಂಸ ದೊಡ್ಡಗವಿಬಸವಪ್ಪ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ರಾಜ್ಯ ಸರ್ಕಾರ ಚಾಮರಾಜನಗರ ದಸರಾ ಆಚರಣೆ ಮಾಡಬೇಕಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅನುದಾನ ಕೊಡದಿದ್ದರೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅಥವಾ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಾದರೂ ಮಾಡಬಹುದಿತ್ತು. ಅದು ಆಗಲಿಲ್ಲ. ಚಾಮರಾಜನಗರ ದಸರಾ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ವತಿಯಿಂದ ಚಾಮರಾಜನಗರ ದಸರಾ ಆಚರಣೆ ಮಾಡುತ್ತಿರುವುದು ಒಳ್ಳೆಯ ಕೆಲಸವಾಗಿದೆ ಎಂದರು.ರಂಗಕರ್ಮಿ ಕೆ.ವೆಂಕಟರಾಜು ಮಾತನಾಡಿ, ಅಖಿಲ ಕರ್ನಾಟಕ ಕನ್ನಡ ಮಹಾಸಭಾ 9 ದಿನಗಳ ಕಾಲ ಕಾರ್ಯಕ್ರಮ ಮಾಡುವುದು ಸುಲಭದ ಕೆಲಸವಲ್ಲ. ನಾಡಹಬ್ಬ ಮೈಸೂರು ದಸರಾ ಜನಸಾಮಾನ್ಯರ ಹಬ್ಬವಾಗಿದೆ. ಕಲಾವಿದರಿಂದ ಈ ಕಾರ್ಯಕ್ರಮ ನಡೆಯುತಿರುವುದು ಒಂದು ವಿಶೇಷವಾಗಿದೆ. ಮುಂದಿನ ವರ್ಷಕ್ಕೆ ಚಾಮರಾಜೇಶ್ವರ ದೇವಾಲಯ ನಿರ್ಮಾಣಗೊಂಡು 200 ವರ್ಷ ಪೂರ್ಣ ಆಗುತ್ತದೆ. ಆಗ ಉತ್ತಮವಾದ ಕಾರ್ಯಕ್ರಮ ಮಾಡಬೇಕಾದ ಜವಾಬ್ದಾರಿ ಇದೆ ಎಂದರು.

ದಲಿತ ಮಹಾಸಭಾದ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ ಪಾಪು ಮಾತನಾಡಿ, ಜಿಲ್ಲೆಯ ಕಲಾವಿದರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಚಾಮರಾಜನಗರ ದಸರಾ ಆಚರಣೆ ಮಾಡಬೇಕು ಎಂದು ಸಚಿವ ಎಚ್.ಸಿ.ಮಹದೇವಪ್ಪ ಅವರ ಜೊತೆಯಲ್ಲಿ ಮಾತನಾಡಿದಾಗ ಸದ್ಯದಲ್ಲೇ ಶ್ರೀ ಮಂಟೇಸ್ವಾಮಿ ಉತ್ಸವ ಆಚರಣೆ ಮಾಡುತ್ತೇವೆ. ಅದಕ್ಕೆ ₹5 ಕೋಟಿ ಕೊಡುತ್ತೇವೆ ಎಂದು ಹೇಳಿದಾಗ ಮುಖ್ಯಮಂತ್ರಿ ಗಳ ಜೊತೆಯಲ್ಲಿ ಮಾತನಾಡಿ ಚಾಮರಾಜ ದಸರಾ ಮಹೋತ್ಸವಕ್ಕೆ ₹2 ಕೋಟಿ ಕೊಡಿಸಿ 3 ಕೋಟಿಯನ್ನು ಮಂಟೇಸ್ವಾಮಿ ಉತ್ಸವ ಆಚರಣೆ ಕೊಡುವಂತೆ ಹೇಳಿದ್ದೇ ಎಂದರು.

ಕನ್ನಡ ಮಹಾಸಭಾದ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ರಾಜ್ಯ ಸರ್ಕಾರ ಈ ಬಾರಿ ಚಾಮರಾಜನಗರ ದಸರಾ ಆಚರಣೆ ಮಾಡದ ಹಿನ್ನೆಲೆಯಲ್ಲಿ ನಮ್ಮ ಸಂಘಟನೆ ವತಿಯಿಂದ ಜಿಲ್ಲೆಯ ಕಲ್ಲಾವಿದರನ್ನು ಪ್ರೋತ್ಸಾಹಿಸುವ ಸಲುವಾಗಿ 9 ದಿನಗಳ ಕಾಲದವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

ಚಾಮರಾಜೇಶ್ವರಸ್ವಾಮಿ ನಾದಸ್ವರ ತಂಡದಿಂದ ನಾದಸ್ವರ ಕಾರ್ಯಕ್ರಮ, ರವಿಚಂದ್ರಪ್ರಸಾದ್ ಅವರಿಂದ ಕೊಂಬು ಕಹಳೆವಾದನ, ದೊಡ್ಡಗವಿಬಸಪ್ಪ ತಂಡದಿಂದ ಜನಪದ ಗೀತೆಗಳ ಗಾಯನ, ಶಾರದಭಜನಾ ತಂಡದಿಂದ ಭಜನೆ, ಕಾಳಿಕಾಂಬ ಭಜನಾ ಮಂಡಳಿಯಿಂದ ಭಜನೆ, ಅಕ್ಷತಾಜೈನ್ ತಂಡದಿಂದ ಭರತನಾಟ್ಯ, ಅಪ್ಪ ಮೆಲೋಡಿನ್ ತಂಡದಿಂದ ಚಲನಚಿತ್ರ ಗೀತೆ ಗಾಯನ ನಡೆಯಿತು.

ಕಾರ್ಯಕ್ರಮದಲ್ಲಿ ನಗರಸಭಾ ಮಾಜಿ ಅಧ್ಯಕ್ಷ ಸುರೇಶ್‌ ನಾಯಕ, ಉದ್ಯಮಿ ಶ್ರೀನಿಧಿ ಕುದರ್, ಕಲಾವಿದರಾದ ಘಟಂಕೃಷ್ಣ, ಜ.ಸುರೇಶ್‌ನಾಗ್, ಬಂಗಾರು, ನಟರಾಜು, ಉಮ್ಮತ್ತೂರು ಬಸವರಾಜು, ಚಂದ್ರು. ಮಾಜಿ ಸದಸ್ಯ ಗಣೇಶ್‌ ದೀಕ್ಷಿತ್, ಚಾ.ವೆಂ.ರಾಜ್‌ ಗೋಪಾಲ್, ಮಹೇಶ್‌ಗೌಡ, ಪಣ್ಯದಹುಂಡಿ ರಾಜು, ಜಗದೀಶ್, ಹೊನ್ನಮ್ಮ, ಚಿನ್ನಮ್ಮ, ಮಂಗಲದ ಶಿವಣ್ಣ, ಮಲ್ಲಣ್ಣ ಇತರರು ಹಾಜರಿದ್ದರು.